ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನದಲ್ಲಿ 6 ಡಿಗ್ರಿ ಉಷ್ಣಾಂಶ ಹೆಚ್ಚಳ: ಬಿಸಿಲ ಝಳಕ್ಕೆ ಬಸವಳಿದ ಮೈಸೂರಿಗರು

ಒಂದೇ ದಿನದಲ್ಲಿ ಗರಿಷ್ಠ ತಾಪಮಾನ 2.7 ಡಿಗ್ರಿ ಸೆಲ್ಸಿಯಸ್‌ ಏರಿಕೆ
Last Updated 2 ಏಪ್ರಿಲ್ 2021, 3:40 IST
ಅಕ್ಷರ ಗಾತ್ರ

ಮೈಸೂರು: ಹದಿನೈದು ದಿನದ ಅಂತರದಲ್ಲಿ ಮೈಸೂರಿನ ಗರಿಷ್ಠ ತಾಪಮಾನ ಆರು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಿದೆ. ಬಿಸಿಲ ಝಳ, ಧಗೆ ಮೈಸೂರಿಗರನ್ನು ಹೈರಾಣಾಗಿಸಿದೆ.

‘ಮಾರ್ಚ್‌ 31ರ ಬುಧವಾರ ಮೈಸೂರಿನ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಏ.1ರ ಗುರುವಾರದ ಗರಿಷ್ಠ ತಾಪಮಾನ 37.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಒಂದೇ ದಿನದ ಅಂತರದಲ್ಲಿ 2.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಹೆಚ್ಚಳಗೊಂಡಿದೆ’ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಸಹ ಸಂಶೋಧಕ ಎನ್.ನರೇಂದ್ರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಡಿಕೆಯಂತೆ ಏಪ್ರಿಲ್‌ ತಿಂಗಳಲ್ಲಿ ಮೈಸೂರಿನ ಗರಿಷ್ಠ ತಾಪಮಾನ 35 ಡಿಗ್ರಿಯಿಂದ 36 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿರಲಿದೆ. 2003ರ ಏ.26ರ ಶನಿವಾರ 38 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. 2000ನೇ ಇಸ್ವಿಯಿಂದ ಇಲ್ಲಿಯವರೆಗಿನ ದಾಖಲೆಯ ಗರಿಷ್ಠ ತಾಪಮಾನವಿದು’ ಎಂದು ಅವರು ಹೇಳಿದರು.

‘ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಏ.2ರಿಂದ 6ರವರೆಗೂ ಮೈಸೂರಿನ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಲಿದೆ. ಕನಿಷ್ಠ ಉಷ್ಣಾಂಶ 20, 21 ಡಿಗ್ರಿ ಆಸುಪಾಸಿರಲಿದೆ. ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಹವಾಮಾನ ಕ್ಷೇತ್ರ ವಿಭಾಗದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದಾಗ ಇದು ಏಪ್ರಿಲ್‌ ಆರಂಭದಲ್ಲೇ ದಾಖಲಾದ ಗರಿಷ್ಠ ತಾಪಮಾನವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ನೆರೆಯ ಚಾಮರಾಜನಗರ ಜಿಲ್ಲೆಯ ಗರಿಷ್ಠ ತಾಪಮಾನವೂ ಸಹ ಮುಂದಿನ ಐದು ದಿನ 38 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದೆ. ಕನಿಷ್ಠ ತಾಪಮಾನ 20, 21 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿರಲಿದೆ’ ಎಂದು ಬಾಬು ಹೇಳಿದರು.

‘ಮಾರ್ಚ್‌ ತಿಂಗಳ ಮೊದಲ ಎರಡು ವಾರ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. 15ರ ನಂತರ ಹಂತ ಹಂತವಾಗಿ ಹೆಚ್ಚಳಗೊಂಡಿದೆ. 15 ದಿನದ ಅವಧಿಯನ್ನು ಅವಲೋಕಿಸಿದಾಗ ಮೈಸೂರಿನ ಗರಿಷ್ಠ ತಾಪಮಾನದಲ್ಲಿ ಆರು ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಹೆಚ್ಚಾಗಿದೆ’ ಎಂದು ಅವರು ತಿಳಿಸಿದರು.

39.5 ಡಿಗ್ರಿ ದಾಖಲೆಯ ಉಷ್ಣಾಂಶ

‘ನಮ್ಮ ವಿಭಾಗದಲ್ಲಿ ಲಭ್ಯವಿರುವ ದಾಖಲೆ ಪರಿಶೋಧಿಸಿದಾಗ, 2000ನೇ ಇಸ್ವಿಯಿಂದ ಇಲ್ಲಿಯವರೆಗೂ ದಾಖಲಾದ ಗರಿಷ್ಠ ತಾಪಮಾನ 39.5 ಡಿಗ್ರಿ ಸೆಲ್ಸಿಯಸ್‌’ ಎಂದು ನರೇಂದ್ರ ಬಾಬು ತಿಳಿಸಿದರು.

‘2003ರ ಮೇ 31ರ ಶನಿವಾರ 39.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದೇ ಜಿಲ್ಲೆಯಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನ’ ಎಂದು ಅವರು ಹೇಳಿದರು.

‘2004ರ ಮಾರ್ಚ್‌ 22ರ ಸೋಮವಾರ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದೇ ಮಾರ್ಚ್‌ ತಿಂಗಳ ಗರಿಷ್ಠ ತಾಪಮಾನ ದಾಖಲಾದ ದಿನ’ ಎಂದು ಬಾಬು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT