ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತೂಕದ ಯಂತ್ರಕ್ಕೆ 114 ವರ್ಷದ ನೆನಪು!

ನಗರದ ರೈಲ್ವೆ ವಸ್ತು ಸಂಗ್ರಹಾಲಯಕ್ಕೆ ಹೊಸ ಅತಿಥಿ
Last Updated 25 ಜುಲೈ 2021, 3:30 IST
ಅಕ್ಷರ ಗಾತ್ರ

ಮೈಸೂರು: ವರ್ಷಗಳು ಕಳೆದಂತೆ ವಸ್ತುಗಳು ಮಾಸುತ್ತವೆ. ಹೊಸದು ಬರುತ್ತಿದ್ದಂತೆ ಮೂಲೆಗುಂಪಾಗುತ್ತವೆ. ಆದರೆ, ಕೆಲವು ವಸ್ತುಗಳು ಮಾತ್ರ ಶತಮಾನಗಳು ಉರುಳಿದರೂ ಮಾಸದೇ ಉಳಿಯುತ್ತವೆ. ಮೈಸೂರಿನ ರೈಲ್ವೆ ಮ್ಯೂಸಿಯಂಗೆ ಬಂದರೆ ಅಂಥದ್ದೊಂದು ಮಾಸದೇ ಉಳಿದ ತೂಕದ ಯಂತ್ರ ಕಾಣುತ್ತದೆ.

ಶಿವಮೊಗ್ಗದ ಶಿವಪುರ ರೈಲು ನಿಲ್ದಾಣದ ಮೂಲೆಯಲ್ಲಿ ಯಂತ್ರವು ದೂಳು ಹೊದ್ದು ಮಲಗಿತ್ತು. ಅದಕ್ಕೂ ಮೊದಲು ಅಲ್ಲಿಯೇ 250 ಕೆಜಿವರೆಗಿನ ಸರಕುಗಳ ತೂಕವನ್ನು ಅಳೆಯುತ್ತಿತ್ತು. ಈಗ ಹಳೆಯ ಎಂದಿನ ಶ್ರೀಮಂತ ಕಳೆಯೊಂದಿಗೆ ಮೈದಾಳಿರುವ ಕೆಂಪು ಬಣ್ಣದ ಯಂತ್ರವು ಶತಮಾನಕ್ಕೂ ಹೆಚ್ಚು ಕಾಲದಿಂದ ಅದೆಷ್ಟು ಸರಕುಗಳನ್ನು ತೂಗಿದೆ ಎಂಬುದರ ಲೆಕ್ಕ ಈಗಿಲ್ಲ.

1907ರಲ್ಲಿ ಬ್ರಿಟನ್ನಿನ ಬರ್ಮಿಂಗ್ಯಾಮ್‌ನ ‘ಡಬ್ಲ್ಯು ಅಂಡ್‌ ಟಿ ಅವೆರಿ ಲಿಮಿಟೆಡ್’ ತಯಾರಿಸಿರುವ ಯಂತ್ರವನ್ನು ಮ್ಯೂಸಿಯಂನ ಮಕ್ಕಳ ಆಟಿಕೆ ರೈಲು ನಿಲ್ದಾಣದ ಸೂರಿನಲ್ಲಿಡಲಾಗಿದೆ.

ಶಿವಪುರದಲ್ಲಿದ್ದ ತೂಕದ ಯಂತ್ರ ವನ್ನು ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಹುಲ್‌ ಅಗರ್‌ವಾಲ್‌ ಮೈಸೂರಿಗೆ ತಂದಿದ್ದಾರೆ. ಕೆಟ್ಟು ನಿಂತಿ ದ್ದನ್ನು ದುರಸ್ತಿಗೊಳಿಸಿ ಮೂಲ ಸ್ವರೂಪಕ್ಕೆ ಮರಳಿಸಿದ್ದಾರೆ. ವಿಶೇಷವೆಂದರೆ ಈ ಯಂತ್ರದಲ್ಲಿ ತೂಕದ ಬಟ್ಟುಗಳು ಇಲ್ಲ. ಸ್ಪ್ರಿಂಗ್‌ ಮೇಲೆ ಬೀಳುವ ತೂಕವನ್ನು ಕರಾರುವಕ್ಕಾಗಿ ಗುರುತಿಸಿಕೊಡುತ್ತದೆ. ಅದರ ಹಿತ್ತಾಳೆ ಹಿಡಿಗಳು, ಅಳತೆ ಕೋಲು, ಸಂಖ್ಯೆಗಳ ಗೆರೆಗಳು ಗಮನ ಸೆಳೆಯುತ್ತವೆ. ಎರಕಹೊಯ್ದ ಕಬ್ಬಿಣದಿಂದ (ಕಾಸ್ಟ್ ಐರನ್‌) ಇದನ್ನು ತಯಾರಿಸಲಾಗಿದೆ.

‘ಡಬ್ಲ್ಯು ಅಂಡ್‌ ಟಿ ಅವೆರಿ ಲಿಮಿಟೆಡ್’ನ ತೂಕದ ಯಂತ್ರವನ್ನು ಭಾರತೀಯ ರೈಲ್ವೆಯು ನಿಲ್ದಾಣ, ಕಲ್ಲಿದ್ದಲು ಗಣಿ, ಕಬ್ಬಿಣದ ಕಾರ್ಖಾನೆ ಸೇರಿದಂತೆ ವಿವಿಧೆಡೆ ಇರಿಸುತ್ತಿತ್ತು. ದೇಶದೆಲ್ಲೆಡೆ ತೂಕ ಮಾಡುವ ಯಂತ್ರಗಳನ್ನು ತಯಾರಿಸುವ ಪರವಾನಗಿಯನ್ನು ಬ್ರಿಟಿಷರು ‘ಡಬ್ಲ್ಯು ಅಂಡ್‌ ಟಿ ಅವೆರಿ ಲಿಮಿಟೆಡ್’ ಕಂಪನಿಗೇ ನೀಡಿದ್ದರು. ಆಗ ನಿಲ್ದಾಣದಲ್ಲಿ ಪ್ರಯಾಣಿಕ ಸಾಮಗ್ರಿಯನ್ನು ನಿಯಮಬಾಹಿರವಾಗಿ ಒಯ್ದರೆ ಸಾಮಗ್ರಿ ತೂಕದ ಬೆಲೆಯ ಆರು ಪಟ್ಟು ದಂಡ ವಿಧಿಸಲಾಗುತ್ತಿತ್ತು’ ಎಂದು ಇಲ್ಲಿನ ಗೈಡ್‌ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹುಲ್ಲುಹಾಸಿನ ಮರದ ಪಟ್ಟಿಯ ದಾರಿ’: ನ್ಯಾರೋ ಗೇಜಿನ ರೈಲು ಹಳಿಗಳ ನಿರ್ಮಾಣದಲ್ಲಿ ಬಳಕೆಯಾಗುತ್ತಿದ್ದ ಮರದ ಪಟ್ಟಿಗಳು (ಸ್ಲೀಪರ್‌) ಮ್ಯೂಸಿಯಂನ ಹುಲ್ಲುಹಾಸಿನಲ್ಲಿ ಸ್ಥಾನ ಪಡೆದಿವೆ. ಪ್ರವಾಸಿಗರ ಓಡಾಟದಿಂದ ಹಾನಿಯಾಗುವುದನ್ನು ತಪ್ಪಿಸಲು
ಉಗ್ರಾಣದಲ್ಲಿ ವ್ಯರ್ಥವಾಗಿ ಬಿದ್ದಿದ್ದ ಮರದ ಪಟ್ಟಿಗಳನ್ನು ಹುಲ್ಲುಹಾಸಿನ ದಾರಿಯಲ್ಲಿಡಲಾಗಿದೆ.

ಬಾಂಬೆ ಬರೋಡಾ ಮತ್ತು ಸೆಂಟ್ರಲ್ ಇಂಡಿಯಾ ರೈಲ್ವೆ ಸಂಸ್ಥೆಯು ಉದ್ಯೋಗಿಯೊಬ್ಬರಿಗೆ 1931ರಲ್ಲಿ ನೀಡಿದ್ದ ಸೇವಾ ಪ್ರಮಾಣಪತ್ರದ ಹಸ್ತಪ್ರತಿಯು ಮ್ಯೂಸಿಯಂನ ಗ್ಯಾಲರಿಯ ಗೋಡೆಯನ್ನು ಅಲಂಕರಿಸಿದೆ. ಗ್ರಂಥಾಲಯದ ಕಪಾಟಿನಲ್ಲಿ ಹಳೆಯ ಪುಸ್ತಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT