ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮಿಂದ, ನಮ್ಮಿಂದ ಜಿಲ್ಲೆಗೆ ಚೊಲೊ ಕೆಲಸ ಆಗಲಿ: ಶಿವಾನಂದ ಪಾಟೀಲ ಸಲಹೆ

ಎಂ.ಬಿ.ಪಾಟೀಲಗೆ ಶಾಸಕ ಶಿವಾನಂದ ಪಾಟೀಲ ಸಲಹೆ
Last Updated 1 ಮೇ 2020, 14:25 IST
ಅಕ್ಷರ ಗಾತ್ರ

ವಿಜಯಪುರ: ‘ಜಿಲ್ಲೆ ಅಭಿವೃದ್ಧಿ ಆಗಬೇಕು ಎಂದು ತಿಳಿದುಕೊಂಡೇ ನಾನು ಕ್ಷೇತ್ರವನ್ನೇ ಬಿಟ್ಟುಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ನನಗೆ ನೋವಿದೆ. ಆದರೂ ಜಿಲ್ಲೆಯ ಜನತೆಗೆ ಸದುಪಯೋಗವಂತ ಚೊಲೊ ಕೆಲಸ ನಿಮ್ಮಿಂದಲೂ ಆಗಲಿ, ನನ್ನಿಂದಲೂ ಆಗಲಿ’

ತಿಡಗುಂದಿ ಜಲಸೇತುವೆ ಲೋಕಾರ್ಪಣೆ ಸಂಬಂಧ ತಲೆದೋರಿರುವ ವಿವಾದದ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಶಿವಾನಂದ ಪಾಟೀಲ ಅವರು ತಮ್ಮದೇ ಪಕ್ಷದ ಶಾಸಕ ಎಂ.ಬಿ.ಪಾಟೀಲಗೆ ತಿಳಿ ಹೇಳಿದ್ದು ಹೀಗೆ.

‘ಜಿಲ್ಲೆಗೆ ನೀರು ಬರಬೇಕು ಎಂಬ ಕಾರಣಕ್ಕೆ ಪಕ್ಷಾತೀತವಾಗಿ ನಾವೆಲ್ಲ ಕೆಲಸ ಮಾಡಬೇಕು ಎಂದು ಬಹುದಿನಗಳ ಹಿಂದೆ ಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ನಿರ್ಣಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಎಲ್ಲ ರೀತಿಯ ಸಹಕಾರ ಮಾಡಿದ್ದೇನೆ. ತಿಡಗುಂದಿ ಜಲಸೇತುವೆ ವಿವಾದದಲ್ಲಿ ದುರ್ದೈವಶಾತ್‌ ನನ್ನ ಹೆಸರು ಪ್ರಸ್ತಾಪವಾಗಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಮುಳವಾಡ ಏತನೀರಾವರಿ ಯೋಜನೆಯ ಕಾಲುವೆ ಕಾಮಗಾರಿಗೆ ಸ್ವಂತ ಏಳೆಂಟು ಲಕ್ಷ ಖರ್ಚು ಮಾಡಿದ್ದೇನೆ ಎಂದು ಹೇಳಿದ್ದಾರೆ. ಯಾರೂ ಸ್ವಂತ ಹಣ ಖರ್ಚು ಮಾಡುವ ಅಗತ್ಯವಿರಲಿಲ್ಲ. ನನ್ನ ಕ್ಷೇತ್ರಕ್ಕೆ ಅವರು ಖರ್ಚು ಮಾಡಿದ್ದೇ ಆಗಿದ್ದರೆ ನನ್ನ ಕೈಯಿಂದ ನೀಡುತ್ತೇನೆ’ ಎಂದರು.

ತಿರುಗೇಟು: ‘ಅವರ ಕ್ಷೇತ್ರದ ಕೆಲಸ ನಾನು ಮಾಡಿದ್ದೇನೆ ಎಂದು ಯಾರೊ ಒಬ್ಬರು ಹೇಳಿಕೊಂಡಿದ್ದಾರೆ. ನನ್ನ ಕ್ಷೇತ್ರದ ಕೆಲಸ ಮಾಡುವ ಅವಶ್ಯಕತೆ ಅವರಿಗೆ ಬೀಳುವುದಿಲ್ಲ. ಅವರ ಕ್ಷೇತ್ರದಲ್ಲಿ ನಾನು ಕೆಲಸ ಮಾಡುವ ಅವಶ್ಯಕತೆ ಬೀಳುವುದಿಲ್ಲ’ ಎಂದು ಶಾಸಕ ಎಂ.ಬಿ.ಪಾಟೀಲರಹೆಸರು ಪ್ರಸ್ತಾಪಿಸದೇ ತಿರುಗೇಟು ನೀಡಿದರು.

ಡಿಕ್ಷನರಿ ತೆಗೆಯುತ್ತೇನೆ: ‘ಪುಸ್ತಕ ಬರೆಯುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ. ಪುಸ್ತಕ ಬರೆಯುವಂತ ಕೆಟ್ಟ ಕೆಲಸ ನಾವು ಯಾರು ಮಾಡಿಲ್ಲ. ಅವರು ಪುಸ್ತಕ ಬರೆಯುವುದಾದರೆ ನಾನು ಡಿಕ್ಷನರಿ ತೆಗೆಯಬೇಕಾಗುತ್ತದೆ. ಯಾವಾವ ಶಬ್ಧ, ಯಾರಾರು ಯಾವ ಸಂದರ್ಭದಲ್ಲಿ ಎಲ್ಲೆಲ್ಲಿ ಹೇಳಿದ್ದರು ಎಂಬುದನ್ನು ಉಲ್ಲೇಖಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ತಮ್ಮ ಬಾಲಬಡುಕರು, ಚೇಲಾಗಳಿಂದ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆ ಕೊಡಿಸುವುದು ಅತೀ ಸಣ್ಣ ಕೆಲಸ. ಇದು ಎಲ್ಲರಿಗೂ ಗೊತ್ತಾಗುತ್ತದೆ. ಇಂಥ ಹಂತಕ್ಕೆ ರಾಜಕಾರಣ ನಾನು ಮಾಡಲ್ಲ. ನಿರೀಕ್ಷೆ ಇಟ್ಟುಕೊಂಡು ಬದುಕುತ್ತೇನೆ. ಅವರಾಗೇ ಮಾಡಿದರೆ ನನಗೆ ಅನಿವಾರ್ಯ’ ಎಂದು ಹೇಳಿದರು.

ಆತ್ಮವೇ ಕಮಾಂಡ್‌: ವಿವಾದದ ಸಂಬಂಧ ಹೈಕಮಾಂಡ್‌ಗೆ ದೂರು ಸಲ್ಲಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನಗೆ ಹೈಕಮಾಂಡೂ ಇಲ್ಲ, ಲೋ ಕಮಾಂಡೂ ಇಲ್ಲ. ನನ್ನ ಆತ್ಮವೇ ಕಮಾಂಡ್‌. ಒಂದು ವೇಳೆ ಅವರು ಕೇಳಿದರೆ ಉತ್ತರ ಕೊಡುತ್ತೇನೆ. ಅದು ಆಗಬಾರದು’ ಎಂದು ಹೇಳಿದರು.

ಟ್ವೀಟ್‌ ಬೇಡ: ‘ರಾಜಕೀಯ ವಿವಾದಗಳಿಗೆ ಸಂಬಂಧಿಸಿದಂತೆ ಶಾಸಕರ ಮಕ್ಕಳು ಟ್ವೀಟ್‌ ಮಾಡುವಂತ ಕೆಲಸ ಮಾಡಿರುವುದು ಸರಿಯಲ್ಲ. ನನ್ನ ಮಗ, ಮತ್ತೊಬ್ಬ ಶಾಸಕನ ಮಗ ಟ್ವೀಟ್‌ ಮಾಡುವುದು ಸರಿಯಲ್ಲ. ಮುಂದಿನ ತಲೆಮಾರಿಗೆ ಇದನ್ನು ಕೊಂಡೊಯ್ಯುವುದು ಬೇಡ. ಇದನ್ನು ನಿಲ್ಲಿಗೆ ನಿಲ್ಲಿಸಬೇಕು. ನಮ್ಮ ಕಾಲದಲ್ಲಿ ಆಗಿರುವುದೇ ಸಾಕು’ ಎಂದು ತಿಳಿ ಹೇಳಿದರು.

‘20 ಸಾವಿರ ಕಡುಬಡವರಿಗೆ ಆಹಾರ ಕಿಟ್‌’

ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ 20 ಸಾವಿರ ಕಡುಬಡವರಿಗೆ ಆಹಾರ ಪದಾರ್ಥಗಳ ಕಿಟ್‌ಗಳನ್ನು ಮಂಗಳವಾರದಿಂದ ವಿತರಿಸಲಾಗುವುದು ಎಂದು ಶಾಸಕ ಶಿವಾನಂದ ಪಾಟೀಲ ತಿಳಿಸಿದರು.

ಲಾಕ್‌ಡೌನ್‌ನಿಂದ ಕ್ಷೇತ್ರದಲ್ಲಿ ಸಂದಿಗ್ಧ ಪರಿಸ್ಥಿತಿಗೆ ಒಳಗಾಗಿರುವ ಕಡುಬಡವರ ಪಟ್ಟಿಯನ್ನು ಸ್ಥಳೀಯ ಜನಪ್ರತಿನಿಧಿಗಳ ಸಹಾಯದಿಂದ ಪಡೆದುಕೊಳ್ಳಲಾಗಿದ್ದು, ಅಂಥವರಿಗೆ ಮಾತ್ರ ವಿತರಿಸಲಾಗುವುದು. ಸ್ಥಿತಿವಂತರು ಇದನ್ನು ಪಡೆಯಲು ಮುಂದೆ ಬರಬಾರದು ಎಂದು ಮನವಿ ಮಾಡಿದರು.

ಬಿಳಿ ಜೋಳ, ತೊಗರಿ, ರವಾ, ಅವಲಕ್ಕಿ, ಚಹಾಪುಡಿ, ಅಡುಗೆ ಎಣ್ಣೆ, ಮಸಾಲೆ ಪದಾರ್ಥ, ಸಕ್ಕರೆ, ಉಪ್ಪು, ಈರುಳ್ಳಿ, ಸೋಪು, ಆಲೂಗಡ್ಡೆ ಸೇರಿದಂತೆ ಒಟ್ಟು 16 ಪದಾರ್ಥಗಳನ್ನು ಕಿಟ್‌ ಒಳಗೊಂಡಿದೆ ಎಂದರು.

ಮುಖಂಡರಾದ ಎಂ.ಆರ್‌.ಪಾಟೀಲ ಬಳ್ಳುಳ್ಳಿ, ಪ್ರಕಾಶ ಪಾಟೀಲ ಹಾಲಳ್ಳಿ, ಪ್ರಕಾಶ ಎಸ್‌.ಪಾಟೀಲ, ರಾಜು ಕಳಸಗೊಂಡ, ಎನ್‌.ಎಸ್‌.ಪಾಟೀಲ, ವೀರಣ್ಣ ಜುಗತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT