ಶುಕ್ರವಾರ, ಆಗಸ್ಟ್ 12, 2022
20 °C
ಎಬಿವಿಪಿ ವತಿಯಿಂದ ನಗರದಲ್ಲಿ ಅಭಿಯಾನ

‘ನಶಾಮುಕ್ತ ಭಾರತ’ಕ್ಕಾಗಿ ಸಹಿಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಾದಕ ವಸ್ತುವಿನ ನಶಾಮುಕ್ತ ಭಾರತಕ್ಕಾಗಿ ಇಲ್ಲಿನ ಮೈಸೂರು ಗ್ರಾಮಾಂತರ ಬಸ್‌ ನಿಲ್ದಾಣದ ಮುಂದೆ ಸಹಿಸಂಗ್ರಹ ಅಭಿಯಾನವನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಬುಧವಾರ ನಡೆಸಿದರು.

ಇದರ ಜತೆಗೆ, ಮನ್ನಾಸ್ ಮಾರುಕಟ್ಟೆಯಲ್ಲೂ ಸಹಿಸಂಗ್ರಹದ ಫಲಕವನ್ನು ಇರಿಸಲಾಗಿದ್ದು, ಒಟ್ಟು 500ಕ್ಕೂ ಅಧಿಕ ಮಂದಿ ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಕೈ ಜೋಡಿಸಿದರು.

ಮಾದಕವಸ್ತು ಜಾಲದಲ್ಲಿ ಪ್ರಭಾವಿಗಳು, ಸಿನಿಮಾ ನಟ, ನಟಿಯರ ಹೆಸರು ಕೇಳಿ ಬರುತ್ತಿದೆ. ಮತ್ತಷ್ಟು ಮಂದಿ ಭಾಗಿಯಾಗಿರುವ ಶಂಕೆಯೂ ಮೂಡಿದೆ. ನಿಜಕ್ಕೂ ಇದೊಂದು ಘೋರ ದುರಂತ ಎಂದು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಕೂಡಲೇ ಉನ್ನತಮಟ್ಟದ ತನಿಖೆ ನಡೆಸಬೇಕು. ಈ ಜಾಲದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

‘ಮಾದಕವಸ್ತುಗಳ ಜಾಲವನ್ನು ವಿಸ್ತರಿಸುವ ಮೂಲಕ ವಿದೇಶಗಳು ನಮ್ಮ ಮೇಲೆ ಬಾಂಬ್ ಹಾಕುತ್ತಿವೆ. ಮಾದಕವಸ್ತುಗಳ ವಿಷವರ್ತುಲದಲ್ಲಿ ಸಿಲುಕುವ ಯುವಜನತೆ ನಿಷ್ಕ್ರಿಯವಾಗುತ್ತಾರೆ. ಅವರ ಕುಟುಂಬ ಬೀದಿ ಪಾಲಾಗುತ್ತದೆ. ಈ ಮೂಲಕ ರಾಷ್ಟ್ರದ ಉತ್ಪಾದಕತೆ ಮತ್ತು ಆರ್ಥಿಕತೆಗೆ ದೊಡ್ಡ ಹೊಡೆತ ನೀಡುವುದು ಇದರ ಉದ್ದೇಶ. ಇದನ್ನು ಯುವಜನರು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅವರಿಗೆ ಮಾದಕವಸ್ತುಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳನ್ನು ಕುರಿತು ಮಾಹಿತಿ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಒತ್ತಾಯಿಸಿದರು.

ಒಂದು ವೇಳೆ ಸಾರ್ವಜನಿಕರಿಗೆ ಮಾದಕವಸ್ತುಗಳ ಮಾರಾಟ ಕುರಿತು ಮಾಹಿತಿ ದೊರೆತರೆ ಕೂಡಲೇ ಪೊಲೀಸರಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ರಾಮದಾಸರೆಡ್ಡಿ, ಜಿಲ್ಲಾ ಸಂಚಾಲಕರಾದ ಗೌತಮ್, ನಗರ ಸಂಘಟನಾ ಕಾರ್ಯದರ್ಶಿ ಶರತ್, ನಗರ ಸಹಕಾರ್ಯದರ್ಶಿಗಳಾದ ಪ್ರಜ್ಞಾ, ನಾಗಶ್ರೀ, ಚಿರಂತ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.