ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಕೊರತೆ: ಮರದ ಕೆಳಗೆ ಪಾಠ

Last Updated 28 ಮಾರ್ಚ್ 2011, 7:05 IST
ಅಕ್ಷರ ಗಾತ್ರ

ಹಲಗೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿವೇಶನ ಮಂಜೂರಾಗದ ಕಾರಣ ಹಲವು ಮೂಲಭೂತ ಸೌಲಭ್ಯಗಳ ಜತೆಗೆ ಕೊಠಡಿ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. 2007- 08ನೇ ಸಾಲಿನಲ್ಲಿ ಈ ಕಾಲೇಜು ಪ್ರಾರಂಭವಾಯಿತು. 3 ವರ್ಷಗಳ ಅವಧಿ ಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 260ರ ಗಡಿ ದಾಟಿದೆ. ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಶೇ.65ಕ್ಕೂ ಹೆಚ್ಚು. ಫಲಿತಾಂಶವೂ ಉತ್ತಮ ವಾಗಿರುವ ಕಾಲೇಜಿನಲ್ಲಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಪಾಠ- ಪ್ರವಚನ, ಗ್ರಂಥಾಲಯದಲ್ಲಿ ಪುಸ್ತಕ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮಕ್ಕೆ ತೊಂದರೆಯಿಲ್ಲ.

ಆದರೆ ಕಾಲೇಜಿಗೆ ನಿವೇಶನ ಮಂಜೂರಾ ಗದ ಕಾರಣ ಹೆಚ್ಚುವರಿ ಕೊಠಡಿಗಳು ಇಲ್ಲದೆ ತುಂಬಾ ತೊಂದರೆಯಾಗಿದೆ. ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಎರಡು, ಪಂಚಾಯಿತಿ ಕಟ್ಟಡದಲ್ಲಿ ಒಂದು, ಪುರಾತನ ಕಾಲದ ಪ್ರವಾಸಿ ಮಂದಿರದಲ್ಲಿ ಎರಡು ತರಗತಿಗಳು ಪ್ರಸಕ್ತ ನಡೆಯುತ್ತಿವೆ. ಉಳಿದ ತರಗತಿಗಳಿಗೆ ಮರದ ನೆರಳು ಆಶ್ರಯ ಕಲ್ಪಿಸಿದೆ. ಈಗ ಇರುವ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ನೆಲಕ್ಕೆ ಉರುಳಲು ದಿನ ಎಣಿಸುತ್ತಿವೆ.

ಈ ಕೊಠಡಿಗಳಲ್ಲಿ ಪ್ರಾಣ ಭಯದಿಂದಲೇ ಪಾಠ ಕೇಳುವ ಸ್ಥಿತಿ ವಿದ್ಯಾರ್ಥಿಗಳದ್ದು. ಕೊಚ್ಚೆ, ಶೌಚದ ದುರ್ವಾಸನೆ, ಅಂಗಡಿ ಮಳಿಗೆಯವರ ಕಸದ ರಾಶಿ, ನಾಯಿ- ಹಂದಿಗಳ ಚೀರಾಟ, ಮದ್ಯದ ಬಾಟಲಿಗಳ ಗಾಜಿನ ಚೂರು, ತರಕಾರಿ ಮತ್ತು ಮಾಂಸದ ಮಳಿಗೆಗಳ ತ್ಯಾಜ್ಯದ ನಡುವೆ ಕಾಲೇಜು ದಿನಗಳನ್ನು ದೂಡುತ್ತಿದೆ. ಕಾಲೇಜಿನ ನಿವೇಶನ ಮಂಜೂರಾತಿಗೆ ಹೋರಾಟವೂ ಪ್ರಾರಂಭವಾಗಿದೆ. ಕಾಲೇಜು ಗೆಜೆಟಿಯರ್‌ನಲ್ಲಿ ಪ್ರಕಟಗೊಂಡಿದೆ.

ಸರ್ವೆ ನಂ:294ರಲ್ಲಿ 5 ಎಕರೆ ಜಾಗ ಮಂಜೂರಾತಿಗಾಗಿ ತಹಶೀಲ್ದಾರ್, ಜಿಲ್ಲಾಧಿಕಾರಿ, ಕಾರ್ಯಪಾಲಕ ಅಭಿಯಂತರರು ಜಾಗ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಪರಿಶೀಲನೆ ನಡೆದು ಎರಡು ವರ್ಷ ಕಳೆದರೂ ಜಾಗ ಮಂಜೂರಾಗಿಲ್ಲ. ಎಲ್ಲ ಅಧಿಕಾರಿಗಳು ಕಾಲೇಜಿಗೆ ಜಾಗ ನೀಡಲು ಹಸಿರು ನಿಶಾನೆ ತೋರಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡಿಲ್ಲ ಎನ್ನಲಾಗಿದೆ. ಇದಕ್ಕಾಗಿ ಎರಡು ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿ ಅಲೆದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರು.

ಕಟ್ಟಡ ಕಾಮಗಾರಿಗೆ ರೂ. 1.50ಕೋಟಿ ಹಣ ಬಿಡುಗಡೆಯಾಗಿದೆ. ಅದು ವಾಪಸ್ಸಾ ಗುವ ಲಕ್ಷಣ ಕಾಣುತ್ತಿದೆ. ನಿವೇಶನ ಮಂಜೂ ರಾಗದ ಕಾಲೇಜು ರದ್ದು ಪಡಿಸುವುದಾಗಿ ಕಾಲೇಜು ಶಿಕ್ಷಣ ಇಲಾಖೆ ಪತ್ರ ಸಹ ಬರೆದಿದೆ. ಹಲಗೂರು ವ್ಯಾಪ್ತಿಯ ಹಳ್ಳಿ ಮಕ್ಕಳು ಉನ್ನತ ಶಿಕ್ಷಣಕ್ಕೆ ಸುಮಾರು 25 ಕಿ.ಮೀ. ದೂರ ಹೋಗಬೇಕು. ಇಲ್ಲಿ ಪದವಿ ಕಾಲೇಜು ಪ್ರಾರಂಭವಾದದ್ದು, ಗ್ರಾಮೀಣ ವಿದ್ಯಾರ್ಥಿಗಳ ಅದರಲ್ಲಿಯೂ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿತು. ಆದರೆ ಇಚ್ಚಾಶಕ್ತಿ ಕೊರತೆಯಿಂದ ಕಾಲೇಜು ಏಳಿಗೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT