ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ವ್ಯಕ್ತವಾಗಿದೆ: ಚಲುವರಾಯಸ್ವಾಮಿ

Last Updated 26 ಜನವರಿ 2023, 5:57 IST
ಅಕ್ಷರ ಗಾತ್ರ

ಮಂಡ್ಯ: ‘ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ವ್ಯಕ್ತವಾಗಿದೆ. ಆಳುವ ಸರ್ಕಾರ ಜನಪರ ಕಾರ್ಯಕ್ರಮ ನೀಡದೆ ಪಡಿತರ ಅಕ್ಕಿ ಪ್ರಮಾಣ ಕಡಿತಗೊಳಿಸಿ ಜನರಿಗೆ ದ್ರೋಹ ಎಸಗಿರುವುದರಿಂದ ಜನ ಕಾಂಗ್ರೆಸ್‌ ಪರವಾಗಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.

ಜ.27ರಂದು ನಡೆಯಲಿರುವ ಪ್ರಜಾಧ್ವನಿ ಸಮಾವೇಶದ ಸಿದ್ಧತೆಯನ್ನು ಬುಧವಾರ ಪರಿಶೀಲಿಸಿ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಪರ ಆಡಳಿತ, ಜನಪ್ರಿಯ ಯೋಜನೆಗಳ ಮೂಲಕ ಜನರನ್ನು ಆಕರ್ಷಿಸಿ ಮತ ಪಡೆಯುವ ಬದಲು ಪದೇ ಪದೇ ರಾಷ್ಟ್ರೀಯ ನಾಯಕರಾದ ನರೇಂದ್ರಮೋದಿ ಹಾಗೂ ಅಮಿತ್‌ ಶಾ ಅವರ ವರ್ಚಸ್ಸನ್ನು ಮುನ್ನಲೆಗೆ ತರುತ್ತಾರೆ. ಆ ಮೂಲಕ ರಾಜ್ಯದ ಬಿಜೆಪಿ ಮುಖಂಡರ ಮೇಲೆ ನಮಗೆ ವಿಶ್ವಾಸವಿಲ್ಲ ಎಂಬುದನ್ನು ರುಜುವಾತುಪಡಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಬಿಜೆಪಿ ನಾಯಕತ್ವದ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ವಿಶ್ವಾಸವಿಲ್ಲ. ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡರೇ ಜನಪ್ರತಿನಿಧಿ ಇದ್ದಾಗ ಅನ್ಯ ಜಿಲ್ಲೆಯ ಶಾಸಕರಿಗೆ ಉಸ್ತುವಾರಿ ಪಟ್ಟ ನೀಡಿದರೆ ಯಾವ ಮಟ್ಟದ ಅಭಿವೃದ್ಧಿಯಾಗುತ್ತದೆ ಎಂಬುದನ್ನು ಮತದಾರರು ಅರ್ಥೈಸಿಕೊಳ್ಳಬೇಕು. ಕೆ.ಗೋಪಾಲಯ್ಯ ಮತ್ತು ಕೆ.ಸಿ.ನಾರಾಯಣಗೌಡ ಅವರು ಒಕ್ಕಲಿಗ ಮುಖಂಡರಲ್ಲವೇ, ಅವರಿಂದ ಸಾಧ್ಯವಾಗದ ಸಮುದಾಯದ ಮತ ಸೆಳೆಯುವ ಪ್ರಕ್ರಿಯೆ ಅಶೋಕ ಅವರಿಂದ ಸಾಧ್ಯವೇ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜನವರಿ ಅಂತ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆಯಾಗಲಿದೆ. ಪ್ರಜಾಧ್ವನಿ ಸಮಾವೇಶ ಯಶಸ್ಸಿಗೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 75 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ವ್ಯಕ್ತವಾಗಿದೆ. ಆಳುವ ಸರ್ಕಾರ ಜನಪರ ಕಾರ್ಯಕ್ರಮ ನೀಡದಿರುವುದರಿಂದ ಕಾಂಗ್ರೆಸ್‌ಗೆ ವರದಾನವಾಗಲಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾ ಘಟಕ ಅಧ್ಯಕ್ಷ ಸಿ.ಡಿ.ಗಂಗಾಧರ್, ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ರವಿಕುಮಾರ್‌ ಗಣಿಗ, ಕೀಲಾರ ರಾಧಾಕೃಷ್ಣ, ಯು.ಸಿ.ಶಿವಕುಮಾರ್, ಸಿದ್ಧಾರೂಢ ಸತೀಶ್‌ಗೌಡ, ಎಂ.ಎಸ್.ಚಿದಂಬರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT