ಮಂಗಳವಾರ, ಮಾರ್ಚ್ 21, 2023
20 °C
ಸುಮಲತಾ ವೇದಿಕೆ ಹತ್ತಿದ್ದಕ್ಕೆ ಆಕ್ರೋಶ, ಕೈಕೈ ಮಿಲಾಯಿಸಿ ಕುರ್ಚಿಯಲ್ಲಿ ಬಡಿದಾಡಿಕೊಂಡರು

ಮಂಡ್ಯ | ಸಂಸದೆ ಸುಮಲತಾ ಎದುರೇ 2 ಗುಂಪುಗಳ ಜಟಾಪಟಿ; ಕುರ್ಚಿಯಲ್ಲಿ ಬಡಿದಾಡಿಕೊಂಡರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ತಾಲ್ಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಕೆಲ ಗ್ರಾಮಸ್ಥರ ನಡುವೆ ಜಟಾಪಟಿ ನಡೆಯಿತು, ಎರಡೂ ಗುಂಪುಗಳ ಸದಸ್ಯರು ಕುರ್ಚಿಗಳಲ್ಲಿ ಬಡಿದಾಡಿಕೊಂಡರು.

ಗ್ರಾಮದ ಮಲೈಮಹದೇಶ್ವರ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯ ಉದ್ಘಾಟನೆ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮದ ವೇದಿಕೆಗೆ ರಾಜಕೀಯ ನಾಯಕರನ್ನು ವೇದಿಕೆಗೆ ಹತ್ತಿಸದಂತೆ ಮೊದಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದರ ನಡುವೆಯೂ ಸಂಸದೆ ಸುಮಲತಾ ಅವರನ್ನು ವೇದಿಕೆಗೆ ಕರೆದುತಂದಿದ್ದು ಗ್ರಾಮದ ಹಲವರ ಆಕ್ರೋಶಕ್ಕೆ ಕಾರಣವಾಯಿತು.

ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಸೇರಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಎಲ್ಲರನ್ನೂ ವೇದಿಕೆಯ ಕೆಳಗೆ ಅಭಿನಂದಿಸಿ ಕಳುಹಿಸಲಾಗಿತ್ತು. ಆದರೆ, ಸುಮಲತಾ ಅವರನ್ನು ವೇದಿಕೆಯ ಮೇಲೆ ಹತ್ತಿಸಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಸುಮಲತಾ ವೇದಿಕೆ ಏರುತ್ತಿದ್ದಂತೆ ಗ್ರಾಮದ ಕೆಲವರು, ಜೆಡಿಎಸ್‌ ಸದಸ್ಯರು ಅವರಿಗೆ ದಿಕ್ಕಾರ ಕೂಗಿದರು, ವೇದಿಕೆಯಿಂದ ಕೆಳಗಿಳಿಯುವಂತೆ ತಾಕೀತು ಮಾಡಿದರು. ಇದಕ್ಕೆ ಸುಮಲತಾ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆಯಿತು. ಎರಡೂ ಗುಂಪಿನ ಸದಸ್ಯರು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದರು. ಕುಳಿತಿದ್ದ ಕುರ್ಚಿಗಳಿಂದಲೇ ಒಬ್ಬರಿಗೊಬ್ಬರು ಬಡಿದಾಡಿಕೊಂಡರು.

ಮಧ್ಯಪ್ರವೇಶ ಮಾಡಿದ ಗ್ರಾಮದ ಹಿರಿಯರು ಎರಡೂ ಗುಂಪುಗಳನ್ನು ಸಮಾಧಾನಪಡಿಸಿದರು. ನಂತರ ಸುಮಲತಾ ವೇದಿಕೆಯಲ್ಲಿ ಮಾತು ಮುಂದುವರಿಸಿದರು.

‘ಕೆಲವರು ಪ್ರಚಾರಕ್ಕಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಪಕ್ಷೇತರ ಸಂಸದೆಗೆ ಒಂದೊಂದು ಕೆಲಸ ಮಾಡಿಸುವುದಕ್ಕೂ ಸಾಕಷ್ಟು ಸವಾಲಾಗಿದೆ. ಅದನ್ನು ನಿಮ್ಮ ಬಳಿ ಹೇಳಿಕೊಂಡಿದ್ದೇನಾ’ ಎಂದು ಪ್ರಶ್ನಿಸಿದರು.

‘ಮಂತ್ರಿಗಳು, ಅಧಿಕಾರಿಗಳ ಅಸಹಕಾರವನ್ನು ನೋಡಿದ್ದೇನೆ. ಜನರಿಗೆ ತೊಂದರೆಯಾಗಬಾರದು ಎಂದು ಎಲ್ಲವನ್ನೂ ಸಹಿಸಿಕೊಂಡಿದ್ದೇನೆ. ಸಣ್ಣಪುಟ್ಟ ಗೊಂದಲಗಳಿಂದ ಗಲಾಟೆ ಮಾಡಿದರೆ ನಿಮಗೆ ನೀವೆ ಅವಮಾನ ಮಾಡಿಕೊಂಡಂತೆ ಆಗುತ್ತದೆ’ ಎಂದರು.

‘ಗ್ರಾಮಸ್ಥರಿರಲಿ ಅಥವಾ ಮುಖಂಡರಿರಲಿ ರಾಜಕಾರಣ ಬಿಟ್ಟು ಅಭಿವೃದ್ಧಿ ವಿಚಾರ ಕೇಳಿದರೆ ಸಂತೋಷದಿಂದ ಮಾಡುತ್ತೇನೆ. ಗೊಂದಲ ಮಾಡಿಕೊಂಡು ಸರಿಮಾಡಿ ಎಂದು ನನ್ನ ಮುಂದೆ ಬರಬೇಡಿ, ಗೊಂದಲ ಸರಿಪಡಿಸಲು ಇದು ಪಂಚಾಯಿತಿ ಅಲ್ಲ. ಹಿಂದೆಯೂ ಈ ಊರಿನ ಕೆಲಸಗಳನ್ನ ಮಾಡಿದ್ದೇನೆ, ಅದಕ್ಕಾಗಿ ಬಂದಿದ್ದೀನಿ. ಯಾರೋ ಮಾಡಿದ ಕೆಲಸಕ್ಕೆ ರಿಬ್ಬನ್ ಕತ್ತರಿಸಲು ನಾನು ಬರುವುದಿಲ್ಲ. ಪ್ರಚಾರ ನನಗೆ ಬೇಕಾಗಿಲ್ಲ’ ಎಂದರು.

ದೇವಾಲಯ ಉದ್ಘಾಟನೆ: ಮಲೈಮಹದೇಶ್ವರ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ದೇವಾಲಯ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು. ಜಾನಪದ ಕಲಾತಂಡ, ಗ್ರಾಮದೇವತೆಗಳ ಮೆರವಣಿಗೆ, ಪೂಜಾ ಕುಣಿತ ಸಮಾರಂಭಕ್ಕೆ ಸೊಬಗು ತಂದವು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಜೆಡಿಎಸ್‌ ನಾಯಕ ಎಚ್.ಎನ್.ಯೋಗೇಶ್, ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಕಾಂಗ್ರೆಸ್ ಮುಖಂಡ ಡಾ.ಎಚ್‌.ಕೃಷ್ಣ, ಅಮರಾವತಿ ಚಂದ್ರಶೇಖರ್, ಟ್ರಸ್ಟ್ನ ಅದ್ಯಕ್ಷ ನಾಗರಾಜು, ಕಾರ್ಯದರ್ಶಿ ಹೊನ್ನೇಶ್, ಖಜಾಂಚಿ ಟಿ.ನಾಗರಾಜು, ಗ್ರಾ.ಪಂ. ಅಧ್ಯಕ್ಷ ಸಿದ್ದೇಗೌಡ ಇದ್ದರು.

***

ಮಹಿಳೆಯರನ್ನು ನೋಡಿ ಕಲಿಯಿರಿ

ಸುಮಲತಾ ಅವರು ಮಾತನಾಡುವಾಗ ಕೆಲವರು ಮಾತಿಗೆ ಅಡ್ಡಿ ಮಾಡಲು ಯತ್ನಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಮಲತಾ ‘ನಾನು ಮಾತನಾಡುವಾಗ ಮಧ್ಯೆ ಮಾತನಾಡುವುದು ಸಭ್ಯತೆ ಅಲ್ಲ, ನಿಮಗೂ ಮಾತನಾಡೋದಕ್ಕೆ ಒಂದು ಸಮಯ ಬರುತ್ತದೆ. ಈ ಗೊಂದಲ ನನ್ನಲ್ಲಿ ಬೇಸರ ಮೂಡಿಸಿದೆ. ಮಹಿಳೆಯರು ಆಸೆಯಿಂದ ಕಾರ್ಯಕ್ರಮಕ್ಕೆ ಬಂದಿದ್ದಾರೆ, ಪ್ರೀತಿಯಿಂದ ಮಾತನಾಡಿಸುತ್ತಾರೆ. ನೀವು ಮಹಿಳೆಯರಿಂದ ಕಲಿಯಬೇಕು. ಊರಿನ ಕೆಲಸವನ್ನು ಜನಪ್ರತಿನಿಧಿಗಳಿಂದ ಮಾಡಿಸಿಕೊಳ್ಳುವುದಕ್ಕೂ ಒಂದು ಬದ್ಧತೆ ಇರಬೇಕು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು