ಗುರುವಾರ , ಜನವರಿ 28, 2021
27 °C
ಹಕ್ಕಿ ಜ್ವರ ಭೀತಿ: ಹಕ್ಕಿಗಳ ಹಿಕ್ಕೆ ಸಂಗ್ರಹ; ಪಕ್ಷಿ ವೀಕ್ಷಿಸಲು ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ

ರಂಗನತಿಟ್ಟಿನಲ್ಲಿ ಹಕ್ಕಿಗಳ ಚಲನವಲನದ ಮೇಲೆ ನಿಗಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದರಿಂದ ರಂಗನತಿಟ್ಟು ಪಕ್ಷಿಧಾಮದ ಹಕ್ಕಿಗಳ ಚಲನ ವಲನದ ಮೇಲೂ ನಿಗಾ ಇರಿಸಲಾಗಿದೆ.

ಪಕ್ಷಿಧಾಮಕ್ಕೆ ಬುಧವಾರ ಭೇಟಿ ನೀಡಿದ್ದ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್‌ ಕೆ.ಸಿ. ಪ್ರಶಾಂತಕುಮಾರ್‌, ಸ್ಥಳೀಯ ಮತ್ತು ವಲಸೆ ಪಕ್ಷಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪಶುಪಾಲನಾ ಇಲಾಖೆಯ ಡಾ.ಶಿವಲಿಂಗಯ್ಯ ಮತ್ತು ಅರಣ್ಯ ಇಲಾಖೆ ಆರ್‌ಎಫ್‌ಒ ಕೆ.ಸುರೇಂದ್ರ ಅವರ ಚರ್ಚೆ ನಡೆಸಿದರು. ಪಕ್ಷಿಧಾಮದ ವಿವಿಧೆಡೆ ಸುತ್ತಾಡಿ ದೋಣಿ ನಡೆಸುವವರು ಮತ್ತು ವನಪಾಲಕರಿಂದಲೂ ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು.

‘ಕೆಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಕೇಂದ್ರ ಅರಣ್ಯ ಸಚಿವಾಲಯದಿಂದ ನಿರ್ದೇಶನ ಬಂದಿದೆ. ಹಾಗಾಗಿ ಪ್ರತಿ ಜಾತಿಯ ಹಕ್ಕಿಗಳ ಬಗ್ಗೆ ನಿಗಾ ವಹಿಸಿದ್ದೇವೆ. ವಲಸೆ ಪಕ್ಷಿಗಳ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿದೆ. ಪಶುಪಾಲನಾ ಇಲಾಖೆಯ ಜತೆಗೂಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಾರಕ್ಕೆ ಎರಡು ಬಾರಿ ಹಕ್ಕಿಗಳ ಹಸಿ ಹಿಕ್ಕೆ ಸಂಗ್ರಹಿಸಿ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆಯಲಾಗುವುದು’ ಎಂದು ಡಿಸಿಎಫ್‌ ಕೆ.ಸಿ.ಪ್ರಶಾಂತಕುಮಾರ್‌ ತಿಳಿಸಿದರು.

‌ಡಿಪ್‌ ಟ್ಯಾಂಕ್‌: ಪಕ್ಷಿಧಾಮಕ್ಕೆ ಬರುವವರು ವೈರಾಣು ನಿರೋಧಕ ದ್ರಾವಣದಲ್ಲಿ ಕಾಲು ಅದ್ದಿಕೊಂಡು ಒಳ ಬರುವಂತೆ ಡಿಪ್‌ ಟ್ಯಾಂಕ್‌ ಸಿದ್ಧಪಡಿಸಲಾಗಿದೆ. ಬುಧವಾರದಿಂದ ಪಕ್ಷಿಧಾಮದ ಎರಡು ಪ್ರಮುಖ ದಾರಿಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದರು.

ಸ್ಯಾನಿಟೈಸರ್‌ ಸಿಂಪಡಣೆ: ಪಕ್ಷಿಧಾಮದ ಎಲ್ಲ ಪಾದಾಚಾರಿ ಮಾರ್ಗಗಳು, ಕಾರಿಡಾರ್‌, ಟಿಕೆಟ್‌ ಕೌಂಟರ್‌, ವೀಕ್ಷಣಾ ಗೋಪುರ, ದೋಣಿ ವಿಹಾರ ತಾಣಗಳಿಗೆ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ. ವಾಹನ ಪಾರ್ಕಿಂಗ್‌, ಕ್ಯಾಂಟೀನ್‌ ಆವರಣದಲ್ಲಿಯೂ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ.

ವಲಸೆ ಕಾಲ: ಇದು ಪಕ್ಷಿಗಳ ವಲಸೆ ಕಾಲ. ವಂಶಾಭಿವೃದ್ಧಿಗಾಗಿ ರಾಜಸ್ಥಾನದ ಭರತ್‌ಪುರ್‌, ಮಂದಗದ್ದೆ, ಶ್ರೀಲಂಕಾದಿಂದಲೂ ಪ್ರತಿ ವರ್ಷ ಡಿಸೆಂಬರ್‌ ಕೊನೆ ಮತ್ತು ಜನವರಿ ಮೊದಲ ವಾರದಲ್ಲಿ ವಿವಿಧ ಜಾತಿಯ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಸ್ಪೂನ್‌ಬಿಲ್‌, ಓಪನ್‌ಬಿಲ್‌, ಪೇಂಟೆಡ್‌ ಸ್ಟಾರ್ಕ್‌ ಪಕ್ಷಿಗಳು ಈಗಾಗಲೇ ಬಂದಿಳಿಯುತ್ತಿವೆ. ಹೆಜ್ಜಾರ್ಲೆ (ಪೆಲಿಕಾನ್‌) ಪಕ್ಷಿಗಳು ಎರಡು ತಿಂಗಳ ಹಿಂದೆಯೇ ಬಂದಿದ್ದು, ಮರಿಗಳ ಪೋಷಣೆಯಲ್ಲಿ ತೊಡಗಿವೆ. ಹೊರ ರಾಜ್ಯಗಳಿಂದ ಪಕ್ಷಿಗಳು ವಲಸೆ ಬರುತ್ತಿರುವುದರಿಂದ ಕಟ್ಟೆಚ್ಚರ ವಹಿಸುವುದು ಅನಿವಾರ್ಯವಾಗಿದೆ ಎಂದು ಪಕ್ಷಿಧಾಮದ ಸಿಬ್ಬಂದಿ ತಿಳಿಸಿದರು.

ನಿರ್ಬಂಧ ಇಲ್ಲ: ರಾಜ್ಯದಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಇಲ್ಲದೆ ಇರುವುದರಿಂದ ರಂಗನತಿಟ್ಟಿಗೆ ಪ್ರವಾಸಿಗರು ವಾರದ ಎಲ್ಲ ದಿನವೂ ಭೇಟಿ ನೀಡಬಹುದು. ಪ್ರವೇಶ ನಿರ್ಬಂಧಿಸುವ ಪರಿಸ್ಥಿತಿ ಬಂದರೆ ಮುಂಚಿತವಾಗಿ ತಿಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.