ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿಯಲ್ಲಿ ಹೊಂಬಣ್ಣದ ಚೆಲುವು; ಅರಮನೆಗೆ 22ಸಾವಿರ ಹೊಸ ಬಲ್ಬ್‌

ಬೆಳಗಲಿವೆ ಲಕ್ಷ ವಿದ್ಯುತ್‌ ದೀಪಗಳು
Last Updated 19 ಸೆಪ್ಟೆಂಬರ್ 2022, 6:17 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ, ಜಗದ್ವಿಖ್ಯಾತ ಮೈಸೂರು ಅರಮನೆಯ ವಿದ್ಯುತ್‌ ದೀಪಾಲಂಕಾರದ ಸಿದ್ಧತೆ ಅಂತಿಮಗೊಂಡಿದ್ದು,22 ಸಾವಿರ ಹೊಸ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.

ಆವರಣದ ಎಲ್ಲ ದೇಗುಲಗಳು, ಕೋಟೆ ಸೇರಿದಂತೆ ಎಲ್ಲ ಭಾಗಗಳಿಗೂ ವಿದ್ಯುತ್‌ ದೀಪ ಅಳವಡಿಸುವ ಹಾಗೂ ಸುಣ್ಣ– ಬಣ್ಣ ಲೇಪನ ಕಾರ್ಯವು ತಿಂಗಳ ಹಿಂದೆ ಆರಂಭವಾಗಿತ್ತು. ಈಗ ಕಾಮಗಾರಿಗಳುಬಹುತೇಕ ಮುಗಿದಿದ್ದು, ದೀ‍ಪ ಅಳವಡಿಕೆ ಕಾರ್ಯವು ಕೊನೆಯ ಹಂತದಲ್ಲಿದೆ.

ಅರಮನೆಯ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ತೆರವುಗೊಳಿಸುವ, ವೈರಿಂಗ್‌ ಸರಿಪಡಿಸುವ ಕೆಲಸವನ್ನು ಕಾರ್ಮಿಕರು ಮುಗಿಸಿದ್ದಾರೆ. ಎತ್ತರ ದೀಪದ ಕಂಬಗಳಿಗೆ ಮರದ ಪೋಲ್‌ಗಳ ಅಟ್ಟಣಿಗೆಗಳನ್ನು ಕಟ್ಟಿ ದುರಸ್ತಿಗೊಳಿಸಿದ್ದಾರೆ. ಒಳಾಂಗಣದಲ್ಲಿ ಮಸಿ ತುಂಬಿದ್ದಅಲಂಕೃತ ದೀಪಗಳ ಗಾಜು ಗಳನ್ನು ಜೋಪಾನವಾಗಿ ಕೆಳಗಿಳಿಸಿ ಮಸಿ ಒರೆಸಿ ಹೊಳೆಯುವಂತೆ ಮಾಡಲಾಗಿದೆ. ಮರು ಜೋಡಣೆ ಕಾರ್ಯವೂ ಮುಗಿದಿದೆ. ಲಕ್ಷ ದೀಪಗಳು ಅರಮನೆಯನ್ನು ಬೆಳಗಲು ಸಿದ್ಧಗೊಂಡಿವೆ.

‘ಪ್ರತಿ ವರ್ಷವೂ ಕೆಟ್ಟಿದ್ದ ಬಲ್ಬ್‌ಗಳನ್ನು ಬದಲಿಸಲಾಗುತ್ತದೆ. ಗಾಳಿ–ಮಳೆ ಕಾರಣ ಈ ವರ್ಷ ಹೆಚ್ಚು ಬಲ್ಬ್‌ಗಳು ಹಾಳಾಗಿದ್ದವು. ಎಲ್ಲವನ್ನೂ ಗುರುತಿಸಿರುವ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ಸುಣ್ಣ–ಬಣ್ಣದ ಕೆಲಸವೂ ಮುಗಿದಿದೆ’ ಎಂದು ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಮನೆಯಲ್ಲಿ ಲಕ್ಷ ಬಲ್ಬ್‌ಗಳಿವೆ. 22 ಸಾವಿರ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಬಂಗಾರದ ಬಣ್ಣವನ್ನು ಸೂಸುವ ಈ ಬಲ್ಬ್‌ಗಳು 15 ವ್ಯಾಟ್‌ ಸಾಮರ್ಥ್ಯದ್ದಾಗಿವೆ’ ಎಂದು ಎಂಜಿನಿಯರ್‌ ಸತೀಶ್‌ ಮಾಹಿತಿ ನೀಡಿದರು.

ಕದಿಯಲಾಗದು!: ಅರಮನೆಗೆ ಅಳವಡಿಸುವ ಬಲ್ಬ್‌ಗಳನ್ನು ಕಳಚಲು ಆಗುವುದಿಲ್ಲ. ತಿರುಪಿನ ಬುರುಡೆಯನ್ನು ಹೊಂದಿರುವ ಬಲ್ಬ್‌ಗಳನ್ನು ಅರಮನೆಗೆಂದೇ ವಿಶೇಷವಾಗಿ ತಯಾರಿಸಲಾಗುತ್ತದೆ.

ಎಲ್‌ಇಡಿ ಬಲ್ಬ್‌ಗಳ ಅಳವಡಿಕೆ: ಅರಮನೆ ಆವರಣದ ಬೀದಿಗಳು, ಉದ್ಯಾನಗಳಲ್ಲಿ ಅಲಂಕಾರಿಕ ವಿದ್ಯುತ್‌ ದೀಪಗಳಿಗೆ ಎಲ್‌ಇಡಿ ಬಲ್ಬ್‌ ಬಳಸಲಾಗಿದೆ.ಫೈವ್‌ಲೈಟ್ಸ್‌, ಅರಮನೆಯ ಒಳಗಿನ ತೂಗುವ ದೀಪಗಳಿಗೂ ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಲಾಗುತ್ತದೆ.

ನಿತ್ಯ 3 ಗಂಟೆ ಝಗಮಗಿಸುವ ಬೆಳಕು: ನವರಾತ್ರಿ ವೇಳೆ ಅರಮನೆಯಲ್ಲಿ ವಾಡಿಕೆಯಂತೆ ಸಂಜೆ 7ರಿಂದ ರಾತ್ರಿ 10ರವೆರೆಗೆ ವಿದ್ಯುತ್‌ ದೀಪಾಲಂಕಾರ ಜಗಮಗಿಸಲಿದೆ. ಉಳಿದ ತಿಂಗಳಲ್ಲಿ ವಿದ್ಯುತ್‌ ಬಿಲ್‌ ವೆಚ್ಚ ₹ 10 ಲಕ್ಷವಿದ್ದರೆ, ದಸರೆ ವೇಳೆ ₹ 15 ಲಕ್ಷ ದಾಟುತ್ತದೆ.ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮವನ್ನು ಅರಮನೆಯ ವಿದ್ಯುತ್‌ ವಿಭಾಗ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT