ಮಂಗಳವಾರ, ನವೆಂಬರ್ 24, 2020
27 °C
ಜೆಎಸ್‌ಎಸ್ ಉನ್ನತ ಶಿಕ್ಷಣ, ಸಂಶೋಧನಾ ಅಕಾಡೆಮಿ ಘಟಿಕೋತ್ಸವ ನಾಳೆ

ಮೈಸೂರು: 1,436 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ವಾರ್ಷಿಕ ಘಟಿಕೋತ್ಸವವು ನ. 11ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಶಾಖಾ ಮಠದಲ್ಲಿ ನಡೆಯಲಿದೆ.

ಸುತ್ತೂರು ಮಠದ ಶಿವರಾತ್ರಿದೇಶಿ ಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದು, ವೈದ್ಯಕೀಯ ಶಿಕ್ಷಣ
ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಪ್ರೊ–ಚಾನ್ಸಲರ್ ಡಾ.ಬಿ.ಸುರೇಶ್ ಭಾಗವಹಿಸುವರು ಎಂದು ಅಕಾಡೆಮಿಯ ಕುಲಪತಿ ಡಾ.ಸುರೀಂದರ್ ಸಿಂಗ್ ಇಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಘಟಿಕೋತ್ಸವದಲ್ಲಿ ಒಟ್ಟು 1,436 ವಿದ್ಯಾರ್ಥಿಗಳು ಸ್ನಾತಕಪೂರ್ವ, ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯನ್ನು ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಆಡಳಿತ ನಿರ್ವಹಣೆ, ಜೀವ ವಿಜ್ಞಾನ ಮತ್ತು ಜೈವಿಕ ವೈದ್ಯಕೀಯ ವಿಜ್ಞಾನ ವಿಭಾಗದಿಂದ ಪಡೆಯುವರು ಎಂದು ಅವರು ಹೇಳಿದರು.

52 ವಿದ್ಯಾರ್ಥಿಗಳು ಒಟ್ಟು 72 ಪದಕಗಳನ್ನು ಮತ್ತು ಪ್ರಶಸ್ತಿಗಳನ್ನು ಪಡೆಯಲಿದ್ದಾರೆ. 46 ವಿದ್ಯಾರ್ಥಿಗಳು ಪಿಎಚ್‍ಡಿ ಪದವಿಯನ್ನು ಮತ್ತು 5 ವಿದ್ಯಾರ್ಥಿಗಳು ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವಿ (ಡಿಎಂ ಮತ್ತು ಎಂ.ಸಿಎಚ್) ಯನ್ನು ಪಡೆಯಲಿದ್ದಾರೆ ಎಂದರು.

ವೈದ್ಯಕೀಯ ವಿಜ್ಞಾನದಲ್ಲಿ 102 ಮಂದಿ ಸ್ನಾತಕೋತ್ತರ ಪದವಿ, 28 ಮಂದಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯಲಿದ್ದು, ಪ್ರೀತಿ ಪ್ರಕಾಶ್‌ ಪ್ರಭು ಅವರು 5 ಹಾಗೂ ಸಾಲ್ವಿಯಾ ಎಸ್.ರಾಜ್ ಅವರು 3 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಜೀವ ವಿಜ್ಞಾನ ವಿಷಯದಲ್ಲಿ 155 ಮಂದಿ ಪದವಿ ಹಾಗೂ 135 ಮಂದಿ ಸ್ನಾತಕೋತ್ತರ ಪದವಿ, 209 ಮಂದಿ ಎಂಬಿಬಿಎಸ್‌, 25 ಎಂಡಿಎಸ್‌, 94 ಬಿಡಿಎಸ್‌, 163 ಮಂದಿ ಎಂ–ಫಾರ್ಮಾ, 216 ಮಂದಿ ಬಿ–ಫಾರ್ಮಾ ಪದವಿ ಪಡೆಯಲಿದ್ದಾರೆ ಎಂದರು.

ಜೆಎಸ್‌ಎಸ್‌ ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ.ರವೀಂದ್ರ, ಫಾಮರ್ಸಿ ಕಾಲೇಜಿನ ಡೀನ್ ಡಾ.ಪ್ರಮೋದ್, ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಬಸವನಗೌಡಪ್ಪ ಇದ್ದರು.

ಕೋವಿಡ್ ಮುನ್ನಚ್ಚರಿಕೆ ಕ್ರಮಗಳ ಪಾಲನೆ

ಪಿಎಚ್‌.ಡಿ, ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪದವೀಧರರು ಹಾಗೂ ಚಿನ್ನದ ಪದಕ ವಿಜೇತರಿಗೆ ಮಾತ್ರ ಘಟಿಕೋತ್ಸವದಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನುಳಿದ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆನ್‌ಲೈನ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದು ಎಂದು ಕುಲಪತಿ ಡಾ.ಸುರೀಂದರ್ ಸಿಂಗ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.