ಯುವ ಕಾಂಗ್ರೆಸ್: ಜಿಲ್ಲಾಧ್ಯಕ್ಷ ಹುದ್ದೆಗೆ ಪೈಪೋಟಿ

ಮಂಡ್ಯ: ರಾಜ್ಯ ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಬಿರುಸು ಪಡೆದುಕೊಂಡಿದ್ದು ಜಿಲ್ಲಾ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ 10 ಜನರ ನಡುವೆ ಪೈಪೋಟಿ ಏರ್ಪಟ್ಟಿದೆ.
ರಾಜ್ಯ ಮಟ್ಟದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆ ಸೇರಿದಂತೆ ಆಯಾ ಜಿಲ್ಲೆಗಳ ಜಿಲ್ಲಾ ಯುವ ಘಟಕದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚುನಾವಣೆ ನಡೆಯುತ್ತಿದೆ. ಮಂಡ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಜ.12ಕ್ಕೆ ನಿಗದಿಯಾಗಿದ್ದು ಪ್ರತಿ ತಾಲ್ಲೂಕು ಕೇಂದ್ರಗಳ ಪಟ್ಟಣ ಹಾಗೂ ಗ್ರಾಮಾಂತರ ಬ್ಲಾಕ್‌ಗಳಿಗೂ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ಅನ್ಯರಾಜ್ಯಗಳ ಯುವ ಮುಖಂಡರನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು ಜಿಲ್ಲೆಗೆ ಹಿಮಾಚಲ ಪ್ರದೇಶದ ಯುವ ಮುಖಂಡ ಠಾಕೂರ್ ಸಿಂಗ್ ಚುನಾವಣಾಧಿಕಾರಿಯಾಗಿ ಬಂದಿದ್ದಾರೆ. 35 ವರ್ಷದೊಳಗಿನ ಯುವ ನಾಯಕರು ವಿವಿಧ ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದು ಜಿಲ್ಲೆಯಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷವಾಗಿ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕರು ಯುವ ಕಾಂಗ್ರೆಸ್ ಚಟುವಟಿಕೆಯಿಂದ ದೂರ ಇದ್ದಾರೆ. ಆದರೆ ತಮ್ಮಿಷ್ಟದ ಕಾರ್ಯಕರ್ತರನ್ನು ಕಣಕ್ಕಿಳಿಸಿದ್ದು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಕೆಲವರು ನೇರವಾಗಿ ತಮ್ಮ ಕಾರ್ಯಕರ್ತರಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.
‘ನಾನು ಹುಟ್ಟಿನಿಂದಲೂ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೇನೆ. ಪಕ್ಷದ ಎಲ್ಲಾ ಚಟುವಟಿಕೆಯಲ್ಲೂ ದುಡಯುತ್ತಿದ್ದೇನೆ. ಯುವ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ ಮಾಡಿದ್ದು ಸದಸ್ಯರ ಬೆಂಬಲ ಕೋರಿದ್ದೇನೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಎಚ್.ವಿ.ವಿಜಯಕುಮಾರ್ ಹೇಳಿದರು.
ಆನ್‌ಲೈನ್ ಮತದಾನ: 3 ವರ್ಷಗಳ ಅವಧಿಗೆ ನಡೆಯುವ ಚುನಾವಣಾ ಪ್ರಕ್ರಿಯೆ ಈ ಬಾರಿ ಸಂಪೂರ್ಣ ಆಲ್‌ಲೈನ್ ಮತದಾನದ ಮೂಲಕವೇ ನಡೆಯುತ್ತಿದೆ. ಅದಕ್ಕಾಗಿ ಐವೈಸಿ (ಇಂಡಿಯನ್ ಯೂತ್ ಕಾಂಗ್ರೆಸ್) ಆ್ಯಪ್ ಸಿದ್ಧಗೊಂಡಿದೆ. ಮತದಾನ ಮಾಡಲು ಅರ್ಹರಾಗಿರುವ ಯುವ ಕಾಂಗ್ರೆಸ್ ಸದಸ್ಯರು ತಮ್ಮ ಮೊಬೈಲ್ ಮೂಲಕವೇ ಮತದಾನ ಮಾಡಬಹುದಾಗಿದೆ.
ಪ್ಲೇಸ್ಟೋರ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್, ಛಾಯಾಚಿತ್ರವುಳ್ಳ ಗುರುತಿನ ಚೀಟಿ ದಾಖಲು ಮಾಡಿ ಯುವ ಕಾಂಗ್ರೆಸ್ ಸಮಿತಿ ಸದಸ್ಯರು ಮತದಾನ ಮಾಡಲಿದ್ದಾರೆ.
ಪಕ್ಷದೊಳಗಿನ ಹುದ್ದೆಗಾಗಿ ಸ್ವಪಕ್ಷೀಯ ನಾಯಕರೇ ಈಗ ಎದುರಾಳಿಗಳಾಗಿ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆಗೆ 10 ಮಂದಿ ಸ್ಪರ್ಧೆ ಮಾಡಿದ್ದರೂ ಅವರು ಮತ ಪಡೆಯುವ ಸಂಖ್ಯೆಗೆ ಅನುಗುಣವಾಗಿ ಉಪಾಧ್ಯಕ್ಷ, ಕಾರ್ಯದರ್ಶಿ ಹುದ್ದೆ ಪಡೆಯಲಿದ್ದಾರೆ.
ಅತೀ ಹೆಚ್ಚು ಮತ ಪಡೆದವರು ಜಿಲ್ಲಾ ಘಟಕದ ಅಧ್ಯಕ್ಷರಾದರೆ, 2ನೇ ಹೆಚ್ಚು ಮತ ಪಡೆದವರು ಉಪಾಧ್ಯಕ್ಷರಾಗುತ್ತಾರೆ. 3ನೇ ಸ್ಥಾನ ಪಡೆದವರು ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಜಿಲ್ಲಾ ಘಟಕದಲ್ಲಿ 7 ಪ್ರಧಾನ ಕಾರ್ಯದರ್ಶಿ ಸ್ಥಾನಗಳಿದ್ದು ಎಲ್ಲರೂ ಹುದ್ದೆ ಪಡೆಯುವ ನಿರೀಕ್ಷೆ ಇದೆ.
ಮತದಾನಕ್ಕೆ 8,320 ಸದಸ್ಯರು ಅರ್ಹತೆ ಪಡೆದಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿಂದ ನವೆಂವರ್ 10ರವರೆಗೆ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಕೈಗೊಳ್ಳಲಾಗಿತ್ತು. ಅದರಲ್ಲಿ 13,330 ಮಂದಿ ಸದಸ್ಯತ್ವ ಪಡೆದಿದ್ದರು. ಅವರಲ್ಲಿ 5,010 ಮಂದಿ ಅನರ್ಹಗೊಂಡಿದ್ದಾರೆ.
*******
ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ಮಹಿಳೆ
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ 10 ಮಂದಿಯಲ್ಲಿ ಒಬ್ಬರು ಮಾತ್ರ ಮಹಿಳೆ ಇದ್ದಾರೆ. ಯುವ ನಾಯಕಿ ರಶ್ಮಿ ಶಿವಕುಮಾರ್ ಕಣದಲ್ಲಿದ್ದು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
‘ಎರಡು ವರ್ಷಗಳಿಂದ ಪಕ್ಷದ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದೇನೆ. ಯುವಕಾಂಗ್ರೆಸ್‌ನಲ್ಲಿ ಸ್ಥಾನ ಸಿಕ್ಕಿದರೆ ಪಕ್ಷದ ಸಂಘಟನೆಗಾಗಿ ಹೆಚ್ಚು ಶ್ರಮಿಸುತ್ತೇನೆ’ ಎಂದು ರಶ್ಮಿ ಹೇಳಿದರು. ಜಯಂತ್, ಶ್ರೀಧರ್, ಪ್ರಶಾಂತ್ ಕುಮಾರ್, ಜಮೀರ್, ವಿನಯ್ ಕುಮಾರ್, ಸಂತೋಷ್, ವಿಜಯ್‌ಕುಮಾರ್, ಹಿತೈಷ್, ಗುಣವಂತ ಕಣದಲ್ಲಿದ್ದಾರೆ.
****
ಯುವನಾಯಕರು ಹೆಚ್ಚು ಜವಾಬ್ದಾರಿಯಿಂದ ಪಕ್ಷ ಸಂಘಟನೆಯಲ್ಲಿ ತೊಡಗಲಿ ಎಂಬ ಉದ್ದೇಶದಿಂದ ಚುನಾವಣೆ ಮೂಲಕ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತದೆ.
ಎನ್.ಚಲುವರಾಯಸ್ವಾಮಿ, ಕಾಂಗ್ರೆಸ್ ಮುಖಂಡ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.