ಕಲ್ಲು ಹೊಡೆಸಿ ನಮ್ಮ ಮೇಲೆ ಗೂಬೆ ಕೂರಿಸ್ತಾರೆ...

ಶುಕ್ರವಾರ, ಏಪ್ರಿಲ್ 26, 2019
33 °C
ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

ಕಲ್ಲು ಹೊಡೆಸಿ ನಮ್ಮ ಮೇಲೆ ಗೂಬೆ ಕೂರಿಸ್ತಾರೆ...

Published:
Updated:
Prajavani

ಮಂಡ್ಯ: ‘ಪಕ್ಷೇತರ ಅಭ್ಯರ್ಥಿ ಹೊಸ ತಂತ್ರ ರೂಪಿಸುತ್ತಿದ್ದಾರೆ. ಪ್ರಚಾರ ಸಭೆಯಲ್ಲಿ ಅವರೇ ಕಲ್ಲು ಹೊಡೆಸಿಕೊಂಡು ಜೆಡಿಎಸ್‌ ಮೇಲೆ ಗೂಬೆ ಕುರಿಸುವ ಮೂಲಕ ಅನುಕಂಪ ಗಿಟ್ಟಿಸಿಕೊಳ್ಳಲು ಕುತಂತ್ರ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಆರೋಪಿಸಿದರು.

ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಬಳಿ ಕೆ.ನಿಖಿಲ್‌ ಪರ ಪ್ರಚಾರ ನಡೆಸಿ ಮಾತನಾಡಿದರು. ‘ನಾವು ಯಾವುದೇ ಕುತಂತ್ರ ಮಾಡುವುದಿಲ್ಲ. ಆದರೆ ಚುನಾವಣೆ ಗೆಲ್ಲಲು ಅವರು ಎಲ್ಲಾ ರೀತಿಯ ತಂತ್ರ ಮಾಡುತ್ತಿದ್ದಾರೆ. ನಾನು ಮಂಡಿಸಿದ ಬಜೆಟ್‌ಅನ್ನು ಮಂಡ್ಯ ಬಜೆಟ್‌ ಎಂದು ಟೀಕಿಸಿದ ಬಿಜೆಪಿಯವರ ಜೊತೆ ಸೇರಿ ಮತಕೇಳಲು ಬಂದಿದ್ದಾರೆ. 200 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಮನೆಗೆ ಯಾರು ಬಂದಿದ್ದರು ಎಂಬ ಬಗ್ಗೆ ಯೋಚಿಸಿ’ ಎಂದರು.

ಸಂದೇಶ್‌ ವಿರುದ್ಧ ಆಕ್ರೋಶ: ‘ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ನಮ್ಮಿಂದ ರಾಜಕೀಯ ಲಾಭ ಪಡೆದಿದ್ದರು. ಒಂದು ಚುನಾವಣೆ ಗೆಲ್ಲಲು ಸಾಧ್ಯವಾಗದ ಅವರನ್ನು ನಾವು ಗೆಲ್ಲಿಸಿದ್ದೆವು. ಆದರೆ ಈಗ ನಮ್ಮ ವಿರುದ್ಧವೇ ಕೆಲಸ ಮಾಡುತ್ತಿದ್ದಾರೆ. ಸಂದೇಶ್‌ ದಿ ಪ್ರಿನ್ಸ್‌ ಹೋಟೆಲ್‌ನಲ್ಲಿ ಜಾಗಕೊಟ್ಟು ಪಕ್ಷೇತರ ಅಭ್ಯರ್ಥಿಗೆ ಸಕಲ ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸುಮಲತಾಗೆ ಶಕ್ತಿ ಇಲ್ಲ: ಮಂಡ್ಯ ಅಭಿವೃದ್ಧಿ ಕುರಿತು ನಿಖಿಲ್‌ ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಸುಮಲತಾಗೆ ತಿರುಗೇಟು ನೀಡಿದರು. ‘ನಾವು ಪಕ್ಷೇತರ ಅಭ್ಯರ್ಥಿಯಿಂದ ಅಭಿವೃದ್ಧಿಯ ಪಾಠ ಕಲಿಯಬೇಕಾಗಿಲ್ಲ. ಅಭಿವೃದ್ಧಿ ಬಗ್ಗೆ ಅವರಿಗೆ ಏನು ಗೊತ್ತು. ಸಾಮಾನ್ಯ ಕಾರ್ಯಕರ್ತನ ಜೊತೆಗೂ ಚರ್ಚೆ ನಡೆಸುವ ಶಕ್ತಿ ಅವರಲ್ಲಿ ಇಲ್ಲ. ಅಂಬರೀಷ್‌ ಸಂಸದರಾಗಿದ್ದಾಗ ಇವರು ಜನರ ಕಷ್ಟ ಕೇಳಿದ್ದಾರಾ. ಯಾವ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು.

ಭಾಷಣಕ್ಕೆ ಆಕ್ಷೇಪ: ಸಾಲ ಮನ್ನಾ ವಿಚಾರಕ್ಕೆ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರ ಗ್ರಾಮಸ್ಥರು ಬುಧವಾರ ರಾತ್ರಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸಾಲ ಮನ್ನಾದಿಂದ ಯಾವ ರೈತರಿಗೂ ಲಾಭವಾಗಿಲ್ಲ, ಸುಮ್ಮನೆ ಭರವಸೆ ಕೊಡುವುದನ್ನು ನಿಲ್ಲಿಸಿ ಎಂದು ತರಾಟೆಗೆ ತೆಗೆದುಕೊಂಡರು.

ಶಾಸಕ ರವೀಂದ್ರ ಶ್ರೀಕಂಠಯ್ಯ ಸಮಾಧಾನಪಡಿಸಲು ಯತ್ನಿಸಿದರೂ ಜನರು ಸುಮ್ಮನಾಗಲಿಲ್ಲ. ‘ನಿಮ್ಮ ಇಷ್ಟ ಬಂದವರಿಗೆ ಓಟು ಹಾಕಿ, ನಾನು ರೈತಪರ ಕೆಲಸ ಮಾಡುತ್ತೇನೆ’ ಎಂದು ಹೇಳುತ್ತಾ ಮುಖ್ಯಮಂತ್ರಿ ಮುಂದೆ ತೆರಳಿದರು.

ಸೋತರೂ ಮಂಡ್ಯದಲ್ಲೇ ಇರುವೆ: ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಮಾತನಾಡಿ ‘ಈ ಚುನಾವಣೆಯಲ್ಲಿ ಸೋತರೂ ನಾನು ಮಂಡ್ಯದಲ್ಲೇ ಉಳಿಯುತ್ತೇನೆ. ಶಾಸಕರ ಜೊತೆ ಇದ್ದು ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಿಸುತ್ತೇನೆ. ಅದಕ್ಕಾಗಿ ಕಚೇರಿ ತೆರೆಯುತ್ತೇನೆ’ ಎಂದರು.

ಜಂಟಿ ಪ್ರಚಾರ ಇಂದು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶುಕ್ರವಾರ ಕ್ಷೇತ್ರದ ವಿವಿಧೆಡೆ ಜಂಟಿ ಪ್ರಚಾರ ನಡೆಸಲಿದ್ದಾರೆ.

 

ಡೀಲ್‌ ಮೂಲಕ ಮುಖ್ಯಮಂತ್ರಿ ಹುದ್ದೆ: ಸುಮಲತಾ

ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂನಲ್ಲಿ ಮಾತನಾಡಿದ ಸುಮಲತಾ, ‘ಜೆಡಿಎಸ್‌ ಪಕ್ಷ 112 ಸ್ಥಾನ ಪಡೆದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿಲ್ಲ. ಎರಡು ಬಾರಿಯೂ ಡೀಲ್‌, ಒಳ ಒಪ್ಪಂದ ಮೂಲಕವೇ ಮುಖ್ಯಮಂತ್ರಿ ಹುದ್ದೆ ಪಡೆದಿದ್ದಾರೆ. ಹೀಗಾಗಿ ಆ ಸ್ಥಾನದ ಮಹತ್ವ ಅವರಿಗೆ ತಿಳಿಯುತ್ತಿಲ್ಲ’ ಎಂದು ತಿರುಗೇಟು ನೀಡಿದರು.

‘ನಾನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ಬಿಜೆಪಿ ಬೆಂಬಲ ಪಡೆದು 20 ತಿಂಗಳು ಅಧಿಕಾರ ಅನುಭವಿಸಿದವರು ಯಾರು. ನಾನೊಬ್ಬಳು ಪಕ್ಷೇತರ ಅಭ್ಯರ್ಥಿ, ನಾನು ಗೆದ್ದರೆ, ಸೋತರೆ ಬಿಜೆಪಿಗೆ ಯಾವ ಲಾಭ, ನಷ್ಟವೂ ಇಲ್ಲ. ಆದರೆ ಜೆಡಿಎಸ್‌ ವರಿಷ್ಠರು ಈಗಾಗಲೇ ದೆಹಲಿ ಮಟ್ಟದಲ್ಲಿ ಬಿಜೆಪಿ ಮುಖಂಡರನ್ನು ಸಂಪರ್ಕಿಸಿದ್ದು, ಚುನಾವಣೆ ಮುಗಿದ ತಕ್ಷಣ ಬಿಜೆಪಿ ಜೊತೆ ಸೇರಲು ತಂತ್ರ ರೂಪಿಸಿದ್ದಾರೆ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ, ಗುಪ್ತದಳವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಿಗೂ ಬೆದರಿಕೆ ಹಾಕುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮ ಪ್ರತಿನಿಧಿಗಳಿಗೇ ಬೆದರಿಕೆ ಹಾಕುವವರು, ನನ್ನಂಥ ಸಾಮಾನ್ಯ ಜನರಿಗೆ ರಕ್ಷಣೆ ನೀಡುತ್ತಾರಾ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !