ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ₹ 352 ಕೋಟಿ ಆದಾಯ: ರಾಹುಲ್ ಅಗರ್‌ವಾಲ್‌

Last Updated 15 ಆಗಸ್ಟ್ 2022, 7:50 IST
ಅಕ್ಷರ ಗಾತ್ರ

ಮೈಸೂರು: ‘ನೈರುತ್ಯ ರೈಲ್ವೆ ಮೈಸೂರು ವಿಭಾಗವು ಕೋವಿಡ್-19 ಸಾಂಕ್ರಾಮಿಕದ ಸವಾಲುಗಳ ನಡುವೆಯೂ 2.57 ದಶ ಲಕ್ಷ ಟನ್‌ ಸರಕು ಮತ್ತು 9.73 ದಶ ಲಕ್ಷ ಪ್ರಯಾಣಿಕರನ್ನು ಸಾಗಿಸಿ ₹ 352.66 ಕೋಟಿ ವರಮಾನ ಗಳಿಸಿದೆ’ ಎಂದು ವಿಭಾಗಿಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್‌ ತಿಳಿಸಿದರು.

ವಿಭಾಗದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರದ ರೈಲ್ವೆ ಕ್ರೀಡಾ ಮೈದಾನದಲ್ಲಿ ಸೋಮವಾರ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಸಾಂಕ್ರಾಮಿಕದ ನಂತರ ಪರಿಸ್ಥಿತಿಯು ಸಹಜ ಸ್ಥಿತಿಗೆ ಮರಳುತ್ತಿದ್ದು, ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ. ಇಲಾಖೆಯು ತನ್ನ ಬದ್ಧತೆ ಮತ್ತು ಸಮರ್ಪಿತ ಕಾರ್ಯಪಡೆಯ ಮೂಲಕ ಈ ಪ್ರಯಾಣದ ಮುಂಚೂಣಿಯಲ್ಲಿದೆ. ಮೈಸೂರು ವಿಭಾಗವು ತನ್ನದೇ ಆದ ಪ್ರಮುಖ ಪಾತ್ರ ನಿರ್ವಹಿಸಿ ಅಭಿವೃದ್ಧಿಗೆ ಶಕ್ತಿ ತುಂಬುತ್ತಿದೆ. ಜನರಿಗೆ ಪ್ರಯಾಣದ ಅನುಭವ ಸುಧಾರಿಸಲು ಹಲವು ಕ್ರಮಗಳನ್ನು ವಹಿಸಲಾಗಿದೆ. ಕೋವಿಡ್ ಪೂರ್ವದಲ್ಲಿದ್ದಂತೆ, ಪ್ರಯಾಣಿಕರ ಎಲ್ಲ ರೈಲುಗಳ ಸೇವೆಗಳನ್ನು ಪುನರಾರಂಭಿಸಲಾಗಿದೆ’ ಎಂದು ಹೇಳಿದರು.

391 ಹೆಚ್ಚುವರಿ ಕೋಚ್‌:‘ಪ್ರಸಕ್ತ ವರ್ಷದಲ್ಲಿ, ಮೈಸೂರು ವಿಭಾಗದ ಸಮಯಪಾಲನೆಯ ಕಾರ್ಯಕ್ಷಮತೆಯು ಶೇ 99ರಷ್ಟಿದೆ. ಪ್ರಯಾಣಿಕರ ಹೆಚ್ಚಿನ ಬೇಡಿಕೆ ಪೂರೈಸಲು ವಿವಿಧ ರೈಲುಗಳಿಗೆ 391 ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಹೆಚ್ಚುವರಿ ಟಿಕೆಟ್‌ ಕೌಂಟರ್‌ಗಳು ಮತ್ತು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ (ಎವಿಟಿಎಂ) ಅಳವಡಿಕೆಯೊಂದಿಗೆ ಪ್ರಯಾಣಿಕರಿಗೆ ತೊಂದರೆ ಮುಕ್ತ ಟಿಕೆಟ್ ವಿತರಣೆ ಸಾಧ್ಯವಾಗಿದೆ’ ಎಂದರು.

‘ಹೆಚ್ಚುವರಿ ಪಾರ್ಕಿಂಗ್ ಸ್ಥಳ, ಶೌಚಾಲಯ, ಕುಡಿಯುವ ನೀರು, ಬೆಳಕು, ಮಾಹಿತಿ ವ್ಯವಸ್ಥೆ ಮತ್ತು ಪ್ರದರ್ಶನ ಫಲಕಗಳನ್ನು ಕಲ್ಪಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಯಿಂದ ಕೂಡಿದ ದೋಷರಹಿತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಅರಸೀಕೆರೆ, ಬೀರೂರು ಮತ್ತು ಕಡೂರು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಸಾಮರ್ಥ್ಯದ ಆರು ಲಿಫ್ಟ್‌ಗಳನ್ನು ಇತ್ತೀಚಿಗೆ ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಮಾಣೀಕರಣ: ‘ಮೈಸೂರು ರೈಲು ನಿಲ್ದಾಣಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ‘ಅನುಕರಣೀಯ’ (ಪಂಚತಾರಾ – 5 ಸ್ಟಾರ್ ರೇಟಿಂಗ್) ಜೊತೆಗೆ ‘ಈಟ್ ರೈಟ್ ಸ್ಟೇಷನ್’ ಪ್ರಮಾಣೀಕರಣವನ್ನು ನೀಡಿದೆ’ ಎಂದು ತಿಳಿಸಿದರು.

‘ಹಸಿರು ಹೊದಿಕೆಯನ್ನು ವಿಸ್ತರಿಸಲು ನಿಲ್ದಾಣದ ಆವರಣಗಳಲ್ಲಿ 435 ಸಸಿಗಳನ್ನು ನೆಡಲಾಗಿದೆ. ಹಾಸನ, ಅರಸೀಕೆರೆ, ದಾವಣಗೆರೆ ಮತ್ತು ಶಿವಮೊಗ್ಗ ಟೌನ್‌ ನಿಲ್ದಾಣಗಳಲ್ಲಿ 600 ಕೆ.ಜಿ ಸಾಮರ್ಥ್ಯದ ಸಾವಯವ ತ್ಯಾಜ್ಯ ಪರಿವರ್ತಕ ಘಟಕ ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಪ್ರಸಕ್ತ ವರ್ಷದಲ್ಲಿ 257 ಮಂದಿಗೆ ಬಡ್ತಿ ಕೊಡಲಾಗಿದೆ. 57 ಮಂದಿಗೆ ಆರ್ಥಿಕ ಉನ್ನತೀಕರಣ ನೀಡಲಾಗಿದೆ. ಇಲಾಖೆಯ ಕ್ಷೇತ್ರೀಯ ಅಧಿಕಾರಿಗಳಿಗೆ ಅಧಿಕಾರ ನೀಡಿ ವ್ಯವಸ್ಥೆ ಸುಧಾರಿಸಲಾಗಿದೆ’ ಎಂದರು.

‘ಮೈಸೂರು ಯಾರ್ಡ್ ಪುನರ್‌ನಿರ್ಮಾಣ ಮತ್ತು ನಾಗನಹಳ್ಳಿ ಕೋಚಿಂಗ್ ಟರ್ಮಿನಲ್‌ ನಿರ್ಮಾಣ ಪೂರ್ಣಗೊಂಡಲ್ಲಿ, ಮೈಸೂರು ನಿಲ್ದಾಣದಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ ಮತ್ತು ನಾಗನಹಳ್ಳಿಯಿಂದ ಮೆಮು ರೈಲು ಸೇರಿದಂತೆ ಹೊಸ ರೈಲುಗಳ ಸೇವೆ ಪ್ರಾರಂಭಿಸಬಹುದಾಗಿದೆ’ ಎಂದರು.

ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT