ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳು ಶೇ 50ರಷ್ಟು ಖಾಲಿ

ವಸತಿ ಶಾಲೆಗಳತ್ತ ಪೋಷಕರ ಚಿತ್ತ, ಪ್ರತಿ ವರ್ಷ 4 ಸಾವಿರಕ್ಕೂ ಹೆಚ್ಚು ಅರ್ಜಿ, ದೊರೆಯದ ಸೀಟು
Last Updated 4 ಅಕ್ಟೋಬರ್ 2021, 5:59 IST
ಅಕ್ಷರ ಗಾತ್ರ

ಮಂಡ್ಯ: ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿದ್ದು ಶೇ 50ರಷ್ಟು ಖಾಲಿ ಉಳಿದಿವೆ. ಆದರೆ ಹಿಂದುಳಿದ ವರ್ಗಗಳ ಇಲಾಖೆ ಹಾಸ್ಟೆಲ್‌, ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದ್ದು ಹೆಚ್ಚು ಮಕ್ಕಳು ಅಲ್ಲಿಗೆ ದಾಖಲಾಗುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಅಡಿ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ 67 ವಸತಿನಿಲಯಗಳಿದ್ದು ಮಂಡ್ಯ ನಗರದ ಹಾಸ್ಟೆಲ್‌ಗಳನ್ನು ಹೊರತುಪಡಿಸಿ ಬೇರೆಲ್ಲೂ ಭರ್ತಿಯಾಗಿಲ್ಲ, ಶೇ 50ರಷ್ಟು ಸೀಟುಗಳಷ್ಟೇ ಭರ್ತಿಯಾಗಿವೆ. ಆದರೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಅಡಿ 109 ವಿದ್ಯಾರ್ಥಿನಿಲಯಗಳಿದ್ದು ಎಲ್ಲವೂ ಭರ್ತಿಯಾಗಿವೆ, ಜೊತೆಗೆ ಅವುಗಳ ಬೇಡಿಕೆಯೂ ದಿನೇದಿನೇ ಹೆಚ್ಚಾಗುತ್ತಿದೆ. ಹಾಸ್ಟೆಲ್‌ ಸೀಟ್‌ ಸಿಗದೆ ನಿರಾಸೆ ಅನುಭವಿಸುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಜಿಲ್ಲೆಯಲ್ಲಿ ವಸತಿ ನಿಲಯಗಳಿಗಿಂತಲೂ ವಸತಿ ಶಾಲೆಯಲ್ಲಿ ಓದಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ವಸತಿ ಶಾಲೆ ಪ್ರವೇಶಕ್ಕಾಗಿ ಜಿಲ್ಲೆಯ 4 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರರ್ತಿವರ್ಷ ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆದರೆ ಶಾಲೆಗಳ ಸಂಖ್ಯೆ ಕೇವಲ 37 ಇದ್ದು ಸಾವಿರಾರು ಮಕ್ಕಳು ಸೀಟ್‌ ದೊರೆಯದೇ ನಿರಾಸೆ ಅನುಭವಿಸುತ್ತಿದ್ದಾರೆ.

ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಇಂದಿರಾಗಾಂಧಿ, ಏಕಲವ್ಯ ವಸತಿ ಶಾಲೆಗಳ ದಾಖಲಾತಿಗೆ ವಿಪರೀತ ಬೇಡಿಕೆ ಇದೆ. ಸಮಾಜ ಕಲ್ಯಾಣ ಇಲಾಖೆ ಅಡಿ 26 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, ಒಂದು ಪಿಯು ಕಾಲೇಜು (ತಂಗಳಗೆರೆ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ 11 ಮೊರಾರ್ಜಿ ದೇಸಾಯಿ ವಸತಿ ಶಾಲೆ, 1 ಪಿಯು ಕಾಲೇಜು (ಸಂತೆಕಸಲಗೆರೆ) ಇವೆ.

ಇಷ್ಟು ವಸತಿ ಶಾಲೆಗಳಿಂದ ದೊರಕುವ ಒಟ್ಟು ಸೀಟ್‌ 1,850 ಮಾತ್ರ. 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಕಾರಣ ಇಷ್ಟಪಟ್ಟವರೆಲ್ಲರಿಗೂ ವಸತಿ ಶಾಲೆಯಲ್ಲಿ ಕಲಿಯುವ ಅವಕಾಶ ದೊರೆಯುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ವಸತಿ ಶಾಲೆಗಳಲ್ಲಿ ಶೇ 75ರಷ್ಟು ಸೀಟುಗಳನ್ನು ಎಸ್‌.ಟಿ, ಎಸ್‌.ಟಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೀಸಲಿಡಬೇಕು. ಸಾಮಾನ್ಯವಾಗಿ ಎಸ್‌ಸಿ, ಎಸ್‌ಟಿ ಸಮುದಾಯದ ಎಲ್ಲಾ ಮಕ್ಕಳಿಗೆ ಸೀಟು ದೊರೆಯುತ್ತದೆ. ಆದರೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿ ಬರುವ ವಸತಿ ನಿಲಯಗಳು ಸದಾ ಭರ್ತಿಯಾಗುತ್ತಿದ್ದು ಬೇಡಿಕೆ ಹೆಚ್ಚುತ್ತಲೇ ಇದೆ.

‘ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಕಾರಣ ಮಕ್ಕಳನ್ನು ಅಲ್ಲಿಗೇ ಸೇರಿಸಲು ಪೋಷಕರು ಆಸಕ್ತಿ ತೋರಿಸುತ್ತಿದ್ದಾರೆ. ಒಮ್ಮೆ ಸೇರಿಸಿದರೆ ಎಸ್‌ಎಸ್‌ಎಸ್‌ಸಿವರೆಗೂ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಹೀಗಾಗಿ ವಸತಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ’ ಎಂದು ನಿವೃತ್ತ ಶಿಕ್ಷಕ ರಾಜೇಗೌಡ ಹೇಳಿದರು.

2 ವರ್ಷ ವ್ಯತ್ಯಯ: ಕೋವಿಡ್‌ ಆರಂಭವಾದ ನಂತರ ಕಳೆದ 2 ವರ್ಷಗಳಿಂದ ಯಾವ ಹಾಸ್ಟೆಲ್‌ಗಳೂ ಸಮರ್ಪಕವಾಗಿ ನಡೆದಿಲ್ಲ. ಮಕ್ಕಳ ದಾಖಲಾತಿಯಲ್ಲೂ ವ್ಯತ್ಯಯ ಉಂಟಾಗಿದೆ. ಬಹುತೇಕ ವಸತಿ ನಿಲಯಗಳನ್ನು ಕೋವಿಡ್‌ ಕೇರ್‌ ಕೇಂದ್ರಗಳನ್ನಾಗಿ ರೂಪಿಸಲಾಗಿತ್ತು.

‘ಬಹುತೇಕ ಹಾಸ್ಟೆಲ್‌ಗಳಲ್ಲಿ ಮೂಲ ಸೌಲಭ್ಯದ ಕೊರತೆ ಇದೆ. ಅಲ್ಲಿ ನೀಡುವ ಊಟದ ಬಗ್ಗೆ ಮಕ್ಕಳು ಸದಾ ದೂರು ನೀಡುತ್ತಿದ್ದಾರೆ. ಆದರೆ ಮೊರಾರ್ಜಿ ದೇಸಾಯಿಯಂತಹ ವಸತಿಶಾಲೆಗಳಲ್ಲಿ ದೂರುಗಳಿಲ್ಲ. ಹೀಗಾಗಿ ಸರ್ಕಾರ ಹೆಚ್ಚೆಚ್ಚು ವಸತಿ ಶಾಲೆಗಳನ್ನು ನಿರ್ಮಿಸಬೇಕು’ ಎಂದು ಪ್ರಾಧ್ಯಾಪಕ ಚಂದ್ರೇಗೌಡ ಹೇಳುತ್ತಾರೆ.

2 ಅಲ್ಪಸಂಖ್ಯಾತರ ವಸತಿ ನಿಲಯ: ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಅಡಿ ಜಿಲ್ಲೆಯಲ್ಲಿ 2 ವಸತಿ ನಿಲಯಗಳಿವೆ. ಅದರಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಇನ್ನೊಂದಕ್ಕೆ ಸ್ವಂತ ಕಟ್ಟಡವಿದೆ. ಇವೆರಡು ಹಾಸ್ಟೆಲ್‌ಗಳಿಗೆ ಸದಾ ಬೇಡಿಕೆ ಇರುತ್ತದೆ. ರಾಜ್ಯದ ವಿವಿಧೆಡೆಯಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ.

‘ಕೆರೆಯಂಗಳದಲ್ಲಿರುವ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿದೆ. ಇನ್ನೊಂದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಆದರೂ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಹೇಳಿದರು.

ಜನಸಂಖ್ಯೆ ಕಡಿಮೆ: ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ಜನಸಂಖ್ಯೆಯೇ ಕಡಿಮೆ ಇರುವ ಕಾರಣ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಸದ್ಯ 67ಹಾಸ್ಟೆಲ್‌, 26 ವಸತಿ ಶಾಲೆಗಳಲ್ಲಿ ಒಟ್ಟು 2,700 ವಿದ್ಯಾರ್ಥಿಗಳಿದ್ದಾರೆ.ಇನ್ನೂ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಅವಕಾಶವಿದೆ.

‘ಜಿಲ್ಲೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ 2,65,625 ಜನಸಂಖ್ಯೆ ಇದೆ. ಜನಸಂಖ್ಯೆಯೇ ಕಡಿಮೆ ಇರುವ ಕಾರಣ ವಸತಿ ನಿಲಯ, ವಸತಿ ಶಾಲೆಗಳಿದ್ದರೂ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ನಾವು ಸಾಕಷ್ಟು ಪ್ರಚಾರ ಮಾಡಿ ವಿದ್ಯಾರ್ಥಿಗಳನ್ನು ದಾಖಲು ಮಾಡಿದ್ದೇವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಂಗೇಗೌಡ ಹೇಳಿದರು.

ಸೀಟ್‌ ಸಿಗದವರಿಗೆ ‘ವಿದ್ಯಾಸಿರಿ’: ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಸೀಟ್‌ ದೊರೆಯದವರಿಗೆ 3 ವರ್ಷ ವಿದ್ಯಾಸಿರಿ ಸೌಲಭ್ಯ ಒದಗಿಸಲಾಗುತ್ತಿದೆ. ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಿಯೂ ಸೀಟ್‌ ದೊರೆಯದಿದ್ದರೆ ಧನಸಹಾಯ ನೀಡಲಾಗುತ್ತಿದೆ.

‘ವಿದ್ಯಾಸಿರಿ ಯೋಜನೆಯಡಿ 3 ವರ್ಷದವರೆಗೆ ಪ್ರತಿ ತಿಂಗಳು ತಲಾ ₹1,500 ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ವರ್ಷ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಜನೆಯ ಲಾಭ ಪಡೆದಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಜಿಲ್ಲಾ ಅಧಿಕಾರಿ ಸೋಮಶೇಖರ್‌ ತಿಳಿಸಿದರು.

ಇಂಗ್ಲಿಷ್‌ ಮಾಧ್ಯಮದ ವ್ಯಾಮೋಹ: ಸದ್ಯ ಈಗಿರುವ ಹಾಗೂ ಹೊಸದಾಗಿ ಆರಂಭವಾಗುತ್ತಿರುವ ವಸತಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲೇ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದ ಪೋಷಕರು ಮಕ್ಕಳನ್ನು ವಸತಿ ಶಾಲೆಗೆ ಸೇರಿಸುತ್ತಿದ್ದಾರೆ.

‘ಖಾಸಗಿ ಇಂಗ್ಲಿಷ್‌ ಶಾಲೆಗೆ ದಾಖಲು ಮಾಡಲು ಲಕ್ಷಾಂತರ ರೂಪಾಯಿ ಶುಲ್ಕ ತೆರಬೇಕು. ಆದರೆ ವಸತಿ ಶಾಲೆಗಳಲ್ಲಿ ಉಚಿತವಾಗಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ದೊರೆಯುತ್ತಿದ್ದು ಆ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ’ ಎಂದು ಪೋಷಕ ರಮೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT