ಮಂಡ್ಯ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರ ಆರಂಭವಾಗಲಿದ್ದು ಜಿಲ್ಲೆಯಾದ್ಯಂತ 20,716 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚು 157 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.
ಮಂಡ್ಯ ಉತ್ತರ, ದಕ್ಷಿಣ ಬ್ಲಾಕ್ ಸೇರಿದಂತೆ 8 ಶೈಕ್ಷಣಿಕ ಬ್ಲಾಕ್‌ನ 11,107 ಗಂಡು ಮಕ್ಕಳು, 9,609 ಹೆಣ್ಣು ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಇದರಲ್ಲಿ ಹೊಸ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ. ಕೋವಿಡ್ ಭಯದ ನಡುವೆ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಪರೀಕ್ಷೆ ಬೆರೆಯಲು ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ತಪಾಸಣೆ ನಡೆಸಲು ಆಶಾ ಕಾರ್ಯಕರ್ತೆಯರನ್ನು ನಿಯೋಜನೆ ಮಾಡಲಾಗಿದೆ.
ಪ್ರತಿ ಕೊಠಡಿಯಲ್ಲೂ 12 ವಿದ್ಯಾರ್ಥಿಗಳಷ್ಟೇ ಪರೀಕ್ಷೆ ಬರೆಯಲಿದ್ದಾರೆ. ನಡುವೆ 6 ಅಡಿ ಅಂತರದಲ್ಲಿ ವಿದ್ಯಾರ್ಥಿಗಳು ಕೂರಲಿದ್ದಾರೆ. ಪ್ರತಿ ಕೇಂದ್ರದಲ್ಲಿದ್ದು ಪ್ರತ್ಯೇಕ ಕೊಠಡಿಗಳನ್ನು ಸಿದ್ಧಗೊಳಿಸಲಾಗಿದ್ದು ರೋಗ ಲಕ್ಷಣ ಕಂಡುಬರುವ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪರೀಕ್ಷೆ ಬರೆಯಲಿದ್ದಾರೆ. ಮೊದಲ ದಿನ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿವೆ.
ಪರೀಕ್ಷೆ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಬೆಳಿಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಒಎಂಆರ್ ಕಾಗದದಲ್ಲಿ ಉತ್ತರಗಳನ್ನು ಗುರುತು ಹಾಕುವ ಮಾದರಿಯಲ್ಲಿ ಪರೀಕ್ಷೆ ನಡೆಯುತ್ತಿದ್ದು ಈಗಾಗಲೇ ವಿದ್ಯಾರ್ಥಿಗಳಿಗೆ ಹಲವು ಸುತ್ತಿನ ಅಣಕು ಪರೀಕ್ಷೆ ನಡೆಸಿ ಸಿದ್ಧಗೊಳಿಸಲಾಗಿದೆ. ನೇರಳೆ, ಹಳದಿ ಹಾಗೂ ಹಸಿರು ಬಟ್ಟದ ಒಎಂಆರ್ ಶೀಟ್ ನೀಡಲಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ತಾವು ಓದುತ್ತಿರುವ ಶಾಲೆಯಲ್ಲೇ ಪರೀಕ್ಷೆ ಬರೆಯಲಿದ್ದಾರೆ. ಬೇರೆ ಊರುಗಳಿಗೆ ಹೋಗುವ ಅವಶ್ಯಕತೆ ಇದ್ದರೆ ಮಕ್ಕಳು ಸಾರಿಗೆ ಸಂಸ್ಥೆ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.