ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ್ರೋಹದ ಹೇಳಿಕೆ ನೀಡಿದ ಸುಮಲತಾ: ರವೀಂದ್ರ ಶ್ರೀಕಂಠಯ್ಯ

Last Updated 6 ಜುಲೈ 2021, 1:52 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಅಣೆಕಟ್ಟೆ ಬಿರುಕುಬಿಟ್ಟಿದೆ ಎಂಬ ಸಂಸದೆ ಸುಮಲತಾ ಅವರ ಹೇಳಿಕೆ ದೇಶ ದ್ರೋಹದಷ್ಟೇ ದೊಡ್ಡ ಅಪರಾಧದ ಹೇಳಿಕೆ’ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆಮ್ಲ ಜನಕ ಘಟಕ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಕೆಆರ್‌ಎಸ್‌ ಅಣೆಕಟ್ಟೆ ರಾಷ್ಟ್ರದ ಆಸ್ತಿ. ವಾಸ್ತವ ಗೊತ್ತಿಲ್ಲದೆ ಸುಮಲತಾ ಏನೇನೋ ಮಾತನಾಡಿದ್ದಾರೆ. ಆ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಸುಮಲತಾ ಅವರು ಶಿಕ್ಷೆಗೆ ಗುರಿಯಾವುದು ಖಚಿತ ಎಂದರು.

ಸುಮಲತಾ ಅವರು ರೈತರನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ. ಇದು ಆತಂಕಕಾರಿ ವಿಷಯ. ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಇರುವುದಾದರೆ ನಿಲ್ಲಿಸಲಿ. ಮನಸ್ಸಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಸದ್ಯ ಸುಮಲತಾ ಅವರ ಹೇಳಿಕೆ ಜಿಲ್ಲೆಯಾದ್ಯಂತ ಅಪಹಾಸ್ಯದ ಸಂಗತಿಯಾಗಿದೆ. ಅವರು ಕೋವಿಡ್‌ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಸಂಸದರಾಗಿ ಏನೂ ಮಾಡದ ಅವರು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಚಲುವರಾಯಸ್ವಾಮಿ ಅವರಿಗೆ ನೈತಿಕತೆ ಇಲ್ಲ: ಜಿಲ್ಲೆಗೆ ಸಹಸ್ರಾರು ಕೋಟಿ ರೂಪಾಯಿ ಅನುದಾನ ನೀಡಿರುವ ಕುಮಾರಸ್ವಾಮಿ ಅವರನ್ನು ಜಿಲ್ಲೆಗೆ ಬರಬೇಡಿ ಎನ್ನಲು ಚಲುವರಾಯಸ್ವಾಮಿ ಅವರಿಗೆ ನೈತಿಕತೆ ಇದೆಯೆ? ಎಂದರು.

ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಲಿ. ಮನ್‌ಮುಲ್‌ನ ಈಗಿನ ಆಡಳಿತ ಮಂಡಳಿ ಹಾಲಿನ ಕಳ್ಳತನ ಪತ್ತೆ ಮಾಡಿದೆ. ಹೀಗಿರುವಾಗ ಈ ಮಂಡಳಿಯನ್ನು ಸೂಪರ್ ಸೀಡ್‌ ಮಾಡುವಂತೆ ಚೆಲುವರಾಸ್ವಾಮಿ ಒತ್ತಾ ಯಿಸುವುದರಲ್ಲಿ ಅರ್ಥವಿಲ್ಲ ಎಂದರು.

ಖಾಸಗೀಕರಣ ಬೇಡ: ಮೈಷುಗರ್‌ ಖಾಸಗೀಕರಣ ಮಾಡಲು ಜೆಡಿಎಸ್‌ ಪಕ್ಷದ ವಿರೋಧವಿದೆ. ‍ಪಿಎಸ್‌ಎಸ್‌ಕೆಯನ್ನು ಖಾಸಗೀಕರಣ ಮಾಡಿದ ಬಳಿಕ ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಷುಗರ್‌. ಖಾಸಗೀಕರಣ ಮಾಡಿದ್ದೇ ಆದರೆ ಸರ್ಕಾರದ ವಿರುದ್ಧ ಬೀದಿಗೆ ಇಳಿಯು ವುದು ಖಚಿತ ಎಂದು ಎಚ್ಚರಿಸಿದರು.

ಕೊರೊನಾ ಎರಡನೇ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆ ರಾಜ್ಯಮಟ್ಟದಲ್ಲಿ 5ನೇ ಸ್ಥಾನದಲ್ಲಿದೆ. ತಾಲ್ಲೂಕಿನಲ್ಲಿ ಆಮ್ಲಜನಕದ ಸಮಸ್ಯೆ ನೀಗಿಸಲು ಒಂದು ಲಕ್ಷ ಎಲ್‌ಪಿ ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪಿಸಲಾಗುತ್ತಿದೆ. ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿ ಈ ಘಟಕ ಸ್ಥಾಪಿಸಲು ಮುಂದೆ ಬಂದಿದೆ. ಅಗತ್ಯ ಬಿದ್ದರೆ ಈ ಘಟಕವನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಬಿತ್ತನೆ ಬೀಜ ವಿತರಣೆ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಜತೆ ಮಾತನಾಡಿದ್ದೇನೆ ಪ್ರತಿಕ್ರಿಯಿಸಿದರು.

ತಹಶೀಲ್ದಾರ್‌ ಎಂ.ವಿ.ರೂಪಾ, ತಾ.ಪಂ. ಇಒ ಭೈರಪ್ಪ, ಪುರಸಭೆ ಅಧ್ಯಕ್ಷೆ ನಿರ್ಮಲಾ, ಜಿ.ಪಂ. ಮಾಜಿ ಸದಸ್ಯ ಎ.ಆರ್‌. ಮರೀಗೌಡ, ಟಿಎಚ್‌ಒ ಡಾ.ವೆಂಕಟೇಶ್‌, ಡಾ.ಮಾರುತಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಾ.ಪ್ರಶಾಂತ್‌, ನಳಿನಾ, ಜೆ.ಆರ್‌. ಬಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT