ಶನಿವಾರ, ನವೆಂಬರ್ 28, 2020
26 °C
ನಿರ್ಲಕ್ಷಿತ ಸ್ಮಾರಕಕ್ಕೆ ಜೀವಕಳೆ: ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ

ಮೈಸೂರು: ‘ಅಭಿನವ ಕಾಳಿದಾಸ’ನ ಸ್ಮಾರಕಕ್ಕೆ ಕಾಯಕಲ್ಪ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದ, ‘ಅಭಿನವ ಕಾಳಿದಾಸ’ ಬಿರುದಾಂಕಿತ ಬಸವಪ್ಪ ಶಾಸ್ತ್ರಿಗಳ ನಿರ್ಲಕ್ಷಿತ ಸ್ಮಾರಕಕ್ಕೆ (ಸಮಾಧಿಯಿರುವ ಸ್ಥಳ) ಯುವಕರ ತಂಡವೊಂದು ಜೀವ ಕಳೆ ತುಂಬಿದೆ. ಇಲ್ಲಿಯೇ ಕರ್ನಾಟಕ ರಾಜ್ಯೋತ್ಸವ ಆಚರಿಸಲೂ ಸಿದ್ಧತೆ ನಡೆಸಿದೆ.

ಬಸವಪ್ಪ ಶಾಸ್ತ್ರಿಯವರ ಸ್ಮಾರಕ ನಿರ್ಲಕ್ಷ್ಯಕ್ಕೀಡಾಗಿರುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಂಡ ಮೈಸೂರಿನ ಯುವ ಬ್ರಿಗೇಡ್‌ನ ಸದಸ್ಯರು, ಸ್ಮಾರಕಕ್ಕೆ ಕಾಯಕಲ್ಪ ನೀಡುವ ಸಂಕಲ್ಪ ತೊಟ್ಟರು. ಇದಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿಗಳಿಗೆ ಎಡತಾಕಿ, ಕೊನೆಗೆ ಈ ಸಂಕಲ್ಪ ಈಡೇರಿಕೆಗಾಗಿ ತಾವೇ ಶ್ರಮದಾನಕ್ಕೆ ಮುಂದಾದರು. ತಮ್ಮ ದುಡಿಮೆಯಲ್ಲಿನ ಸ್ವಲ್ಪ ಹಣವನ್ನು ಅಗತ್ಯ ಖರ್ಚಿಗೆ ಬಳಸಿಕೊಳ್ಳಲು ನಿರ್ಧರಿಸಿದರು.

15 ಯುವಕರ ತಂಡ ತಮ್ಮಲ್ಲೇ ₹ 25 ಸಾವಿರ ಕಲೆ ಹಾಕಿ, ಅಗತ್ಯ ವಸ್ತುಗಳನ್ನು ಖರೀದಿಸಿತು. ಶ್ರಮದಾನಕ್ಕೆ ಮುಂದಾಯಿತು.


ಯುವ ತಂಡದ ಶ್ರಮದಾನ

ಅ.20ರಿಂದಲೂ ನಿತ್ಯ ನಸುಕಿನ 5.30ರಿಂದ 8.30ರವರೆಗೆ ಬರೋಬ್ಬರಿ ಮೂರು ತಾಸು ಶ್ರಮದಾನ ಮಾಡುತ್ತಿರುವ ಈ  ತಂಡ, ನಂತರ ತಮ್ಮ ದೈನಂದಿನ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಕಾರ್ಖಾನೆಗಳ ಕಾರ್ಮಿಕರು, ಬಿಪಿಒನ ನೌಕರರು, ದಿನಗೂಲಿಗಳು, ಸ್ವಂತ ವಹಿವಾಟಿನ ಅಂಗಡಿ ನಡೆಸುವ ಯುವಕರು ಈ ತಂಡದಲ್ಲಿದ್ದಾರೆ.

ಕನ್ನಡಕ ರಾಜ್ಯೋತ್ಸವದ ದಿನವಾದ ಭಾನುವಾರದಂದು ಇಡೀ ದಿನ ಕೆಲಸ ಮಾಡಿ, ಸ್ಮಾರಕದ ಜೀರ್ಣೋದ್ಧಾರದ ಬಹುಪಾಲು ಕೆಲಸವನ್ನು ಮುಗಿಸಿದರು.

ಮಳೆ ನೀರು ಸೋರದಂತೆ ತಾವೇ ತಾರಸಿಯ ದುರಸ್ತಿ ಮಾಡಿದ್ದಾರೆ. ಸ್ಮಾರಕಕ್ಕೆ ಬಣ್ಣ ಬಳಿದಿದ್ದಾರೆ. ಸುತ್ತಲೂ ಹಾಗೂ ಒಳಗೆ ಬೆಳೆದಿದ್ದ ಗಿಡಗಂಟಿಗಳನ್ನು ಕಿತ್ತು ಹಾಕಿದ್ದಾರೆ. ಕಸವನ್ನೆಲ್ಲ ತೆಗೆದು ಸ್ವಚ್ಛಗೊಳಿಸಿದ್ದಾರೆ. ಇದರಿಂದ ಬಸವಪ್ಪ ಶಾಸ್ತ್ರಿಗಳ ಸ್ಮಾರಕ ಇದೀಗ ಸುಂದರವಾಗಿ ಕಂಗೊಳಿಸುತ್ತಿದೆ. ಹೀಗೆ ಹಸನಾದ ಸ್ಮಾರಕದ ಅಂಗಳದಲ್ಲಿ ಇದೇ ವಾರ, ಸಂಭ್ರಮದ ಕರ್ನಾಟಕ ರಾಜ್ಯೋತ್ಸವದ ಆಚರಣೆಗೆ ಈ ಯುವ ತಂಡ ಸಜ್ಜಾಗಿದೆ.


ಜೀರ್ಣೋದ್ಧಾರದ ಬಳಿಕ ಕಂಗೊಳಿಸುತ್ತಿರುವ ಸ್ಮಾರಕ

ಬಸವಪ್ಪ ಶಾಸ್ತ್ರಿಗಳ ಕುರಿತು...

1843ರ ಮೇ 2ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ನಾರಸಂದ್ರದಲ್ಲಿ ಜನಿಸಿದ್ದ ಬಸವಪ್ಪ ಶಾಸ್ತ್ರಿಗಳು, ಕಾಳಿದಾಸನ ‘ಅಭಿಜ್ಞಾನ ಶಾಕುಂತಲಂ’ ನಾಟಕವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿ ‘ಅಭಿನವ ಕಾಳಿದಾಸ’ ಎಂಬ ಬಿರುದಾಂಕಿತರಾದವರು.


ಬಸವಪ್ಪ ಶಾಸ್ತ್ರಿ

ಮೈಸೂರು ಸಂಸ್ಥಾನದ ರಾಜಗೀತೆ ‘ಕಾಯೌ ಶ್ರೀಗೌರಿ ಕರುಣಾಲಹರೀ, ತೋಯಜಾಕ್ಷಿ ಶಂಕರೀಶ್ವರೀ...’ ರಚಿಸಿದ್ದು ಸಹ ಇವರೇ. ಹಳಗನ್ನಡ, ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದ್ದ ಬಸವಪ್ಪ ಶಾಸ್ತ್ರಿಗಳು ಹಲವು ಕೃತಿ, ನಾಟಕ, ಕವಿತೆ ರಚಿಸಿದ್ದಾರೆ. 1881ರ ಫೆಬ್ರುವರಿಯಲ್ಲಿ ಕುದುರೆಗಾಡಿಯಿಂದ ಬಿದ್ದು ತಮ್ಮ 48ನೇ ವಯಸ್ಸಿನಲ್ಲೇ ಮೃತಪಟ್ಟರು.

***********

‘ಲೆಟ್ಸ್‌ ಡೂ ಇಟ್‌’ನ ಪ್ರಶಾಂತ್‌ ನಮ್ಮ ಕೆಲಸ ನೋಡಿ ಬಣ್ಣ ಕೊಡಿಸಿದರು. ಗೆಳೆಯರ ಪರಿಶ್ರಮದ ಫಲ ಕನ್ನಡ ನಾಡಿನ ಕವಿ–ಸಾಹಿತಿಯೊಬ್ಬರ ಸ್ಮಾರಕಕ್ಕೆ ಜೀವಕಳೆ ಬಂದಿದೆ
-ಚಂದ್ರಶೇಖರ್‌, ತಂಡದ ಸದಸ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.