ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲುಕೋಟೆ: ಅಭಿವೃದ್ಧಿಗೆ ನೀಡಿದ್ದ ಅನುದಾನ ಹಿಂಪಡೆದ ಸರ್ಕಾರ

ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ಅಭಿವೃದ್ಧಿಗೆ ಗ್ರಹಣ; ವಿವಿಧ ಇಲಾಖೆಯ ಕಾಮಗಾರಿ ಸ್ಥಗಿತ
ಶ್ರೀಕಾಂತ್ ಮೇಲುಕೋಟೆ
Published 22 ಫೆಬ್ರುವರಿ 2024, 4:58 IST
Last Updated 22 ಫೆಬ್ರುವರಿ 2024, 4:58 IST
ಅಕ್ಷರ ಗಾತ್ರ

ಮೇಲುಕೋಟೆ: ರಾಜ್ಯದ ವೈಷ್ಣವ ಕ್ಷೇತ್ರ ಮೇಲುಕೋಟೆಯ ಅಭಿವೃದ್ಧಿಗೆ ಬಂದ ಅನುದಾನವನ್ನು ಸರ್ಕಾರ ಹಿಂಪಡೆದಿರುವುದು ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ರಾಮಾನುಜಾಚಾರ್ಯರಿಂದ ಜೀರ್ಣೋದ್ಧಾರಗೊಂಡ ಶ್ರೀ ಚೆಲುವ ನಾರಾಯಣ ಸ್ವಾಮಿ ದೇವಾಲಯದ ಸುತ್ತಲೂ ಕಾಂಕ್ರೀಟ್ ರಸ್ತೆ‌ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 2019- 20 ರ ಸಾಲಿನಲ್ಲಿ ₹1 ಕೋಟಿ ವೆಚ್ಚದ ಕಾಮಗಾರಿಗೆ ಮೊದಲ ಹಂತದಲ್ಲಿ ₹33 ಲಕ್ಷ ಅನುದಾನ ಬಿಡುಗಡೆಯಾಗಿತ್ತು. 2023 ಸೆಪ್ಟೆಂಬರ್ 16 ರಂದು ಕಾಮಗಾರಿ ಇಲ್ಲಿನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದ್ದರು. ಪ್ರವಾಸೋದ್ಯಮ ಇಲಾಖೆ ಸಚಿವ ಹೆಚ್.ಕೆ ಪಾಟೀಲ್ ಕಾಮಗಾರಿಗೆ ಬಂದಿದ್ದ ಅನುದಾನವನ್ನು ಹಿಂಪಡೆದಿದ್ದು, ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿದೆ.

ಪುರಾತತ್ವ ಇಲಾಖೆ ಅಧೀನದಲ್ಲಿರುವ ಗಾಜಿನ ಅರಮನೆ ಜೀರ್ಣೋದ್ಧಾರಕ್ಕೆ  2.60 ಕೋಟಿ, ಇಲ್ಲಿನ ಐತಿಹಾಸಿಕ ಮಂಟಪ ಹಾಗೂ ಕಲ್ಯಾಣಿಗಳ ಪುನಶ್ಚೇತನಕ್ಕೆ ಸಣ್ಣ ನೀರಾವರಿ ‌ಇಲಾಖೆ ₹2 ಕೋಟಿ ವೆಚ್ದಚ‌ ಕಾಮಗಾರಿಗೆ‌ ಹಿಂದಿನ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಭೂಮಿ ಪೂಜೆ ನೆರವೇರಿಸಿದ್ದರು. ಇಂದಿಗೂ ಕಾಮಗಾರಿ ಕೆಲಸ ಆರಂಭವಾಗಿಲ್ಲ.

ಅರ್ಧಕ್ಕೆ ನಿಂತ ಇನ್ಫೋಸಿಸ್ ಕಾಮಗಾರಿ: ಈ‌ ಹಿಂದೆ ‘ಇನ್ಫೋಸಿಸ್ ಫೌಂಡೇಶನ್’ ಮೂಲಕ ಸುಧಾಮೂರ್ತಿ ಅವರು ಇಲ್ಲಿನ ಪಂಚಕಲ್ಯಾಣಿಯ ಜೀರ್ಣೋದ್ಧಾರಕ್ಕಾಗಿ ಮುಂದಾಗಿದ್ದರು. ಕೇಂದ್ರ ಪುರಾತತ್ವ ಇಲಾಖೆಗೆ ಕೆಲವರು ದೂರು ನೀಡಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಟ್ಟರು. ಈ ಕೆಲಸ ನಾಲ್ಕು ವರ್ಷ ಕಳೆದರೂ ಕೂಡ ಪೂರ್ಣಗೊಂಡಿಲ್ಲ.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸ್ಥಳೀಯರು ಒತ್ತಾಯಿಸಿದ್ದರಿಂದ ‘ಅನ್ನದಾಸೋಹ ಭವನ’ಕ್ಕೆ ಸ್ಥಳದಲ್ಲೇ ₹1 ಕೋಟಿ ಮಂಜೂರು ಮಾಡಿ ಭವನ ನಿರ್ಮಾಣ‌ ಮಾಡಿಸಿದರು. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ದೇವಾಲಯದವರೆಗೂ ರಸ್ತೆಗೆ ಲೈಟಿಂಗ್ ವ್ಯವಸ್ಥೆ ಮಾಡಿಸಿದರು.

2018ರಲ್ಲಿ ರಾಮಾನುಜಾಚಾರ್ಯರ ಸಹ್ರಮಾನೋತ್ಸವಕ್ಕೆ ಅನುದಾನ ಕೇಳಿದರೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡಿಗಾಸು ನೀಡಿರಲಿಲ್ಲ. ಈಗ ಕ್ಷೇತ್ರಕ್ಕೆ ನೀಡಿದ ಅನುದಾನ ಹಿಂಪಡೆದಿರುವುದು ಭಕ್ತರು ಹಾಗೂ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.

ದರ್ಶನ್‌ ಪುಟ್ಟಣ್ಣಯ್ಯ
ದರ್ಶನ್‌ ಪುಟ್ಟಣ್ಣಯ್ಯ
ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿದ್ದ ಅನುದಾನ ಹಿಂಪಡೆದ ಆದೇಶ
ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿದ್ದ ಅನುದಾನ ಹಿಂಪಡೆದ ಆದೇಶ
ಡಾ.ಎನ್.ಎಸ್.ಇಂದ್ರೇಶ್–ಬಿಜೆಪಿ ಜಿಲ್ಲಾಧ್ಯಕ್ಷ
ಡಾ.ಎನ್.ಎಸ್.ಇಂದ್ರೇಶ್–ಬಿಜೆಪಿ ಜಿಲ್ಲಾಧ್ಯಕ್ಷ

ವಿಶೇಷ ಅನುದಾನಕ್ಕೆ ಪ್ರಯತ್ನ

ಕಾಮಗಾರಿ ಸದುಪಯೋಗ ಪಡೆದುಕೊಳ್ಳುವುದು ವಿಳಂಬವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅನುದಾನ ಹಿಂಪಡೆದಿದೆ ಈ‌ ಬಗ್ಗೆ ಸಚಿವರು ಮತ್ತೆ ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ವಿಚಾರವಾಗಿ ಮಾಸ್ಟರ್ ಪ್ಲಾನ್ ಸಿದ್ದವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಿಎಂ‌ಡಿಸಿಎಂ ಜತೆಗೆ ಚರ್ಚಿಸಿ ಅತಿ ಶೀಘ್ರದಲ್ಲೇ ವಿಶೇಷ ಅನುದಾನ ಪಡೆಯುತ್ತೇನೆ. ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದ ಶಾಸಕ ಹಿಂದೂ ವಿರೋಧಿ ಸರ್ಕಾರ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ‌ ಸರ್ಕಾರ ಎನ್ನುವುದಕ್ಕೆ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಸಾಕ್ಷಿಯಾಗಿದೆ. ಕೆ.ಸಿ. ನಾರಾಯಣಗೌಡರು ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿದ್ದ ಅನುದಾನ ಹಿಂಪಡೆದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇದುವರೆಗೆ ಮೇಲುಕೋಟೆಗೆ ಬಿಡಿಗಾಸು ಕೂಡ ನೀಡಿಲ್ಲ ಡಾ.ಎನ್.ಎಸ್.ಇಂದ್ರೇಶ್ ಬಿಜೆಪಿ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT