ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಕೊರೊನಾ ವಾರಿಯರ್‌ಗೆ ದಸರೆ ಗೌರವ

ಈ ಬಾರಿ ದಸರೆ ಉದ್ಘಾಟಿಸಲಿರುವ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್‌.ಮಂಜುನಾಥ್‌
Last Updated 11 ಅಕ್ಟೋಬರ್ 2020, 6:31 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೊಡಗಿದ್ದ ಆರು ಕೊರೊನಾ ವಾರಿಯರ್‌ಗಳಿಗೆಈ ಬಾರಿ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದೆ.

ವೈದ್ಯಕೀಯ ಕ್ಷೇತ್ರದಿಂದ ಆರೋಗ್ಯಾಧಿಕಾರಿ ಡಾ.ಟಿ.ಆರ್‌.ನವೀನ್‌‌, ನರ್ಸ್‌ ಪಿ.ಎಂ.ರುಕ್ಮಿಣಿ, ಪೊಲೀಸ್‌ ಇಲಾಖೆಯಿಂದ ಕಾನ್‌ಸ್ಟೆಬಲ್‌ ಪಿ.ಕುಮಾರ್‌, ಪೌರಕಾರ್ಮಿಕರಾದ ಮರಗಮ್ಮ, ಆಶಾ ಕಾರ್ಯಕರ್ತೆ ನೂರ್‌ ಜಾನ್‌ ಹಾಗೂ ಸಾಮಾಜಿಕ ಕಾರ್ಯಕರ್ತ ಆಯೂಬ್‌ ಅಹ್ಮದ್‌ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಕೋವಿಡ್‌ ಪರಿಸ್ಥಿತಿಯಲ್ಲಿ ಜನರು ಆತಂಕಗೊಂಡಿದ್ದ ಸಮಯದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿದ ಇವರ ಸೇವೆಯನ್ನು ಮೆಚ್ಚಿ ಈ ಅವಕಾಶ ನೀಡಲಾಗಿದೆ.

ಅ.17ರಂದು ಚಾಮುಂಡಿಬೆಟ್ಟದಲ್ಲಿ ನಡೆಯಲಿರುವ ನಾಡಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಆರು ಮಂದಿಯನ್ನೂ ಸನ್ಮಾನಿಸಲಿದ್ದಾರೆ. ದಸರೆಯನ್ನು ಉದ್ಘಾಟಿಸುವ ಅವಕಾಶ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಲಭಿಸಿದೆ. ಈ ವಿಚಾರವನ್ನುಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಶನಿವಾರ ಇಲ್ಲಿ ತಿಳಿಸಿದರು.

ತಜ್ಞರ ವರದಿಗೆ ಬದ್ಧ: ತಜ್ಞರ ತಂಡ ನೀಡಿದ ವರದಿ ಪ್ರಕಾರವಾಗಿಯೇ ಈ ಬಾರಿ ದಸರಾ ಆಚರಣೆ ಮಾಡಲಾ ಗುವುದು. ಇದರಲ್ಲಿ ಯಾವುದೇ ವ್ಯತ್ಯಾಸ ಇರದು. ಶಿಫಾರಸ್ಸಿನ ಅನ್ವಯ ಎಲ್ಲ ಕಾರ್ಯಕ್ರಮಗಳನ್ನು ನಿಗದಿಪಡಿ ಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಗೂ ಮಾಹಿತಿ ನೀಡಿದ್ದೇನೆ ಎಂದರು.

ದಸರಾ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ 200 ಮಂದಿ ಮಾತ್ರ ಅವಕಾಶ ನೀಡಲಾಗುವುದು. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್‌ ಹಾಗೂ ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಸೀಮಿತ ದೀಪಾಲಂಕಾರ: ದೀಪಾಲಂಕಾರದ ಬಗ್ಗೆ ಯಾವುದೇ ಗೊಂದಲ ಇಲ್ಲ. ಇದು ಉನ್ನತಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ. ಕಳೆದ ಬಾರಿ ಯಾವ ರೀತಿ ಇತ್ತೋ ಅದೇ ರೀತಿ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಈಗ ನೂರಾರು ಕಿ.ಮೀ. ವ್ಯಾಪ್ತಿಯನ್ನು ಕಡಿತಗೊಳಿಸಿ 50 ಕಿ.ಮೀಗೆ ಸೀಮಿತಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಕೋವಿಡ್‌ ಕಾರಣ ಪಾರ್ಕಿಂಗ್‌ಗೆ ದಸರೆ ನಡೆಯುವ ಸ್ಥಳಗಳಲ್ಲಿ ಅನುಮತಿ ಕೊಡುವುದಿಲ್ಲ. ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ವಹಿಸಲಾಗುವುದು ಎಂದು ಸಚಿವರು ಹೇಳಿದರು.

‘ಜೀವನದ ಅವಿಸ್ಮರಣೀಯ ದಿನ’

‘ಆರೂವರೆ ಕೋಟಿ ಜನರ ಪರ ದಸರೆ ಉದ್ಘಾಟಿಸಲು ಸಿಕ್ಕಿರುವುದು ನನ್ನ ಜೀವನದ ಅತ್ಯಂತ ಖುಷಿ ಹಾಗೂ ಅವಿಸ್ಮರಣೀಯ ದಿನ. ಇದೊಂದು ನನ್ನ ಸೌಭಾಗ್ಯ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಪ್ರತಿಕ್ರಿಯಿಸಿದರು.

‘ಕೋವಿಡ್ ಪರಿಸ್ಥಿತಿಯಲ್ಲಿ ದಸರಾ ಸರಳವಾಗಿ ನಡೆಯುತ್ತಿದೆ. ಹೀಗಾಗಿ, ಸುರಕ್ಷತೆ ಮುಖ್ಯ. ಸಾರ್ವಜನಿಕರು ಸರ್ಕಾರದೊಂದಿಗೆ ಕೈ ಜೋಡಿಸಿ ಸಹಕರಿಸಬೇಕು. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಗಳನ್ನು ಪಾಲಿಸಬೇಕು’ ಎಂದು ಮನವಿ ಮಾಡಿದರು.

ವೈದ್ಯರ ಪರವಾಗಿ ಭಾಗಿ

ಎಲ್ಲಾ ವೈದ್ಯರು ಈ ಗೌರವಕ್ಕೆ ಅರ್ಹರು. ಅವರ ಪರವಾಗಿ ನಾನು ದಸರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಜಾಕಿ ಕ್ವಾಟ್ರರ್ಸ್‌‌ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಕೋವಿಡ್‌ ಸಮಯದಲ್ಲಿ ಡಾ.ಚಿದಂಬರ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ್ದೆ. ಈಗ ಕೋವಿಡ್ ಪರೀಕ್ಷೆಯಲ್ಲಿ ತೊಡಗಿದ್ದೇನೆ. 14 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

ಡಾ.ಟಿ.ಆರ್‌.ನವೀನ್‌, ವೈದ್ಯಾಧಿಕಾರಿ, ಟಿ.ಕೆ.ಬಡಾವಣೆ

ಎಲ್ಲರ ಸಹಾಯ ನೆರವಾಯಿತು

ಕುವೆಂಪುನಗರ ಪೊಲೀಸ್‌ ಠಾಣೆಯ ನಾನು ಪೊಲೀಸ್‌ ಕಮಿಷನರ್‌ ಕಚೇರಿಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಜುಬಿಲೆಂಟ್‌ ಕಂಪನಿಯ ಸೋಂಕಿತರು ಹಾಗೂ ಇತರ ಪ್ರಕರಣಗಳ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇಟ್ಟು ಕಾರ್ಯನಿರ್ವಹಿಸಿದೆವು. ವಿಳಂಬ ಮಾಡದೆ ಆರೋಗ್ಯ ಇಲಾಖೆಗೆ ಅಂಕಿಅಂಶಗಳನ್ನು ಒದಗಿಸಿದೆವು. ಪೊಲೀಸ್‌‌ ಇಲಾಖೆಯ ಎಲ್ಲರ ಸಹಕಾರದಿಂದ ಈ ಕೆಲಸ ಮಾಡಲು ಸಾಧ್ಯವಾಯಿತು. ಈಗ ದಸರಾ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಖುಷಿ ಉಂಟು ಮಾಡಿದೆ.

ಪಿ.ಕುಮಾರ್‌, ಪೊಲೀಸ್‌ ಕಾನ್‌ಸ್ಟೆಬಲ್‌

ಕೆಲಸಕ್ಕೆ ಫಲ ಸಿಕ್ಕಿದೆ

ಆಯ್ಕೆ ಖುಷಿ ಉಂಟು ಮಾಡಿದೆ. ನನ್ನ ಕೆಲಸಕ್ಕೆ ಫಲ ಸಿಕ್ಕಿದೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಏಳು ತಿಂಗಳಿನಿಂದ ಕೆಲಸ ಮಾಡುತ್ತಿದ್ದೇನೆ. ಕೋವಿಡ್‌ ಆರಂಭದಲ್ಲಿ ಗೊಂದಲವಿತ್ತು. ಬೆಳಿಗ್ಗೆ 8 ಗಂಟೆಗೆ ಆಸ್ಪತ್ರೆಗೆ ಹೋದರೆ ಬರುವುದು ರಾತ್ರಿ 9 ಗಂಟೆ ಆಗುತ್ತಿತ್ತು. ಸಮಸ್ಯೆ ಬಂದಾಗ ಕರೆ ಮಾಡುತ್ತಿದ್ದರು. ಮಧ್ಯರಾತ್ರಿಯೂ ಹೋಗಿ ಕೆಲಸ ಮಾಡಿದ್ದೇನೆ. ತುಂಬಾ ಒತ್ತಡವಿತ್ತು. 13 ವರ್ಷ ಹಾಗೂ 11 ವರ್ಷದ ಪುತ್ರಿಯರನ್ನೂ ನೋಡಿಕೊಳ್ಳಲು ಆಗಲಿಲ್ಲ. ಪತಿಯೇ ಎಲ್ಲಾಜವಾಬ್ದಾರಿ ನೋಡಿಕೊಂಡರು

ರುಕ್ಮಿಣಿ, ನರ್ಸ್‌

ನನ್ನ ಕೆಲಸ ಗುರುತಿಸಿದ್ದಾರೆ

ಎಷ್ಟೊಂದು ಆಶಾ ಕಾರ್ಯಕರ್ತರು ಇದ್ದಾರೆ. ಅದರಲ್ಲಿ ನನ್ನನ್ನು ಗುರುತಿಸಿ ಗೌರವ ನೀಡಿದ್ದಾರೆ. ನಾನು ನಂಜನಗೂಡಿನಲ್ಲಿ ಐದಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ ವೇಳೆ ಮನೆಮನೆಗೆ ತೆರಳಿ ಸಮೀಕ್ಷೆಯಲ್ಲಿ ತೊಡಗಿದ್ದೆವು. ದಿನಕ್ಕೆ 30 ಮನೆ ಸಮೀಕ್ಷೆ ನಡೆಸುತ್ತಿದ್ದೆವು. ನಂಜನಗೂಡಿನ ಜನ ಸಹಾಯ ಮಾಡಿದರು. ಹೀಗಾಗಿ, ಕೆಲಸ ಸುಲಭವಾಯಿತು. ಇಬ್ಬರು ಮಕ್ಕಳಿದ್ದಾರೆ. ಪತಿ ಕಾರ್ಪೆಂಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ನೂರ್‌ ಜಾನ್‌, ಆಶಾ ಕಾರ್ಯಕರ್ತೆ

ಜನರೂ ಕೆಲಸ ಮೆಚ್ಚಿದ್ದಾರೆ

16 ವರ್ಷಗಳಿಂದ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇನೆ. ಮಂಡಿ ಮೊಹಲ್ಲಾದಲ್ಲಿ (ವಾರ್ಡ್‌ ಸಂಖ್ಯೆ 24) ನಿವಾಸವಿದೆ. ದಸರೆ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲು ಅವಕಾಸ ಸಿಕ್ಕಿದ್ದು ತುಂಬಾ ಖುಷಿ ಉಂಟು ಮಾಡಿದೆ. ಪತಿ ಎನ್‌.ನರಸಿಂಹ ಕೂಡ ಪೌರಕಾರ್ಮಿಕರು. ನಿತ್ಯ ರಸ್ತೆ ಕಸ ಗುಡಿಸಿ ಸ್ವಚ್ಛಗೊಳಿಸುತ್ತೇನೆ. ಜನ, ಅಧಿಕಾರಿಗಳು ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ದೊಡ್ಡ ಸನ್ಮಾನ. ‌‌

ಮರಗಮ್ಮ, ಪೌರಕಾರ್ಮಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT