ಶುಕ್ರವಾರ, ಜನವರಿ 22, 2021
21 °C
ಎಚ್‌.ಡಿ.ಕೋಟೆ ನಗರದಲ್ಲಿ ಕಾಂಗ್ರೆಸ್‌ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ

ಸೋಲನ್ನು ಸವಾಲಾಗಿ ಸ್ವೀಕರಿಸಿ: ಧ್ರುವನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ‘ಚುನಾವಣೆಯಲ್ಲಿ ಸೋಲು –ಗೆಲುವು ಸಹಜ, ಅದಕ್ಕಾಗಿ ಪಕ್ಷವನ್ನು ತೊರೆಯಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಕೆಪಿಸಿಸಿ ವಕ್ತಾರ ಆರ್.ಧ್ರುವನಾರಾಯಣ ತಿಳಿಸಿದರು.

ಪಟ್ಟಣದ ಕನಕ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ‌ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗೆದ್ದವರು ಬಡವರಿಗೆ ಮೂಲ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಬೇಕು. ಗ್ರಾಮಸಭೆ ನಡೆಸುವ ಮೂಲಕ ಸೂಕ್ತ ತೀರ್ಮಾನಗಳನ್ನು ತೆಗದುಕೊಳ್ಳಬೇಕು’ ಎಂದರು.

‘ಎಚ್‌.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕುಗಳಿಂದ ಕಾಂಗ್ರೆಸ್‌ ಬೆಂಬಲಿತ 341 ಸದಸ್ಯರು ಜಯಗಳಿಸುವ ಮೂಲಕ ಎಚ್‌.ಡಿ.ಕೋಟೆ ತಾಲ್ಲೂಕು ಕಾಂಗ್ರೆಸ್‌ ಭದ್ರಕೋಟೆ ಎನ್ನುವುದನ್ನು ಸಾಬೀತುಪಡಿಸಿದೆ. ಬಿಜೆಪಿಯವರ ಆಮಿಷಕ್ಕೆ ಬಲಿಯಾಗಬಾರದು. ನಮ್ಮ ಪಕ್ಷಕ್ಕೆ ನಿಷ್ಠರಾಗಿ ಕಾಂಗ್ರೆಸ್‌ನಲ್ಲಿಯೇ ಮುಂದುವರೆಯಬೇಕು’ ಎಂದು ಸಲಹೆ ನೀಡಿದರು.

ಶಾಸಕ ಸಿ.ಅನಿಲ್‌ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪ್ರತಿ ಹಳ್ಳಿಗಳಿಗೂ ರಸ್ತೆ, ಕುಡಿಯುವ ನೀರು, ಸಮುದಾಯ ಭವನಗಳು ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲು ₹350 ಕೋಟಿಗೂ ಹೆಚ್ಚು ಅನುದಾನ ಬಳಸಿಕೊಳ್ಳಲಾಗಿದೆ’ ಎಂದು
ತಿಳಿಸಿದರು.

‘ಗ್ರಾಮ ವಾಸ್ತವ್ಯದ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಅರಿತು ಕೆಲಸ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಎರಡೂ ತಾಲ್ಲೂಕುಗಳಿಂದ 25ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ’ ಎಂದರು.

‘ತಾಲ್ಲೂಕಿನಲ್ಲಿ ಯುವಕರೇ ಹೆಚ್ಚಾಗಿ ಜಯಗಳಿಸಿದ್ದಾರೆ, ಎಲ್ಲರಿಗೂ ಸಂಪೂರ್ಣ ಸಹಕಾರ ನೀಡುತ್ತೇನೆ. ಗ್ರಾಮದ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡೋಣ. ಹಿಂದೆ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದೆ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಲಕ್ಷ್ಮಣ್‌, ಎಸ್.ವಿ.ವೆಂಕಟೇಶ್‌, ಜಿ.ವಿ.ಸೀತಾರಾಂ, ರವಿ, ಎಂ.ಸಿ.ದೊಡ್ಡನಾಯಕ, ಚಿಕ್ಕವೀರನಾಯಕ, ಕೆ.ಈರೇಗೌಡ, ಬಿ.ಜೆ.ವಿಜಯಕುಮಾರ್‌, ಆರ್.ಧರ್ಮಸೇನ, ಬಿ.ವಿ.ಬಸವರಾಜು, ಎಚ್.ಸಿ.ನರಸಿಂಹಮೂರ್ತಿ, ಎಂ.ಮಧು, ವೆಂಕಟೇಶ್‌, ಏಜಾಜ್‌ ಪಾಷ, ಮಾದಪ್ಪ, ಶಂಭುಲಿಂಗನಾಯ್ಕ, ಸರೋಜಿನಿ, ಗಿರಿಗೌಡ, ಸಿದ್ದರಾಮೇಗೌಡ, ಅಂಕಪ್ಪ, ಪ್ರದೀಪ್‌, ರಾಜು, ಸೋಮೇಶ್‌, ಪರಿಶಿವ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು