ಗುರುವಾರ , ಮೇ 19, 2022
25 °C
ಕೋವಿಡ್‌ನ ಕಾಲಘಟ್ಟದಿಂದ ಸಂಕಷ್ಟದ ಸುಳಿಗೆ ಸಿಲುಕಿರುವ ಕೃಷಿಕ ಸಮೂಹ

₹ 50 ಸಾವಿರ ಕೋಟಿ ನಷ್ಟ; ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘2020ರ ಮಾರ್ಚ್‌ನಿಂದ 2021ರ ಮಾರ್ಚ್‌ ಅವಧಿಯಲ್ಲಿ ಶೇ 10ರಷ್ಟು ಕೃಷಿ ಉತ್ಪನ್ನ ಹೆಚ್ಚಳವಾಗಿದೆ. ಆದರೆ ಕೋವಿಡ್‌ನಿಂದಾಗಿ ಸಕಾಲಕ್ಕೆ ಕೊಯ್ಲು, ಮಾರಾಟ ಮಾಡಲಾಗದೆ ರಾಷ್ಟ್ರಮಟ್ಟದಲ್ಲಿ ಹಿಂಗಾರು ಹಂಗಾಮಿನಲ್ಲೇ ಅಂದಾಜು ₹ 50 ಸಾವಿರ ಕೋಟಿಯಷ್ಟು ಮೌಲ್ಯದ ಕೃಷಿ ಉತ್ಪನ್ನ ಹಾಳಾಗಿದೆ’ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಎನ್‌.ಪ್ರಕಾಶ್‌ ಕಮ್ಮರಡಿ ಶನಿವಾರ ಇಲ್ಲಿ ತಿಳಿಸಿದರು.

‘ಕೋವಿಡ್‌ನ ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿದ ರಾಜ್ಯದ ರೈತರ ಸಮೀಕ್ಷೆ ನಡೆಸಲಾಗಿದೆ. ರಾಜ್ಯವನ್ನು ಐದು ವಿಭಾಗವನ್ನಾಗಿ ಮಾಡಿಕೊಂಡು ಮೊಬೈಲ್‌ ಮೂಲಕವೇ 5 ಸಾವಿರ ರೈತರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈ ಎಲ್ಲವನ್ನೂ ಕ್ರೋಡೀಕರಿಸಿ 108 ಪುಟಗಳ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಗಿದೆ. ಇದರಲ್ಲಿ ರೈತರ ಬವಣೆಯನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯ ಸರ್ಕಾರ ಕೋವಿಡ್‌ ಪರಿಸ್ಥಿತಿಯನ್ನು ತೃಪ್ತಿಕರವಾಗಿ ನಿಭಾಯಿಸಿಲ್ಲ ಎಂದು ಶೇ 55ರಷ್ಟು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ–ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕಾಯ್ದೆಗಳ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಶೇ 30ಕ್ಕೂ ಹೆಚ್ಚು ಯುವ ರೈತರು ಕೃಷಿ ತೊರೆಯುವ ಮುನ್ಸೂಚನೆ ನೀಡಿದ್ದಾರೆ. ಬಹುತೇಕರಿಗೆ ಬದುಕಿನ ಅಭದ್ರತೆ ಕಾಡುತ್ತಿದೆ. ಈ ಎಲ್ಲ ಅಂಶಗಳು ವರದಿಯಲ್ಲಿ ಉಲ್ಲೇಖವಾಗಿವೆ’ ಎಂದು ತಿಳಿಸಿದರು.

‘ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಸ್ವರೂಪ ನೀಡಬೇಕು. ಎಪಿಎಂಸಿ ವ್ಯವಸ್ಥೆಯನ್ನು ದುರ್ಬಲಗೊಳಿಸಬಾರದು. ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು’ ಎಂದು ಕಮ್ಮರಡಿ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು