ಬುಧವಾರ, ಜನವರಿ 19, 2022
18 °C
ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಸಾಥಿ, ಹಕ್ಕಿಗಳ ಧನಿಯೇ ಮಂಗಳವಾದ್ಯ

ಆದರ್ಶ ವಿವಾಹಕ್ಕೆ ಆಲದ ಮರವೇ ಸಾಕ್ಷಿ: ಮೈಸೂರಿನಲ್ಲಿ ಹೀಗೊಂದು ಮದುವೆ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮಂಡ್ಯ: ಮೈಸೂರಿನ ಎಲ್‌ಎಲ್‌ಎಂ ಪದವೀಧರೆ ಮೈತ್ರಿ, ಮಂಡ್ಯದ ಎಂ.ಟೆಕ್‌ ಪದವೀಧರ ಕಮಲೇಶ್‌ ಅವರ ವಿವಾಹಕ್ಕೆ 200 ವರ್ಷ ಹಳೆಯದಾದ ಆಲದ ಮರವೇ ಸಾಕ್ಷಿಯಾಯಿತು. ಜೊತೆಗೆ ಯುಗದ ಕವಿ ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಸಾಥಿಯಾಯಿತು.

ಶ್ರೀರಂಗಪಟ್ಟಣ ತಾಲ್ಲೂಕು ನೆಲೆಮನೆ ಗ್ರಾಮದಲ್ಲಿ ನಾಟಿ ಎತ್ತುಗಳ ಗಾಣದಿಂದ ಎಣ್ಣೆ ತೆಗೆದು ‘ಗ್ರ್ಯಾಸ್‌ ರೂಟ್‌’ ಬ್ರ್ಯಾಂಡ್‌ ರೂಪ ಕೊಟ್ಟಿರುವ ಕಮಲೇಶ್‌ ಅವರು ಮೊದಲಿನಿಂದಲೂ ಕುವೆಂಪು ಕಾವ್ಯದಿಂದ ಸ್ಫೂರ್ತಿ ಪಡೆದವರು. ನಗರದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉಪನ್ಯಾಸಕರೂ ಆಗಿದ್ದ ಅವರು ಸ್ವಾವಲಂಬನೆಯ ಬದುಕನ್ನು ಮೈಗೂಡಿಸಿಕೊಂಡು ಮಾದರಿಯಾದವರು. ಅವರು ಮರಿಸ್ವಾಮಿ– ವಿನೋದಾ ದಂಪತಿಯ ಪುತ್ರ.

‘ಮಾನವ ಹಕ್ಕುಗಳ ಕಾನೂನು’ ವಿಷಯದಲ್ಲಿ ಸ್ನಾತಕೋತ್ತರ ಕಾನೂನು ಪದವಿ ಪಡೆದಿರುವ ಮೈತ್ರಿ, ಪ್ರಭಾಕರ್‌– ಅಪರ್ಣಾ ದಂಪತಿಯ ಪುತ್ರಿ. ತಾಂತ್ರಿಕ ನೀತಿ ಹಾಗೂ ಕಾನೂನು ವಿಷಯದ ಪರಿಣತಿ ಇವರದು.

ಕುವೆಂಪು ಅವರ ಮಂತ್ರಮಾಂಗಲ್ಯ ಪರಿಕಲ್ಪನೆಯಡಿ ಇವರಿಬ್ಬರ ಸರಳ ವಿವಾಹ ನ.28ರಂದು ಮೈಸೂರು, ಟಿ.ನರಸೀಪುರ ರಸ್ತೆಯಲ್ಲಿರುವ ‘ಆಕ್ಸಿಜನ್‌ ಏಕರ್ಸ್‌’ ತೋಟದ ಮನೆಯಲ್ಲಿ ನೆರವೇರಿತು. ತೋಟದಲ್ಲಿರುವ ಹಳೆಯ ಆಲದ ಮರದಡಿಯೇ ಮದುವೆ ಮಂಟಪವಾಗಿತ್ತು, ಮರದಲ್ಲಿ ಆಶ್ರಯ ಪಡೆದಿದ್ದ ಹಕ್ಕಿ, ಪಕ್ಷಿಗಳ ಧನಿಯೇ ಮಂಗಳವಾದ್ಯವಾಗಿತ್ತು.

ಪೂರ್ಣಚಂದ್ರ ತೇಜಸ್ವಿ ಅವರ ಒಡನಾಡಿ ಶಾಂತಾ ಪ್ರಸಾದ್‌ ಅವರು ಮಂತ್ರ ಮಾಂಗಲ್ಯ ವಿವಾಹ ಸಂಹಿತೆ ಬೋಧಿಸುವ ಮೂಲಕ ಕಮಲೇಶ್‌– ಮೈತ್ರಿಯನ್ನು ಜನುಮದ ಜೋಡಿಯನ್ನಾಗಿಸಿದರು. ವಧು–ವರರ ಕುಟುಂಬ ಸದಸ್ಯರು, ಸ್ನೇಹಿತರು ಸೇರಿ 100 ಜನ ಮಾತ್ರ ವಿವಾಹದಲ್ಲಿ ಭಾಗಿಯಾಗಿದ್ದರು.

‘ನಾವು ನಿಂತ ಈ ನೆಲ, ಈ ಮರ ಮತ್ತು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ವಿವಾಹ ಬಂಧನಕ್ಕೆ ಒಳಗಾಗಿದ್ದೇವೆ’ ಎಂದು ಕಮಲೇಶ್‌–ಮೈತ್ರಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಮಿಠಾಯಿ ವಿತರಣೆ: ಈ ಸರಳ ಹಾಗೂ ವಿಶೇಷ ವಿವಾಹದಲ್ಲಿ ಭಾಗವಹಿಸಿದ್ದವರಿಗೆ ವಿಶೇಷ ಭೋಜನ ಸವಿಯುವ ಅವಕಾಶ ದೊರೆಯಿತು. ಅಕ್ಕಿ–ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ಹುರಳಿಕಾಳಿನ ಸಾಂಬಾರ್‌, ಹೋಳಿಗೆ ಎಲ್ಲರ ಮನಸೂರೆಗೊಂಡಿತು.

ಮಾನಸಿಕ ಅಂಗ ವೈಕಲ್ಯ ಅಭಿವೃದ್ಧಿ ಸಂಘ (ಎಡಬ್ಲ್ಯುಎಂಡಿ)ದ ವಿಶೇಷ ಮಕ್ಕಳ ತಾಯಂದಿರು ತಯಾರಿಸಿದ್ದ ಬ್ಯಾಗ್‌ನಲ್ಲಿ ಉಡುಗೊರೆ ವಿತರಣೆ ಮಾಡಲಾಯಿತು. ತಾಲ್ಲೂಕಿನ ಹೊಳಲು ಗ್ರಾಮದ ಸಾಕಮ್ಮ – ಮಂಜುಳಾ ಅವರು ರಾಸಾಯನಿಕ ಮುಕ್ತ ಬೆಲ್ಲ ಹಾಗೂ ಧಾನ್ಯಗಳಿಂದ ತಯಾರಿಸುವ ಮಿಠಾಯಿ (ಉಂಡೆ)ಯನ್ನು ಅತಿಥಿಗಳಿಗೆ ವಿತರಣೆ ಮಾಡಲಾಯಿತು. ಕೋವಿಡ್‌ ಕಾಲದಿಂದಲೂ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದ ಸಾಕಮ್ಮ– ಮಂಜಮ್ಮ ಅವರಿಗೂ ಈ ವಿವಾಹದಿಂದ ಕೊಂಚ ಸಹಾಯವಾಯಿತು.

ಜೊತೆಗೆ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಪುಸ್ತಕಗಳನ್ನೂ ವಿತರಣೆ ಮಾಡಲಾಯಿತು.

*********

ಕುವೆಂಪು, ತೇಜಸ್ವಿ ಅವರನ್ನು ಓದುತ್ತಾ ಬೆಳೆದ ನನಗೆ ಅವರ ಆಶಯದ ವಿವಾಹ ಮನಸ್ಸಿಗೆ ಹಿಡಿಸಿತ್ತು. ಅರ್ಥರಹಿತ ಆಚರಣೆ, ಅನಗತ್ಯ ಖರ್ಚು ರೇಜಿಗೆ ಹಿಡಿಸಿತ್ತು

–ಕಮಲೇಶ್‌, ವರ

****

ನನ್ನ ತಂದೆ–ತಾಯಿ ಕೂಡ ಸರಳವಾಗಿ ಮದುವೆಯಾಗಿದ್ದರು. ಅವರ ಸ್ನೇಹಯುತ ಬದುಕು, ಪುಸ್ತಕಗಳ ಒಡನಾಟ ನಮ್ಮ ಸರಳ ವಿವಾಹಕ್ಕೆ ಸ್ಫೂರ್ತಿಯಾಯಿತು

–ಮೈತ್ರಿ, ವಧು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು