ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಪಾತೋತ್ಸವ ನೆಪದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ?

Last Updated 14 ಜನವರಿ 2020, 14:15 IST
ಅಕ್ಷರ ಗಾತ್ರ

ಮಂಡ್ಯ: ಮಳವಳ್ಳಿ ತಾಲ್ಲೂಕು ಗಗನಚುಕ್ಕಿ ಜಲಪಾತದಲ್ಲಿ ಜನವರಿ 18ರಿಂದ ಎರಡು ದಿನ ಜಲಪಾತೋತ್ಸವ ನಡೆಯಲಿದ್ದು, ಇದೇ ನೆಪದಲ್ಲಿ ಜಿಲ್ಲಾಡಳಿತ ತಮಿಳುನಾಡಿಗೆ ನೀರು ಹರಿಸಲು ಉದ್ದೇಶಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ನೀರಾವರಿ ನಿಗಮಮಂಗಳವಾರ ವಿಶ್ವೇಶ್ವರಯ್ಯ ನಾಲೆಗಳಿಗೆ 2 ಸಾವಿರ ಕ್ಯುಸೆಕ್‌ ನೀರು ಹರಿಸಿದೆ. ಜಲಪಾತೋತ್ಸವಕ್ಕಾಗಿ ಎರಡು ದಿನ ನದಿಗೂ ನೀರು ಹರಿಸಲಿದೆ. ಇದರಿಂದ ನಾಲ್ಕೈದು ಟಿಎಂಸಿ ಅಡಿ ತಮಿಳುನಾಡಿಗೆ ಹರಿದು ಹೋಗುತ್ತದೆ. ಹೊರಹರಿವು ಇದ್ದಾಗ ಜಲಪಾತೋತ್ಸವ ಮಾಡದೆ ಜಲಾಶಯದಲ್ಲಿ ನೀರು ಕಡಿಮೆಯಾದ ನಂತರ ಜೀವಜಲ ವ್ಯರ್ಥಮಾಡಿ ಜಲಪಾತೋತ್ಸವ ಮಾಡುವ ಅವಶ್ಯಕತೆ ಇಲ್ಲ. ವಿರೋಧದ ನಡುವೆಯೂ ಉತ್ಸವ ಆಚರಣೆಗೆ ಮುಂದಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯಲ್ಲಿ ಪ್ರವಾಹ ಬಂದಾಗ ನದಿಯಲ್ಲಿ ನಿರಂತರವಾಗಿ ನೀರು ಹರಿಯಿತು. ಜಲಾಶಯ ನೂರು ದಿನಗಳ ಕಾಲ ಭರ್ತಿಯಾಗಿದ್ದಾಗಲೂ ಹೊರಹರಿವು ಇತ್ತು. ಆಗ ಜಲಪಾತೋತ್ಸವ ಮಾಡಬಹುದಾಗಿತ್ತು. ಜಲಾಶಯದಲ್ಲಿ ಈಗ 120 ಅಡಿ ನೀರಿದ್ದು ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟು ಜಲಪಾತೋತ್ಸವ ಆಚರಣೆ ಮಾಡಬೇಕಾಗಿಲ್ಲ. ಅನುದಾನ ವಾಪಸ್‌ ಹೋಗುವುದನ್ನು ತಡೆಯಲು ಜಿಲಾಡಳಿತ ತರಾತುರಿಯಲ್ಲಿ ಉತ್ಸವ ಆಚರಿಸುತ್ತಿದೆ ಎಂದು ಆರೋಪಿಸಿದ್ದಾರೆ.

‘ಬೇಸಿಗೆ ಬೆಳೆಗೆ ನೀರು ಹರಿಸುವ ಬಗ್ಗೆ ಜಿಲ್ಲಾಡಳಿತ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಹೊಟ್ಟಲು ಹಾಕಿಕೊಳ್ಳಲು ಅವಧಿ ಮೀರುತ್ತಿದ್ದು ರೈತರು ಗೊಂದಲದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಟ್ಟು ಜಲಪಾತೋತ್ಸವ ಮಾಡಿದರೆ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಎಚ್ಚರಿಸಿದರು.

‘ಸಂಕ್ರಾಂತಿ ಹಬ್ಬದ ಅಂಗವಾಗಿ ನಾಲೆಗಳಿಗೆ ನೀರು ಹರಿಸಲಾಗಿದೆ. ನಾಲೆಗಳಿಗೆ ಬಿಟ್ಟಿರುವ ನೀರು, ನದಿಯಲ್ಲಿ ಸಾಮಾನ್ಯವಾಗಿ ಹರಿಯುವ ನೀರಿನಿಂದ ಜಲಪಾತೋತ್ಸವ ಆಚರಿಸಲಾಗುವುದು. ಉತ್ಸವಕ್ಕೆ ಪ್ರತ್ಯೇಕವಾಗಿ ನೀರು ಹರಿಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT