ಮಂಡ್ಯ: ‘ಡಿಸೆಂಬರ್ 20, 21 ಮತ್ತು 22ರಂದು ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನೋಂದಣಿ, ವಸತಿ ಹಾಗೂ ಇನ್ನಿತರ ಸಮಿತಿಗಳ ಬೇಡಿಕೆ ಪರಿಶೀಲಿಸಿ ಸುಗಮ ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮದ್ದೂರು ಶಾಸಕ ಮತ್ತು ಸಾರಿಗೆ ಸಮಿತಿ ಅಧ್ಯಕ್ಷ ಕೆ.ಎಂ. ಉದಯ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾರಿಗೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳಿಗೆ ವೇದಿಕೆ ಕಾರ್ಯಕ್ರಮದ ಬಳಿ ಕರೆದುಕೊಂಡು ಹೋಗಲು ಸೂಕ್ತ ವಾಹನಗಳ ವ್ಯವಸ್ಥೆ ಮಾಡಬೇಕು. ವೇದಿಕೆ ಕಾರ್ಯಕ್ರಮದ ಸ್ವಲ್ಪ ದೂರದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವುದು ಮುಖ್ಯವಾಗಿದೆ ಎಂದರು.
ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಸುಧಾಮ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 233 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ಗ್ರಾಮ ಪಂಚಾಯಿತಿಯಿಂದ 200 ಮಂದಿ ಸಮ್ಮೇಳನಕ್ಕೆ ಬರುವಂತೆ ತಿಳಿಸಿ ಅವರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಮ್ಮೇಳನಕ್ಕೆ ಕರೆತರಲು ವ್ಯವಸ್ಥೆ ಮಾಡಬಹುದು’ ಎಂದರು.
ಸಮಿತಿ ಸಂಚಾಲಕರಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಹೇಮಾವತಿ ಮಾತನಾಡಿ, ಹಾವೇರಿ ಸಮ್ಮೇಳನದಲ್ಲಿ ಬಳಸಿಕೊಂಡ ವಾಹನಗಳ ಸಂಖ್ಯೆ ಮತ್ತು ಜಿಲ್ಲೆಯಲ್ಲಿ ಸಮ್ಮೇಳನಕ್ಕೆ ಬಳಕೆಯಾಗುವ ವಿವಿಧ ರೀತಿಯ ವಾಹನಗಳ ಸಂಖ್ಯೆಯನ್ನು ತಿಳಿಸಿದರು.
ಶಾಲಾ ವಾಹನ ಬಳಸಿಕೊಳ್ಳಿ: ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ ಮಾತನಾಡಿ, ‘ಅಗತ್ಯಕ್ಕೆ ತಕ್ಕಂತೆ ಶಾಲಾ ವಾಹನಗಳನ್ನು ಬಳಸಿಕೊಳ್ಳಬಹುದು. ವಿವಿಧ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರ ಸಭೆ ಕರೆದು ವಾಹನಗಳನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ಪಡೆಯೋಣ ಎಂದರು.
ಸಮ್ಮೇಳನದ ಹಿಂದಿನ ದಿನ ರಾಜ್ಯದ ವಿವಿಧೆಡೆಗಳಿಂದ ಪ್ರತಿನಿಧಿಗಳು ಆಗಮಿಸುವುದರಿಂದ ಒಂದು ದಿನ ಮುಂಚೆಯೇ ವಾಹನ ಸೌಲಭ್ಯ ಒದಗಿಸಬೇಕು. ಸಮ್ಮೇಳನಕ್ಕೆ ಬಸ್ ಒದಗಿಸುವುದರ ಜೊತೆಗೆ ಆಸಕ್ತರು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮಂಡ್ಯ ದರ್ಶನ ಮಾಡಲು ಅನುಕೂಲವಾಗುವಂತೆ ವಾಹನಗಳನ್ನು ನಿಗದಿಗೊಳಿಸಬೇಕು ಎಂದು ಸಲಹೆ ನೀಡಿದರು.
ಸಮಿತಿ ಸದಸ್ಯ, ವಕೀಲ ಟಿ.ಎಸ್.ಸತ್ಯಾನಂದ, ‘ಸಮ್ಮೇಳನಕ್ಕೆ ಬಳಸಿಕೊಳ್ಳುವ ವಾಹನಗಳ ಚಲನವಲನ ತಿಳಿಯಲು ಕ್ಯೂಆರ್ ಕೋಡ್ ಮತ್ತು ಜಿಪಿಎಸ್ ಬಳಕೆ ಮಾಡಿಕೊಳ್ಳಬಹುದು’ ಎಂದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಹುಸ್ಕೂರು ಕೃಷ್ಣೇಗೌಡ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ಬಿಇಒ ಮಹದೇವು, ಖಾಸಗಿ ವಾಹನಗಳ ಮಾಲೀಕರ ಸಂಘದ ಅಧ್ಯಕ್ಷ ಭಕ್ತವತ್ಸಲ, ವಿಶೇಷಾಧಿಕಾರಿ ಚಂದ್ರಶೇಖರ್, ಜಿಲ್ಲಾ ಕಸಾಪದ ಬಿ.ಎಂ. ಅಪ್ಪಾಜಪ್ಪ, ಸುನಿಲ್ ಕುಮಾರ್, ಹೊಳಲು ಶ್ರೀಧರ್, ಕೃಷ್ಣ, ಚೇತನಕುಮಾರ್, ಜಿ.ವಿ.ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.