ಶನಿವಾರ, ಜನವರಿ 29, 2022
23 °C
ಶ್ರೀರಂಗಪಟ್ಟಣ: ಚಾರಿತ್ರಿಕ, ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆಗಳ ದುಸ್ಥಿತಿ; ಪ್ರವಾಸಿಗರ ಪರದಾಟ

ದಾರಿ ಯಾವುದಯ್ಯಾ ಗೌತಮ ಕ್ಷೇತ್ರಕ್ಕೆ?

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಚಾರಿತ್ರಿಕ ಮತ್ತು ಧಾರ್ಮಿಕ ಕಾರಣಗಳಿಂದ ಗುರುತಿಸಿ ಕೊಂಡಿರುವ ಪಟ್ಟಣ ಮತ್ತು ಆಸುಪಾಸಿನ ಪ್ರವಾಸಿ, ಶ್ರದ್ಧಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ.

ಪಟ್ಟಣ ಸಮೀಪದ ಗಂಜಾಂ ಬಳಿಯ ದೊಡ್ಡ ಮತ್ತು ಚಿಕ್ಕ ಗೋಸಾಯಿಘಾಟ್‌ ಸಂಪರ್ಕಿಸುವ ರಸ್ತೆಗಳು ಗುಂಡಿ ಬಿದ್ದಿವೆ. ಗೋಸಾಯಿಘಾಟ್‌ನಲ್ಲಿರುವ ಕಾಶಿ ವಿಶ್ವನಾಥ ಸೇರಿದಂತೆ ವಿವಿಧ ದೇವಾಲಯಗಳು ಮತ್ತು ಕೂಗಳತೆ ದೂರದಲ್ಲಿರುವ ಚಿಕ್ಕ ಗೋಸಾಯಿಘಾಟ್‌ನ ಈಶ್ವರನ ದೇಗುಲಕ್ಕೆ ಪ್ರತಿ ದಿನ ನೂರಾರು ಭಕ್ತರು ಬರುತ್ತಾರೆ. ಅಸ್ಥಿ ವಿಸರ್ಜನೆ ಮತ್ತು ಪಿಂಡ ಪ್ರಧಾನಕ್ಕೆ ಹೆಸರಾದ ಕಾವೇರಿ ತೀರದ ದೊಡ್ಡ ಗೋಸಾಘಾಟ್‌ಗೆ ಪ್ರತಿ ದಿನ 500ಕ್ಕೂ ಹೆಚ್ಚು ವಾಹನಗಳು ಬಂದು ಹೋಗುತ್ತವೆ. ಗಂಜಾಂನಿಂದ ಒಂದೂವರೆ ಕಿ.ಮೀ. ದೂರದ ಈ ತಾಣಕ್ಕೆ ತಲುಪಲು ಅರ್ಧ ತಾಸಿಗೂ ಹೆಚ್ಚು ಸಮಯ ಬೇಕಾಗುತ್ತದೆ.

ತಾಲ್ಲೂಕಿನ ದೊಡ್ಡೇಗೌಡನ ಕೊಪ್ಪಲು ಬಳಿಯ ಗೌತಮ ಕ್ಷೇತ್ರಕ್ಕೆ ದಾರಿಯೇ ಇಲ್ಲ ಎಂಬಂತಾಗಿದೆ. ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಕ್ಷೇತ್ರಕ್ಕೆ ತಲುಪಬೇಕಾದರೆ ಕಾವೇರಿ ನದಿಯನ್ನು ದಾಟಿ ಬರಬೇಕು. ಮಳೆಗಾಲದಲ್ಲಿ ಗೌತಮ ಕ್ಷೇತ್ರದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತ್ತದೆ. ಈ ದ್ವೀಪದಲ್ಲಿ ವಾಸಿಸುವ ಗಜಾನನ ಸ್ವಾಮೀಜಿ ಮತ್ತು ಪರಿವಾರ ನದಿಯ ನೀರಿನ ಮಟ್ಟ ಇಳಿಯುವವರೆಗೆ ಬಂಧಿಯಾಗುತ್ತಾರೆ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಜಲ ದಿಗ್ಬಂಧನದ ಉಂಟಾಗುತ್ತದೆ.

‘ಗೌತಮ ಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾದ ಗುಹೆಯನ್ನು ವೀಕ್ಷಿಸಲು, ಚಂದ್ರಮೌಳೇಶ್ವರಸ್ವಾಮಿ ದೇವಾಲಯ ಮತ್ತು ಕೃಷ್ಣಾನಂದ ಭಾರತಿ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಲು ಜಿಲ್ಲೆ, ಹೊರ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಆದರೆ ಈ ಕ್ಷೇತ್ರಕ್ಕೆ ರಸ್ತೆ ಸಂಪರ್ಕ ಇಲ್ಲದ ಕಾರಣ ನದಿಯ ಆಚೆ ದಡದಲ್ಲೇ ನಿಂತು ಕೈ ಮುಗಿದು ವಾಪಸ್ಸಾಗುತ್ತಾರೆ’ ಎಂದು ಗೌತಮ ಕ್ಷೇತ್ರದ ಮುಖ್ಯಸ್ಥ ಗಜಾನನ ಸ್ವಾಮೀಜಿ ಸಮಸ್ಯೆ ತೋಡಿಕೊಳ್ಳುತ್ತಾರೆ.

ಪಟ್ಟಣದ ಚಂದಗಾಲು ರಸ್ತೆಯಲ್ಲಿರುವ ಗುಲಾಂ ಅಲಿಖಾನ್‌ ಗುಂಬ್ಚಿ ಸ್ಮಾರಕದ ಸಂಪರ್ಕ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಪಟ್ಟಣದ ಜಾಮಿಯಾ ಮಸೀದಿಗೆ ಹೋಗುವ ರಸ್ತೆಯಲ್ಲಿ, ಕೃಷಿ ಇಲಾಖೆ ಕಚೇರಿ ತಿರುವಿನಲ್ಲಿ ಕೊರಕಲು ನಿರ್ಮಾಣವಾಗಿದೆ. ತಾಲ್ಲೂಕಿನ ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರ ದೇವಾಲಯ ಮತ್ತು ಗೆಂಡೆಹೊಸಹಳ್ಳಿ ಪಕ್ಷಿಧಾಮ ಸಂಪರ್ಕ ರಸ್ತೆಗಳು ಹಾಳಾಗಿವೆ. ಪಟ್ಟಣದ ಗಂಜಾಂ ವೃತ್ತದ ರಸ್ತೆಯಲ್ಲಿ ಡಾಂಬರು ಎಲ್ಲಿದೆ ಎಂದು ಹುಡುಕಬೇಕಾಗಿದೆ. ಪಟ್ಟಣದ ಮುಖ್ಯ ರಸ್ತೆ ಕಿರಿದಾದ ಓಣಿಯಂತಿದ್ದು, ವಾಹನ ಸವಾರರು ನಿತ್ಯವೂ ಟ್ರಾಫಿಕ್‌ ಜಾಮ್‌ ಕಿರಿ ಕಿರಿ ಅನುಭವಿಸುತ್ತಾರೆ.

‘ಗೋಸಾಯಿಘಾಟ್‌ ಸಂಪರ್ಕ ರಸ್ತೆಯ ಸ್ಥಿತಿಗತಿ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಾಗುವುದು. ಈ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಗೆ ಕಳುಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಡಾ.ಮಾನಸಾ ಹೇಳಿದ್ದಾರೆ.

ಲೋಕೋಪಯೋಗಿ ಮತ್ತು ಪ್ರವಾ ಸೋದ್ಯಮ ಇಲಾಖೆ ಅಧಿಕಾರಿ ಗಳು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.