ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿ ಕಾಯ್ದೆಗಳ ವಿರುದ್ಧ ಜೆಡಿಎಸ್‌ ಸಮರ

ಕಾಯ್ದೆ ವಾಪಸ್‌ ಪಡೆಯದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರ; ಶಾಸಕರ ಎಚ್ಚರಿಕೆ
Last Updated 17 ಆಗಸ್ಟ್ 2020, 16:30 IST
ಅಕ್ಷರ ಗಾತ್ರ

ಮಂಡ್ಯ: ಕಾರ್ಮಿಕ, ರೈತ ಪರ ಇರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಶಾಸಕರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸೋಮವಾರ ನಗರದ ಸರ್‌ ಎಂ.ವಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಯಿತು.

ಪ್ರತಿಮೆ ಎದುರು ಜಮಾಯಿಸಿದ ಶಾಸಕರು, ಮುಖಂಡರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಕಾಯ್ದೆಗಳ ಸ್ವರೂಪ ಮತ್ತು ಉದ್ದೇಶವನ್ನು ತೆಗೆದು ಹಾಕಲಾಗಿದ್ದು, ರೈತರ ಹಿತ ಬಲಿ ಕೊಡಲಾಗಿದೆ. ಸರ್ಕಾರ ಕೂಡಲೇ ಈ ತಿದ್ದುಪಡಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಕೈ ಬಿಟ್ಟು, ಮೂಲ ಕಾಯ್ದೆಯನ್ನೇ ಉಳಿಸಿಕೊಳ್ಳಬೇಕು. ರೈತರ ಹಿತವನ್ನು ಬಲಿಕೊಟ್ಟು ತಿದ್ದುಪಡಿ ತರಲಾಗಿದೆ. ಕೋವಿಡ್‌ ಅವಧಿಯನ್ನು ಕಾಯ್ದೆಗಳ ತಿದ್ದುಪಡಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಸುಗ್ರೀವಾಜ್ಞೆಗಳ ಮೂಲಕ ತಂದಿರುವ ತಿದ್ದುಪಡಿ ಅನುಷ್ಠಾನವನ್ನು ತಕ್ಷಣದಿಮದ ತಡೆಹಿಡಿಯಬೇಕು. ಈ ತಿದ್ದುಪಡಿಗಳ ವಿಷಯವಾಗಿ ಚರ್ಷಿಸಲು ವಿಧಾನ ಮಂಡಲದ ಉಭಯ ಸದನಗನ್ನು ಕರೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ರಾಜ್ಯದಾದ್ಯಂತ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ ಸುಧಾರಣಾ ಕಾಯ್ದೆಯಲ್ಲಿ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸುವುದಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವವರನ್ನು ಒಳಗೊಂಡಂತೆ ಕೃಷಿಕರಲ್ಲದವರು, ಕೃಷಿಯೇತರ ಮೂಲಗಳಿಂದ ಕೋಟ್ಯಂತರ ಆದಾಯ ಹೊಂದಿರುವ ಬಂಡವಾಳಶಾಹಿಗಳು, ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಲಿದ್ದಾರೆ. ರೈತರನ್ನು ಬೀದಿಪಾಲು ಮಾಡಲು ಸರ್ಕಾರ ಪ್ರತ್ಯಕ್ಷವಾಗಿ ಸಹಕಾರ ನೀಡುತ್ತಿದೆ ಎಂದು ಆರೋಪಿಸಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನಾನುಕೂಲವಾಗಿದೆ. ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಮಸೂದೆಯಿಂದ ಕಾರ್ಪೊರೇಟ್‌ ಸಂಸ್ಥೆಗಳಿಗೆ ಲಾಭ ಮಾಡಿಕೊಡುವುದು ಮೂಲ ಉದ್ದೇಶವಾಗಿದೆ. ಸಂಕಷ್ಟ ಸಮಯದಲ್ಲಿ ಬೆಂಬಲ ಬೆಲೆ ಸಿಗದಿದ್ದ ವೇಳೆ ಮಧ್ಯವರ್ತಿಗಳು ಹಾಗೂ ಖಾಸಗಿ ಕಂಪನಿಗಳು ನೇಮಿಸಿದ ದಲ್ಲಾಳಿಗಳು ಹಳ್ಳಿ ಹಳ್ಳಿಗೆ ತೆರಳಿ ಮುಗ್ಧ ರೈತರಿಂದ ತಾವು ನಿಗದಿಪಡಿಸಿದ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ರೈತರನ್ನು ಶೋಷಿಸಲಿದ್ದಾರೆ. ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿರುವ ಎಪಿಎಂಸಿಗಳನ್ನು ಮುಚ್ಚುವ ಸ್ಥಿತಿ ಬರಬಹುದು ಎಂದು ಆರೋಪಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಜಿಪಂ ಸದಸ್ಯರಾದ ಎಚ್.ಎನ್. ಯೋಗೇಶ್, ಬಿ.ಎಲ್.ದೇವರಾಜು, ಎಚ್.ಟಿ.ಮಂಜು, ನಗರಸಭೆ ಸದಸ್ಯರಾದ ನಾಗೇಶ್, ಮೀನಾಕ್ಷಿ ಪುಟ್ಟಸ್ವಾಮಿ, ವಿದ್ಯಾ ಮಂಜುನಾಥ್, ಮಂಜುಳಾ ಉದಯಶಂಕರ್, ರಜನಿ, ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ ಇದ್ದರು.

ತಲೆತಗ್ಗಿಸುವ ಕೆಲಸ

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ಮಂದಿ ರೈತರ ಜೀವನ ಹಸನು ಮಾಡಿದ್ದರು. ಆದರೆ ರಾಜ್ಯ ಸರ್ಕಾರ ನಾವೆಲ್ಲರೂ ತಲೆತಗ್ಗಿಸುವ ಕೆಲಸ ಮಾಡುತ್ತಿದೆ. ಉಳ್ಳವರು ಜಮೀನ್ದಾರರಾಗುತ್ತಿದ್ದು, ಭೂಮಿ ಕಳೆದು ಕೊಂಡು ರೈತರು ಬೀದಿ ಪಾಲಾಗುವ ಸಂದರ್ಭ ಬಂದೊದಗಿದೆ. ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗಿದೆ. ನಮ್ಮ ನಾಯಕರಾದ ಎಚ್‌.ಡಿ. ಕುಮಾರಸ್ವಾಮಿ ಅವರ ಮಾರ್ಗದರ್ಶನಲದಲ್ಲಿ ಹೋರಾಟ ಮುಂದುವರಿಯಲಿದೆ’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT