ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಬಿ ಬೆಟ್ಟದಲ್ಲಿ ‘ಟ್ರಯಲ್ ಬ್ಲಾಸ್ಟ್‌’: ಮುಂದುವರಿದ ‘ಡ್ರಿಲ್ಲಿಂಗ್‌’ ಕಾರ್ಯ

Published 4 ಜುಲೈ 2024, 14:03 IST
Last Updated 4 ಜುಲೈ 2024, 14:03 IST
ಅಕ್ಷರ ಗಾತ್ರ

ಪಾಂಡವಪುರ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ‘ಟ್ರಯಲ್ ಬ್ಲಾಸ್ಟ್‌’ ನಡೆಸಲು ಡ್ರಿಲ್ಲಿಂಗ್ (ಕುಳಿ ಕೊರೆಯುವ) ಕೆಲಸ ಗುರುವಾರವೂ ಮುಂದುವರಿಯಿತು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಿಗ್ ಬೋರ್ ಮೂಲಕ ಡ್ರಿಲ್ಲಿಂಗ್ ಮಾಡಲಾಯಿತು. ಜಾರ್ಖಂಡ್ ಧನ್‌ಭಾಗ್‌ನ ಸೆಂಟ್ರಲ್ ಇನ್‌ಸ್ಟಿಟ್ಯೂಟ್‌ ಆಫ್‌ ಮೈನಿಂಗ್ ಅಂಡ್ ಫ್ಯೂಯಲ್ ರೀಸರ್ಚ್ ಸಂಸ್ಥೆಯ ವಿಜ್ಞಾನಿಗಳ ತಂಡ ‘ಟ್ರಯಲ್ ಬ್ಲಾಸ್ಟ್’ ನಡೆಸಲು ಆಗಮಿಸುತ್ತಿದ್ದು, ಅವರ ಸೂಚನೆಯಂತೆ ಆಯ್ದ ಪ್ರದೇಶದಲ್ಲಿ ಡ್ರಿಲ್ಲಿಂಗ್ ಮಾಡಲಾಗುತ್ತಿದೆ.

ಸರ್ವೇ ನಂ.2ರ ಎಸ್‌ಎಲ್‌ವಿ, ಎಸ್‌ಜಿಜಿ ಹಾಗೂ ಶ್ರೀರಾಮಲಿಂಗೇಶ್ವರ ಕ್ವಾರೆ ಪ್ರದೇಶದಲ್ಲಿ ಡ್ರಿಲ್ಲಿಂಗ್ ಕಾರ್ಯ ನಡೆಸಿದರು. ಬುಧವಾರ ಕೆಆರ್‌ಎಸ್ ಅಣೆಕಟ್ಟೆಯಿಂದ ಕೇವಲ 5.8 ಕಿ.ಮೀ ವ್ಯಾಪ್ತಿಯ ದೂರದಲ್ಲಿರುವ ಸರ್ವೇ ನಂ.01ರ ಗಣಿಗಾರಿಕೆ ಪ್ರದೇಶದಲ್ಲಿ ಕುಳಿ ಕೊರೆಯಲಾಗಿತ್ತು. 

‘ಡ್ರಿಲ್ಲಿಂಗ್ ಯಂತ್ರದ ಮೂಲಕ ಕಲ್ಲು ಬಂಡೆಗಳ ಮೇಲೆ ಕುಳಿ ಕೊರೆಯುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರವೂ ಸಹ ಕುಳಿ ಕೊರೆಯವ ಕಾರ್ಯ ಮುಂದುವರಿಯುವ ಸಾಧ್ಯತೆಗಳಿವೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿಜ್ಞಾನಿ ನಾಗಮಧು ತಿಳಿಸಿದರು.

ವಿಜ್ಞಾನಿಗಳ ತಂಡವು ಜುಲೈ 6 ಅಥವಾ 7ರಂದು ಆಗಮಿಸುವ ಸಾಧ್ಯತೆಗಳಿದ್ದು, ಬಳಿಕ ಬೇಬಿಬೆಟ್ಟದ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಸಾಧ್ಯತೆಗಳಿವೆ.

ಪೊಲೀಸ್ ಬಂದೋಬಸ್ತ್

ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವುದಕ್ಕೆ ಪರ–ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಡ್ರಿಲಿಂಗ್ ಕಾರ್ಯ ನಡೆಯುತ್ತಿದೆ. ಕೆಆರ್‌ಎಸ್ ಹಾಗೂ ಪಾಂಡವಪುರದಿಂದ ಗಣಿಗಾರಿಕೆ ಪ್ರದೇಶಕ್ಕೆ ಬರುವ ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಗೋಬ್ಯಾಕ್ ಚಳವಳಿ ಸಾಧ್ಯತೆ

ವಿಜ್ಞಾನಿಗಳ ಟ್ರಯಲ್ ಬ್ಲಾಸ್ಟ್ ನಡೆಸುವ ವೇಳೆ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಕಾರ್ಯಕರ್ತರು ಗೋಬ್ಯಾಕ್ ಚಳವಳಿ ನಡೆಸುವ ಸಾಧ್ಯತೆಗಳಿವೆ. ಈ ಹಿಂದೆಯೂ ಟ್ರಯಲ್ ಬ್ಲಾಸ್ಟ್ ಮಾಡಲು ಬಂದಿದ್ದ ಗಣಿ ವಿಜ್ಞಾನಿಗಳಿಗೆ ಮೂರು ಬಾರಿ ಗೋಬ್ಯಾಕ್ ಚಳವಳಿ ನಡೆಸು ವಾಪಸ್‌ ಕಳುಹಿಸುವಲ್ಲಿ ರೈತ ಸಂಘ ಯಶಸ್ವಿಯಾಗಿತ್ತು. ಅಂತೆಯೇ ಈ ಬಾರಿಯೂ ಸಹ ಗೋಬ್ಯಾಕ್ ಚಳವಳಿ ನಡೆಸುತ್ತೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. 

‘ಟ್ರಯಲ್‌ ಬ್ಲಾಸ್ಟ್‌’ ವಿರೋಧಿಸಿ ಪ್ರತಿಭಟನೆ ಇಂದು

ಮಂಡ್ಯ: ರೈತರ ಜೀವನಾಡಿ ಕೆ.ಆರ್.ಎಸ್. ಡ್ಯಾಂ ಸಮೀಪ ಬೇಬಿಬೆಟ್ಟದಲ್ಲಿ ‘ಟ್ರಯಲ್‌ ಬ್ಲಾಸ್ಟ್’ ನಡೆಸುವುದನ್ನು ವಿರೋಧಿಸಿ ಜುಲೈ 5ರಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಪ್ರಗತಿಪರ-ರೈತಪರ ಹೋರಾಟಗಾರಿಂದ ನಗರದ ಜೆ.ಸಿ. ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.

ಡ್ಯಾಂ ಸಮೀಪ ಟ್ರಯಲ್‌ ಬ್ಲಾಸ್ಟ್ ಬೇಡ, ಕಾವೇರಿ ಕೊಳ್ಳಭಾಗದ ರೈತರ ವಿರೋಧದ ನಡೆವೆಯೂ ಇಂತಹ ದುಸ್ಸಾಹಸಕ್ಕೆ ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ. 

ನಗರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಜನತಾದರ್ಶನ ಕಾರ್ಯಕ್ರಮಕ್ಕೆ ಬರುವುದರಿಂದ ರೈತರು-ಹೋರಾಟಗಾರರು ತೀವ್ರ ಒತ್ತಡ ತಂದು ‘ಟ್ರಯಲ್‌ ಬ್ಲಾಸ್ಟ್’ ನಿಲ್ಲಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ರೈತಪರ-ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ರೈತಮುಖಂಡರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT