ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಂಗಳದಲ್ಲಿ ಕಳ್ಳರ ಕಾಟ: ಜನರ ಪರದಾಟ

3ನೇ ವಾರ್ಡ್‌ನಲ್ಲಿ ಮೂಲಸೌಲಭ್ಯಗಳ ಕೊರತೆ, ಇಲ್ಲಗಳ ಸಂತೆ, ಸಾರ್ವಜನಿಕರಿಗೆ ಚಿಂತೆ
Last Updated 25 ಜೂನ್ 2018, 12:24 IST
ಅಕ್ಷರ ಗಾತ್ರ

ಮಂಡ್ಯ: ಸಿಹಿ ನೀರಿನ ಕೊಳ, ಕೆರೆಯಂಗಳದಲ್ಲಿ ಕಳ್ಳರ ಕಾಟ, ವಿವೇಕಾನಂದ ಬಡಾವಣೆಯಲ್ಲಿ ಕಗ್ಗತ್ತಲು, ಬೆಳೆದು ನಿಂತಿರುವ ಗಿಡ ಗಂಟಿ, ಹಾವುಗಳ ಭಯ, ಬೀಡಿ ಕಾಲೊನಿಯಲ್ಲಿ ಕಸದ ರಾಶಿ, ತೆರೆದ ಚರಂಡಿಗಳ ದರ್ಶನ, ಮುಸ್ಲಿಂ ಬ್ಲಾಕ್‌ನಲ್ಲಿ ಜಲ್ಲಿ ತುಂಬಿದ ರಸ್ತೆ, ಕುಡಿಯುವ ನೀರಿನ ಕೊರತೆ.

ಇವಿಷ್ಟು ‘3ನೇ ವಾರ್ಡ್‌ ಬೀಟ್‌‘ನಲ್ಲಿ ಕಂಡುಬಂದ ಸಮಸ್ಯೆಗಳು. ಸಿಹಿನೀರಿನ ಕೊಳ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳು ಹಾಗೂ ಅಂಗಡಿಗಳ ಮಾಲೀಕರು ಸದಾ ಕಳ್ಳಕಾಕರ ಭಯದಲ್ಲೇ ಜೀವನ ಮಾಡಬೇಕಾಗಿದೆ. ರೈಲ್ವೆ ಅಂಡರ್‌ಪಾಸ್‌ ಸಮೀಪ ಇರುವ ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಮೇಲ್ಸೇತುವೆ ಕಾರಣದಿಂದ ಇಡೀ ಪ್ರದೇಶ ಮರೆಯಲ್ಲಿದ್ದು ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯಾಪಾರಿಗಳು ಇಲ್ಲಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ ಕಳ್ಳತನದ ಕಾರಣದಿಂದಾಗಿ ವ್ಯಾಪಾರಿಗಳಿಗೆ ಸದಾ ಭಯ ಕಾಡುತ್ತಿದೆ. ಈಗಾಗಲೇ ಹಲವು ಪ್ರಕರಣ ದಾಖಲಾಗಿದ್ದರೂ ಕಳ್ಳತನ ನಿಯಂತ್ರಣಕ್ಕೆ ಬಂದಿಲ್ಲ.

‘ರಾತ್ರಿಯ ವೇಳೆ ಇಲ್ಲಿ ಒಬ್ಬೊಬ್ಬರೇ ಓಡಾಡುವುದೂ ಕಷ್ಟ. ಪೊಲೀಸ್‌ ಕಾವಲು ಹೆಚ್ಚಿಸುವಂತೆ ಸಮೀಪದ ಪೊಲೀಸ್‌ ಠಾಣೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಕಳ್ಳತನ ನಿಂತಿಲ್ಲ. ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ವಾಚ್‌ ಅಂಗಡಿ ಮಾಲೀಕ ಸುರೇಶ್‌ ಹೇಳುತ್ತಾರೆ.

ರಸ್ತೆಯ ಸಮಸ್ಯೆ : 3ನೇ ವಾರ್ಡ್‌ನಲ್ಲಿ ಪ್ರಮುಖ ಬಡಾವಣೆಯಾಗಿರುವ ಮುಸ್ಲಿಂ ಬ್ಲಾಕ್‌ ಜನರು ಹಲವು ಇಲ್ಲಗಳ ನಡುವೆ ಜೀವನ ನಡೆಸುತ್ತಿದ್ದಾರೆ. ಇಲ್ಲಿಯ 2 ಮತ್ತು 3ನೇ ಕ್ರಾಸ್‌ನಲ್ಲಿ ರಸ್ತೆಯ ಸಮಸ್ಯೆಯಿಂದಾಗಿ ಜನರು ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯ ವೇಳೆಗೆ ರಸ್ತೆಯನ್ನು ಅಗೆದು ಜಲ್ಲಿ ಹಾಕಿದ್ದಾರೆ. ಆದರೆ, ಎರಡು ತಿಂಗಳುಗಳಿಂದ ಕಾಮಗಾರಿಯನ್ನು ಮುಂದುವರಿಸಿಲ್ಲ. ಹೀಗಾಗಿ ರಸ್ತೆಯಲ್ಲಿ ಜಲ್ಲಿ ಚೆಲ್ಲಾಡುತ್ತಿದ್ದು ಮಕ್ಕಳು, ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ.

‘ಚೆನ್ನಾಗೇ ಇದ್ದ ರಸ್ತೆಯನ್ನು ದುರಸ್ತಿಯ ನೆಪದಲ್ಲಿ ಕಿತ್ತು ಹಾಕಿದರು. 15 ದಿನದೊಳಗೆ ಕಾಮಗಾರಿ ಮುಗಿಸುವುದಾಗಿ ತಿಳಿಸಿದ್ದರು. ರಸ್ತೆ ಅಗೆದು, ಜಲ್ಲಿ ಹಾಕಿ ಹೋದವರು ಇತ್ತ ಕಡೆ ತಲೆ ಹಾಕಿಲ್ಲ. ಕಲ್ಲುಗಳಿಂದಾಗಿ ಮಕ್ಕಳು ಬಿದ್ದು ಗಾಯಗೊಳ್ಳುತ್ತಿವೆ. ರಂಜಾನ್‌ ಸಮಯಕ್ಕಾದರೂ ದುರಸ್ತಿ ಮುಗಿಸಿ ಎಂದು ಕೇಳಿಕೊಂಡರೂ ಯಾವುದೇ ಪ್ರಯೋಜನ ಆಗಲಿಲ್ಲ. ವೋಟ್‌ ಪಡೆಯುವ ಉದ್ದೇಶಕ್ಕಾಗಿ ಉತ್ತಮವಾಗಿದ್ದ ರಸ್ತೆಯನ್ನು ಕಿತ್ತು ಹಾಕಿದರು’ ಎಂದು ಮುಸ್ಲಿಂ ಬ್ಲಾಕಿನ 2ನೇ ಕ್ರಾಸ್‌ ನಿವಾಸಿ ಸೈಯ್ಯದ್‌ ಮುಬಾರಕ್‌ ಹೇಳಿದರು.

ಮುಸ್ಲಿಂ ಬ್ಲಾಕ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಇದ್ದು ಜನರು ಪರದಾಡುವಂತಾಗಿದೆ. ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಅದೂ ಅರ್ಧಗಂಟೆಯಲ್ಲಿ ನಿಲ್ಲಿಸುತ್ತಾರೆ. ಹೀಗಾಗಿ ದೂರದ ಬೋರ್‌ವೆಲ್‌ಗಳಿಗೆ ತೆರಳಿ ನೀರು ತರುವ ಪರಿಸ್ಥಿತಿ ಇದೆ. ಕಾವೇರಿಯಲ್ಲಿ 100 ಅಡಿ ನೀರಿದ್ದರೂ ನಮಗೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ನಿವಾಸಿಗಳು ನೋವು ತೋಡಿಕೊಂಡರು.

ಕಾಡಿನಂತಿರುವ ಕೆರೆಯಂಗಳ : ಮಂಡ್ಯ ಕೆರೆಯಂಗಳದಲ್ಲಿ ಗೃಹ ಮಂಡಳಿ ಹಾಗೂ ಮುಡಾ ಬಡಾವಣೆ ಅಭಿವೃದ್ಧಿ ಮಾಡಿ ನಿವೇಶನ ಹಂಚಿವೆ. ಆದರೆ ಅಲ್ಲಿಗೆ ಮೂಲಸೌಲಭ್ಯ ನೀಡದ ಕಾರಣ ಮನೆಕಟ್ಟಿಕೊಂಡು ಜೀವನ ಮಾಡುತ್ತಿರುವ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಮನೆಗಳಿದ್ದು ಗಿಡಗಂಟಿಗಳ ಕಾಡು ನಿರ್ಮಾಣವಾಗಿದೆ. ಹಾವು–ಹಲ್ಲಿಗಳ ವಾಸಸ್ಥಾನವಾಗಿದ್ದು ಜನರು ಓಡಾಡಲು ಭಯಪಡುತ್ತಾರೆ. ಸಮರ್ಪಕ ರಸ್ತೆಯೂ ಇಲ್ಲದ ಕಾರಣ ಸಂಜೆ 6ರ ನಂತರ ಒಬ್ಬರೇ ಓಡಾಡುವುದು ಕಡು ಕಷ್ಟ.

‘ಇಲ್ಲಿ ಬೀದಿ ದೀಪದ ವ್ಯವಸ್ಥೆಯೂ ಇಲ್ಲ, ಹೀಗಾಗಿ ಸದಾ ಭಯದಲ್ಲೇ ಜೀವನ ಮಾಡುವಂತಾಗಿದೆ. ಬಸ್‌ ನಿಲ್ದಾಣಕ್ಕೆ ಹತ್ತಿರವಿದೆ ಎಂಬ ಕಾರಣದಿಂದ ಇಲ್ಲಿ ನಿವೇಶನ ಕೊಂಡು ಮನೆ ನಿರ್ಮಿಸಿದೆವು. ಆದರೆ ಸೌಲಭ್ಯ ವಂಚಿತರಾಗಿ ಜೀವನ ನಡೆಸಬೇಕಾಗಿದೆ. ಕೆಲವು ವೇಳೆ ನೀರು ಪೂರೈಕೆಯೂ ಸ್ಥಗಿತವಾಗುತ್ತದೆ. ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುತ್ತೇವೆ. ಇಲ್ಲಿಯ ಹಲವು ಮನೆಗಳಲ್ಲಿ ಕಳ್ಳತನವಾಗಿದೆ’ ಎಂದು ಕೆರೆಯಂಗಳದ ನಿವಾಸಿ ರಮೇಶ್‌ ಹೇಳಿದರು.

ಕಸದ ರಾಶಿ : ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಕಸದ ಸಮಸ್ಯೆ ಮಿತಿಮೀರಿದೆ. ಶ್ರಮಿಕರು ವಾಸಿಸುತ್ತಿರುವ ಈ ಬಡಾವಣೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಯೂ ಇಲ್ಲದ ಕಾರಣ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತದೆ. ನಗರಸಭೆ ಪೌರಕಾರ್ಮಿಕರು ಇಲ್ಲಿ ಬರುವುದೇ ಅಪರೂಪವಾಗಿದ್ದು ಜನರು ಕಸದ ರಾಶಿಯ ನಡುವೆ ಜೀವನ ಮಾಡುತ್ತಿದ್ದಾರೆ.

ಲಕ್ಷ್ಮಿಜನಾರ್ಧನನ ತೆಪ್ಪೋತ್ಸವ ಪ್ರಸಿದ್ಧಿ

ಸಿಹಿನೀರಿನಕೊಳ ಬಡಾವಣೆಯಲ್ಲಿರುವ ‘ಕೊಳ’ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಡೆಯುವ ಲಕ್ಷ್ಮಿ ಜನಾರ್ಧನ ಸ್ವಾಮಿ ತೆಪ್ಪೋತ್ಸವಕ್ಕೆ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಏಪ್ರಿಲ್‌ ತಿಂಗಳಲ್ಲಿ ನಡೆಯುವ ತೆಪ್ಪೋತ್ಸವಕ್ಕೆ ಪುರಾಣ ಪ್ರಸಿದ್ಧಿ ಇದೆ. ಸುಂದರವಾಗಿರುವ ಈ ಕೊಳದಲ್ಲಿ ಬೇಸಿಗೆಯಲ್ಲೂ ನೀರು ತುಂಬಿರುತ್ತದೆ. ಕೊಳವನ್ನು ಆಗಾಗ ಸ್ವಚ್ಛಗೊಳಿಸುತ್ತಿರುವ ಕಾರಣ ಅಲ್ಲಿ ಸುಂದರ ವಾತಾವರಣವಿದೆ. ಸುತ್ತಲೂ ಮೆಟ್ಟಿಲುಗಳಿದ್ದು ತಿಳಿನೀರು ಗಮನ ಸೆಳೆಯುತ್ತದೆ. ಚಾಮುಂಡೇಶ್ವರಿ ದೇವಾಲಯವೂ ಬಡಾವಣೆಯಲ್ಲಿದೆ.

3ನೇ ವಾರ್ಡ್‌ನ ಮುಸ್ಲಿಂ ಬ್ಲಾಕ್‌ನಲ್ಲಿ ಈದ್ಗಾ ಮೈದಾನವಿದೆ. ಮುಸ್ಲಿಮರ ಪ್ರತಿ ಆಚರಣೆಗಳಲ್ಲಿ ಇಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ರಂಜಾನ್‌ ಆಚರಣೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಾಲಯ, ಮಸೀದಿ ಜೊತೆಗೆ ಕೆರೆಯಂಗಳದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಇದೆ.

ಇನ್ನೆರಡು ದಿನದಲ್ಲಿ ರಸ್ತೆ ಕಾಮಗಾರಿ

‘ಚುನಾವಣೆ ನೀತಿ ಸಂಹಿತೆ ಇದ್ದ ಕಾರಣ ಮುಸ್ಲಿಂ ಬ್ಲಾಕ್‌ನಲ್ಲಿ ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಲ್ಯಾಂಡ್‌ ಆರ್ಮಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ತಡವಾಗಿದೆ. ಜಿಲ್ಲಾಧಿಕಾರಿಗಳು ದಾಖಲೆಗಳಿಗೆ ಸಹಿ ಮಾಡಿದ ಕೂಡಲೇ ಹಣ ಬಿಡುಗಡೆಯಾಗುತ್ತದೆ. ಇನ್ನೆರಡು ದಿನದಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು 3ನೇ ವಾರ್ಡ್‌ ನಗರಸಭೆ ಸದಸ್ಯ ಅನಂತ ಪದ್ಮನಾಭ ತಿಳಿಸಿದರು.

‘ಕೆರೆಯಂಗಳದಲ್ಲಿ ಕೆಲವು ಕಿಡಿಗೇಡಿಗಳು ಸಣ್ಣಪುಟ್ಟ ಕಳ್ಳತನ ಮಾಡಿದ್ದಾರೆ. ಮತ್ತು ಬರುವ ಸೆಲ್ಯೂಷನ್‌, ಡಿಯೋಡ್ರೆಂಟ್‌, ಪೆಟ್ರೋಲ್, ನೇಲ್‌ ಪಾಲಿಶ್‌ಗಳನ್ನು ಸೇವಿಸಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದರು. ಅವರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದೇವೆ. ನಂತರ ಕಳ್ಳತನ ಕಡಿಮೆಯಾಗಿದೆ. ರಾತ್ರಿಯ ವೇಳೆ ಪೊಲೀಸರು ಗಸ್ತು ತಿರುಗುತ್ತಾರೆ. ಸಿಹಿನೀರಿನ ಕೊಳದಲ್ಲಿ ಮೊದಲು ಕಳ್ಳತನವಾಗಿತ್ತು. ಈಗ ಯಾವುದೇ ಕಳ್ಳತನ ಪ್ರಕರಣ ಕಂಡುಬಂದಿಲ್ಲ. ಕೆರೆಯಂಗಳಕ್ಕೆ ಹೆಚ್ಚುವರಿ ಪೊಲೀಸರನ್ನು ಹಾಕಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಕಾರ್ಮಿಕರು ಬೀಡಿ ಕಟ್ಟಿದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಾರೆ. ಹೀಗಾಗಿ ಅಲ್ಲಿ ಕಸ ಜಾಸ್ತಿಯಾಗಿದೆ. ನಗರಸಭೆ ಪೌರ ಕಾರ್ಮಿಕರು ನಿತ್ಯವೂ ಅಲ್ಲಿ ಸ್ವಚ್ಛಗೊಳಿಸುತ್ತಾರೆ. ಟಿಪ್ಪರ್‌ಗಳ ಮೂಲಕ ಕಸ ಸಂಗ್ರಹ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ವಾರ್ಡ್‌ ಡೈರಿ
ವಾರ್ಡ್‌ ಸಂಖ್ಯೆ: 3
ವ್ಯಾಪ್ತಿ: ಕರೆಯಂಗಳದಿಂದ ಮುಸ್ಲಿಂ ಬ್ಲಾಕ್‌
ಪ್ರಮುಖ ಸ್ಥಳಗಳು: ಸಿಹಿನೀರಿನ ಕೊಳ, ಈದ್ಗಾ ಮೈದಾನ, ಕೆಎಸ್‌ಒಯು ಪ್ರಾದೇಶಿಕ ಕೇಂದ್ರ
ಜನಸಂಖ್ಯೆ: 7,500
ನಗರಸಭೆ ಸದಸ್ಯರು: ಅನಂತ ಪದ್ಮನಾಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT