ಶುಕ್ರವಾರ, ಆಗಸ್ಟ್ 12, 2022
22 °C

16 ವರ್ಷದ ಮಗಳ ಮದುವೆ ತಪ್ಪಿಸಿದ ತಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ಪೇಟೆ: ತಮ್ಮ 16 ವರ್ಷ ಮಗಳಿಗೆ ಮದುವೆ ಮಾಡುತ್ತಿರುವುದನ್ನು ತಡೆಯುವಂತೆ, ತಂದೆ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಕಿಕ್ಕೇರಿ ಠಾಣೆ ಪೊಲೀಸರು, ಬಾಲಕಿಯ ಮದುವೆಯನ್ನು ತಡೆದಿದ್ದಾರೆ.

‘16 ವರ್ಷ ವಯಸ್ಸಾಗಿರುವ ಮಗಳನ್ನು ಗೋವಿಂದೇಗೌಡನ ಕೊಪ್ಪಲು ಗ್ರಾಮದ ಮಹೇಶ್ (31) ಎಂಬುವರಿಗೆ ಕೊಟ್ಟು ಮದುವೆ ಮಾಡಲು ನಾದಿನಿ ಗಂಡ, ಅತ್ತೆ, ಅತ್ತಿಗೆ ಮುಂದಾಗಿದ್ದರು. ಅದನ್ನು ಪ್ರಶ್ನಿಸಿದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನಗೆ ನ್ಯಾಯ ಕೊಡಿಸ ಬೇಕು’ ಎಂದು ಬಾಲಕಿಯ ತಂದೆ, ಚಿಲ್ಲದಹಳ್ಳಿಯ ಪರಮೇಶ್ ದೂರು ನೀಡಿದ್ದರು.

ತಾಲ್ಲೂಕಿನ ಕೊರಟೀಕೆರೆಯ ಕನ್ನೇಶ್ವರ ದೇವಾಲಯ ಬಳಿ ಗುರುವಾರ ಬೆಳಿಗ್ಗೆ 3 ಗಂಟೆಗೆ ಮದುವೆ ಮಾಡುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವಿಷಯ ತಿಳಿದ ದಿಬ್ಬಣದವರು, ಚಿಕ್ಕೋಸಹಳ್ಳಿಯ ದೊಡ್ಡಕೇರಮ್ಮ ದೇವಸ್ಥಾನಕ್ಕೆ ಹೋಗಿ ಅಲ್ಲಿ ವಿವಾಹ ಮಾಡಲು ಯತ್ನಿಸಿದ್ದಾರೆ. ಅಲ್ಲಿಗೂ ಪೊಲೀಸರು ದೌಡಾಯಿಸಿರುವ ವಿಷಯ ತಿಳಿದು ಅಲ್ಲಿಂದಲೂ ಎಲ್ಲರೂ ಪರಾರಿಯಾಗಿದ್ದರು.

ಬಾಲಕಿಯ ತಾಯಿ 14 ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ತಾಯಿಯ ತವರೂರಾದ ಮೇಲುಕೋಟೆ ಸಮೀಪದ ಕೋಣನಕೊಪ್ಪಲಿನ ಅಜ್ಜಿ ಮನೆಯಲ್ಲಿ ಬಾಲಕಿ ವಾಸವಾಗಿದ್ದಳು.

ಜಾಗಿನಕೆರೆ ಗ್ರಾಮದಲ್ಲಿದ್ದ ಬಾಲಕಿಯ ಅಜ್ಜ, ಅಜ್ಜಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆಯಲಾಗಿದೆ. ವರ ಪರಾರಿಯಾಗಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಕೆ.ದೀಪಕ್‌ ತಿಳಿಸಿದರು.

ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಸುಪರ್ದಿಗೆ ನೀಡಲಾಯಿತು. ‘ಬಾಲಮಂದಿರದಲ್ಲಿ ಇರುವುದಿಲ್ಲ. ತಂದೆ ಬಳಿಗೂ ಹೋಗುವುದಿಲ್ಲ. ಅಜ್ಜಿ ಮನೆಗೆ ಹೋಗುವುದಾಗಿ ಬಾಲಕಿ ಹೇಳಿದ್ದಾಳೆ. ಹೀಗಾಗಿ, ಅಲ್ಲಿಗೇ ಕಳುಹಿಸಿ ಕೊಡಲಾಗಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು