ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧಗೊಳ್ಳದ ಚರಂಡಿ ನೀರು: ಕೆರೆ, ಕಾಲುವೆ ಕಲುಷಿತ

ಸಮರ್ಪಕವಾಗಿ ಕಾರ್ಯನಿರ್ವಹಿಸದ 2 ಕೊಳಚೆ ನೀರು ಶುದ್ಧೀಕರಣ ಘಟಕಗಳು, ಮೀನುಗಳ ಸಾವು
Last Updated 29 ಸೆಪ್ಟೆಂಬರ್ 2019, 20:04 IST
ಅಕ್ಷರ ಗಾತ್ರ

ಮಂಡ್ಯ: ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಕೊಳಚೆ ನೀರು ಶುದ್ಧೀಕರಣ ಘಟಕಗಳು, ನಗರದಲ್ಲಿ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ, ನೇರವಾಗಿ ನಾಲೆ, ಕೆರೆಗೆ ಹರಿಯುತ್ತಿರುವ ಚರಂಡಿ ನೀರು, ಕಲುಷಿತಗೊಳ್ಳುತ್ತಿರುವ ಸರಣಿ ಕೆರೆಗಳು, ಮೀನುಗಳ ಮಾರಣ ಹೋಮ...

ನಗರಸಭೆ ಹಾಗೂ ಜಲಮಂಡಳಿಯ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಉತ್ಪತ್ತಿ ಯಾಗುವ ಲಕ್ಷಾಂತರ ಲೀಟರ್‌ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಹರಿಯುತ್ತಿದೆ. ಕೊಳಚೆ ನೀರು ಶುದ್ಧೀಕರಣ ಮಾಡಲು ಯತ್ತಗದಹಳ್ಳಿ ರಸ್ತೆ, ಚಿಕ್ಕೇ ಗೌಡನ ದೊಡ್ಡಿಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸಲಾಗಿದೆ. ಯತ್ತಗದಹಳ್ಳಿ ರಸ್ತೆಯಲ್ಲಿರುವ ಘಟಕ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ತ್ಯಾಜ್ಯ ನೀರು ನೇರವಾಗಿ ಗುತ್ತಲು ಕೆರೆ ಸೇರುತ್ತಿದೆ. ಇದರಿಂದ ಕೆರೆಯ ಸರಣಿಯಲ್ಲಿ ಬರುವ ಹಲವು ಸಣ್ಣಪುಟ್ಟ ಕೆರೆ, ಕಟ್ಟೆಗಳಲ್ಲೂ ಕೊಳಚೆ ನೀರು ಸಂಗ್ರಹಗೊಂಡಿದೆ.

ಚಾಮುಂಡೇಶ್ವರಿ ನಗರ, ಮರೀ ಗೌಡ ಬಡಾವಣೆ, ಗಾಂಧಿನಗರ, ಸುಭಾಷ್‌ ನಗರ ಬಡಾವಣೆಗಳ ಕೊಳಚೆ ನೀರು ಗುತ್ತಲು ಕೆರೆಗೆ ಹರಿಯುತ್ತಿದೆ. ಕೆರೆಯ ಸಮೀಪದಲ್ಲೇ ಇರುವ ಶುದ್ಧೀಕರಣ ಘಟಕ ಪಾಳು ಕಟ್ಟಡದಂತಾಗಿದ್ದು, ದುರ್ವಾಸನೆ ಕಿಲೋ ಮೀಟರ್‌ವರೆಗೂ ಹಬ್ಬಿದೆ. ಶುದ್ಧೀಕರಣ ಘಟಕ ಇದ್ದರೂ ಒಳಚರಂಡಿಯನ್ನು ನೇರವಾಗಿ ಗುತ್ತಲು ಕೆರೆಗೆ ಸಂಪರ್ಕಿಸಲಾಗಿದೆ.

ಯತ್ತಗದಹಳ್ಳಿಯಲ್ಲಿರುವ ಘಟಕ ತಿಂಗಳಲ್ಲಿ ನಾಲ್ಕೈದು ದಿನವೂ ಓಡುವುದಿಲ್ಲ. ಯಾವಾಗಲೂ ಮೋಟರ್‌ ಕೆಟ್ಟಿದೆ ಎಂದು ಉತ್ತರ ಕೊಡುತ್ತಾರೆ. ಯಾರಾದರೂ ಈ ಬಗ್ಗೆ ಪ್ರಶ್ನೆ ಮಾಡಿದರೆ ಮಾತ್ರ ದುರಸ್ತಿ ಮಾಡಿಸುತ್ತಾರೆ. ನಂತರ ಎಂದಿನಂತೆ ಮೋಟರ್‌ ಕೆಟ್ಟಿದೆ ಎಂಬ ಸಿದ್ಧ ಉತ್ತರ ಕೊಡುತ್ತಾರೆ. ಕೊಳಚೆ ನೀರು ಬಂದು ನಿಲ್ಲುವ ಕಾರಣ ಆ ಭಾಗದ ಸುತ್ತಮುತ್ತಲ ಜನರಿಗೆ ರೋಗ ಭೀತಿ ಎದುರಾಗಿದೆ. ಸೊಳ್ಳೆ, ನೊಣಗಳ ಕಾಟ ಸಹಿಸದಾಗಿದೆ ಎಂದು ಹಾಲಹಳ್ಳಿ ನಿವಾಸಿ ಬಿ.ಸಿದ್ದೇಗೌಡ ಹೇಳಿದರು.

ಸ್ವಚ್ಛತೆ ಕಾಣದ ಘಟಕ: ಚಿಕ್ಕೇಗೌಡನ ದೊಡ್ಡಿಯಲ್ಲಿರುವ ಇನ್ನೊಂದು ಕೊಳಚೆ ನೀರು ಶುದ್ಧೀಕರಣ ಘಟಕದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಈ ಘಟಕವೂ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದು, ಹಲವು ಬಾರಿ ಸ್ಥಗಿತಗೊಂಡಿದೆ. ಘಟಕದ ಟ್ಯಾಂಕ್‌ಗಳಲ್ಲಿ ಮಣ್ಣು ತುಂಬಿಕೊಂಡಿದ್ದು, ಶುದ್ಧೀಕರಣ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಹೀಗಾಗಿ ಕೊಳಚೆ ನೀರು ನೇರವಾಗಿ ಸೂಳೆಕೆರೆಗೆ ಸೇರುತ್ತಿದೆ.

ಯತ್ತಗದಹಳ್ಳಿ ಘಟಕಕ್ಕೆ ಹೋಲಿಸಿದರೆ ಚಿಕ್ಕೇಗೌಡನ ದೊಡ್ಡಿಯಲ್ಲಿರುವ ಘಟಕ ಪರವಾಗಿಲ್ಲ. ಆದರೆ, ಘಟಕದ ಟ್ಯಾಂಕ್‌ಗಳಲ್ಲಿ ಮಣ್ಣು ತುಂಬಿರುವ ಕಾರಣ ಸರಿಯಾಗಿ ಶುದ್ಧೀಕರಣವಾಗುತ್ತಿಲ್ಲ ಎಂದು ಘಟಕದ ಸಮೀಪದಲ್ಲೇ ಇರುವ ಬಿ.ಟಿ.ಲಲಿತಾನಾಯಕ್‌ ಬಡಾವಣೆಯ ನಿವಾಸಿಗಳು ತಿಳಿಸಿದರು.

ಗುತ್ತಲು, ಫ್ಯಾಕ್ಟರಿ ಸರ್ಕಲ್‌, ಚಿಕ್ಕೇಗೌಡನದೊಡ್ಡಿ, ಸ್ವರ್ಣಸಂದ್ರ ಮುಂತಾದ ಬಡಾವಣೆಗಳ ಕೊಳಚೆ ನೀರು ಈ ಘಟಕಕ್ಕೆ ಸೇರುತ್ತದೆ. ಈ ಘಟಕ ಸ್ಥಗಿತಗೊಂಡರೆ ನೀರು ಹೆಬ್ಬಾಳ ಸೇರಿ ನಂತರ ಸೂಳೆಕೆರೆ ಸೇರುತ್ತಿದೆ.

ಮೀನುಗಳ ಮಾರಣ ಹೋಮ: ಗುತ್ತಲು ಕೆರೆಗೆ ಕೊಳಚೆ ನೀರು ನೇರವಾಗಿ ಹರಿಯುತ್ತಿರುವ ಕಾರಣ ಕೆರೆಯಲ್ಲಿ ಈಗಾಗಲೇ ಲಕ್ಷಾಂತರ ಮೀನುಗಳು ಮೃತಪಟ್ಟಿವೆ. ಇಲ್ಲಿ ಮೀನುಗಾರಿಕೆ ನಡೆಸುತ್ತಿರುವ ಮೀನುಗಾರರು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕೊಳಚೆ ನೀರು ಹರಿಸದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಆದರೆ, ಕೊಳಚೆ ನೀರು ನಿರಂತರವಾಗಿ ಹರಿಯುತ್ತಿದ್ದು, ಮೀನುಗಳು ಸಾಯುತ್ತಲೇ ಇವೆ.

‘ಯತ್ತಗದಹಳ್ಳಿ ರಸ್ತೆಯ ಕೊಳಚೆ ನೀರು ಶುದ್ಧೀಕರಣ ಘಟಕದ ಯಂತ್ರ ಕೆಟ್ಟಿತ್ತು. ಈಗ ದುರಸ್ತಿ ಮಾಡಲಾಗಿದೆ. ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ಯುಜಿಡಿ ಅಪೂರ್ಣ ಕಾಮಗಾರಿ

ಮಂಡ್ಯ ನಗರಕ್ಕೆ ಸಂಪೂರ್ಣವಾಗಿ ಒಳಚರಂಡಿ ರೂಪಿಸಲು ಈವರೆಗೂ ಸಾಧ್ಯವಾಗಿಲ್ಲ. ಹೊರವಲಯದ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ.

ಹೌಸಿಂಗ್‌ ಬೋರ್ಡ್‌ ಕಾಲೊನಿ ಒಳಚರಂಡಿಗೆ ಕಾವೇರಿ ನಗರದ ಚರಂಡಿ ಪೈಪ್‌ಲೈನ್‌ ಸಂಪರ್ಕ ಕಲ್ಪಿಸುವ ಬಹುಕಾಲದ ಬೇಡಿಕೆ ಈಡೇರಿಲ್ಲ. ಕಾವೇರಿ ನದಿ ನಗರದ ಎತ್ತರದ ಪ್ರದೇಶದ್ದಲ್ಲಿದ್ದು, ಮೋಟರ್‌ ಅಳವಡಿಸಿ ನೀರು ಎತ್ತಿಸಬೇಕು. ಕಳೆದ ವರ್ಷವೇ ಸ್ಥಳ ಗುರುತಿಸಿ ಪರಿಶೀಲನೆಯೂ ಆಗಿತ್ತು. ಆದರೂ ಕಾಮಗಾರಿ ಆರಂಭವಾಗಿಲ್ಲ ಎಂದು ಅಲ್ಲಿಯ ನಿವಾಸಿಗಳು ದೂರಿದರು.

ಅಮೃತ್‌ ಯೋಜನೆಯಡಿ ಜಲಮಂಡಳಿ ಕೂಡ ಒಳಚರಂಡಿ ಕಾಮಗಾರಿ ನಡೆಸಿತ್ತು. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಕಲ್ಲಹಳ್ಳಿ, ಹಾಲಹಳ್ಳಿ, ಯತ್ತಗದಹಳ್ಳಿ ಮುಂತಾದ ಕಡೆ ಒಳಚರಂಡಿ ವ್ಯವಸ್ಥೆ ಇಲ್ಲ. ದೇವೇಗೌಡನದೊಡ್ಡಿ, ಷುಗರ್‌ಟೌನ್‌ನಲ್ಲೂ ಅಲ್ಲಲ್ಲಿ ಒಳಚರಂಡಿ ಕಾಮಗಾರಿ ನಡೆದಿಲ್ಲ.

ರಾಜಕಾಲುವೆ ಒತ್ತುವರಿ

ನಗರದ ವಿವಿಧೆಡೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಸಂಪೂರ್ಣ ಒಳಚರಂಡಿ ವ್ಯವಸ್ಥೆ ರೂಪಿಸಲು ಸಮಸ್ಯೆಯಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ದೂರುತ್ತಾರೆ.

ನಗರದ ಕೆಲವೆಡೆ ರಾಜಕಾಲುವೆ ಮೇಲೆಯೇ ಮನೆ ನಿರ್ಮಾಣ ಮಾಡಿದ್ದಾರೆ. ಅದನ್ನು ತೆರವು ಮಾಡಿಕೊಡುವಂತೆ ಒತ್ತಾಯಿಸಿ ನಗರಸಭೆಗೆ ಪತ್ರ ಬರೆಯಲಾಗಿದೆ. ರಾಜಕಾಲುವೆ ತೆರವುಗೊಳಿಸಿದರೆ ಮಾತ್ರ ಸುಸಜ್ಜಿತ ಒಳಚರಂಡಿ ನಿರ್ಮಿಸಲು ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದರು.

ನಾಲೆಗೆ ನೀರು; ನಗರಸಭೆ ನೋಟಿಸ್‌

ಇಂಡುವಾಳು ಕಡೆಯಿಂದ ಹರಿದು ಬರುವ ವಿಶ್ವೇಶ್ವರಯ್ಯ ಉಪ ಕಾಲುವೆ ಮರೀಗೌಡ ಬಡಾವಣೆ, ಅನ್ನಪೂರ್ಣೇಶ್ವರಿ ನಗರ, ಚಾಮುಂಡೇಶ್ವರಿ ನಗರ, ಹೌಸಿಂಗ್‌ ಬೋರ್ಡ್‌ ಬಡಾವಣೆಗಳಲ್ಲಿ ಸಾಗಿ ಚೀರನಹಳ್ಳಿಯತ್ತ ಹರಿಯುತ್ತದೆ. ಈ ಮಾರ್ಗದಲ್ಲಿ ಬರುವ ಕಾಲೊನಿಗಳ ನಿವಾಸಿಗಳು ಮನೆಯಲ್ಲಿ ಬಳಸಿದ ಕೊಳಚೆ ನೀರನ್ನು ನಾಲೆಗೆ ಹರಿಸುತ್ತಿದ್ದಾರೆ. ಹೀಗಾಗಿ ಕಾಲುವೆ ನೀರು ಕೂಡ ಕಲುಷಿತಗೊಂಡಿದೆ. ನಾಲೆಗಳಿಗೆ ಕೊಳಚೆ ನೀರು ಬಿಡುತ್ತಿರುವ ಮನೆಗಳ ನಿವಾಸಿಗಳಿಗೆ ಈಗಾಗಲೇ ನೋಟಿಸ್‌ ನೀಡಿದೆ. ಹೀಗಿದ್ದರೂ ಕೊಳಚೆ ನೀರು ಹರಿವು ನಿಂತಿಲ್ಲ.

* 110 ಲಕ್ಷ ಲೀ. ಮಂಡ್ಯ ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಕೊಳಚೆ ನೀರು

* 89 ಲಕ್ಷ ಲೀ. ಯತ್ತಗದಹಳ್ಳಿ ರಸ್ತೆಯಲ್ಲಿರುವ ಶುದ್ಧೀಕರಣ ಘಟಕದ ಸಾಮರ್ಥ್ಯ

* 96 ಲಕ್ಷ ಲೀ. ಚಿಕ್ಕೇಗೌಡನದೊಡ್ಡಿ ಶುದ್ಧೀಕರಣ ಘಟಕದ ಸಾಮರ್ಥ್ಯ

ಜನಾಭಿಪ್ರಾಯ

ಜ್ವರ, ನೆಗಡಿ, ಕೆಮ್ಮು

ಯತ್ತಗದಹಳ್ಳಿ ರಸ್ತೆಯಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದ್ದು ಎಲ್ಲಡೆ ದುರ್ವಾಸನೆ ಹರಡಿದೆ. ಇದರಿಂದ ಸುತ್ತಮುತ್ತ ವಾಸಿಸುವ ಜನರಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ. ಈ ಬಗ್ಗೆ ಹಲವು ಬಾರಿ ದೂರು ಕೊಟ್ಟರೂ ಅಧಿಕಾರಿಗಳು ಗಮನ ಹರಿಸಿಲ್ಲ

– ಪುಟ್ಟಸ್ವಾಮಿ

ಒಳಚರಂಡಿ ನಿರ್ಮಾಣಗೊಳ್ಳಬೇಕು

ಹೆಚ್ಚು ಮಳೆ ಬಂದಾಗ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಗುತ್ತಲು ಕೆರೆಗೆ ಚರಂಡಿ ನೀರು ಹರಿಯುವ ಕಾರಣ ಈ ರಸ್ತೆಯಲ್ಲಿ ಓಡಾಡುವುದೇ ಅಸಾಧ್ಯವಾಗಿದೆ. ನಗರಸಭೆ ಅಧಿಕಾರಿಗಳು ಸುಸಜ್ಜಿತ ಚರಂಡಿ ನಿರ್ಮಾಣ ಮಾಡಬೇಕು

–ಸುಗಂಧರಾಜ

ಕೆರೆ ಸ್ವಚ್ಛಗೊಳಿಸಿ

ಸೂಳೆಕೆರೆ ಹಾಗೂ ಗುತ್ತಲು ಕೆರೆ ಮಲಿನಗೊಂಡಿದ್ದು ಸುತ್ತಮುತ್ತಲಿನ ಪರಿಸರವೂ ಹಾಳಾಗಿದೆ. ಪರಿಸರ ಕಾಪಾಡುವ ದೃಷ್ಟಿಯಿಂದ ಈ ಎರಡು ಕೆರೆಗಳನ್ನು ಸ್ವಚ್ಛಗೊಳಿಸುವ ಅವಶ್ಯಕತೆ ಇದೆ. ದುರ್ವಾಸನೆ ತಡೆಯಲು ಕೆರೆ ಸ್ವಚ್ಛಗೊಳಿಸಬೇಕು

–ರಾಮಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT