ಸೋಮವಾರ, ಸೆಪ್ಟೆಂಬರ್ 20, 2021
29 °C
ಕೆಆರ್‌ಎಸ್‌ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದು ವಕೀಲ ದುರ್ಮರಣ

ಪ್ರತ್ಯೇಕ ಅಪಘಾತ; ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌) ದ ಮಾಜಿ ಅಧ್ಯಕ್ಷ ಹಾಗೂ ವಕೀಲರಾದ ಸಿ.ಎನ್.ಕುಮಾರ್ (57) ಅವರು ಇಲ್ಲಿನ ಕೆಆರ್‌ಎಸ್ ರಸ್ತೆಯಲ್ಲಿ ಬೈಕ್‌ನಿಂದ ಬಿದ್ದು ಮೃತಪಟ್ಟಿದ್ದಾರೆ.‌

‘ಇವರು ಶ್ರೀರಂಗಪಟ್ಟಣದಿಂದ ಇಲ್ಲಿನ ವಿಜಯನಗರದಲ್ಲಿರುವ ತಮ್ಮ ನಿವಾಸಕ್ಕೆ ಬೈಕ್‌ನಲ್ಲಿ ತೆರಳುವಾಗ ಅಪಘಾತ ಸಂಭವಿಸಿದೆ. ಮೇಲ್ನೋಟಕ್ಕೆ ಬೈಕಿನಿಂದ ಇವರು ಬಿದ್ದಿರುವಂತೆ ಅನ್ನಿಸುತ್ತಿದೆ. ಬೇರೆ ಯಾವುದಾದರೂ ವಾಹನ ಗುದ್ದಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಹೀಗಾಗಿ, ಸಮೀಪದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. 

ಕೆ.ಆರ್.ನಗರ ತಾಲ್ಲೂಕಿನ ಹಾಸನ–ಮೈಸೂರು ರಸ್ತೆಯಲ್ಲಿರುವ ಅರ್ಕೇಶ್ವರ ದೇಗುಲದ ಸಮೀಪ ಬೈಕ್‌ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕೆ.ಆರ್.ನಗರದ ನಿವಾಸಿ ನಂದಕುಮಾರ್ (45) ಮೃತಪಟ್ಟಿದ್ದಾರೆ. ಮತ್ತೊಂದು ಬೈಕಿನ ಸವಾರ ವಾಸು ಗಾಯಗೊಂಡಿದ್ದಾರೆ.

ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆಯಲ್ಲಿ ಬೈಕ್‌ನಿಂದ ಬಿದ್ದು ರಾಘು (32) ಮೃತಪಟ್ಟಿದ್ದಾರೆ.

ಇಬ್ಬರು ಆರೋಪಿಗಳ ಬಂಧನ: ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಇಬ್ಬರು ದ್ವಿಚಕ್ರ ವಾಹನಗಳ ಕಳ್ಳತನದ ಆರೋಪಿಗಳನ್ನು ಬಂಧಿಸಿದ್ದಾರೆ.

ಉದಯಗಿರಿ ನಿವಾಸಿ ಅಬ್ದುಲ್ ರಹೀಮ್ (21), ಶಾಂತಿನಗರದ ಅಬೀದ್ ಪಾಷಾ (39) ಬಂಧಿತರು. ಇವರಿಂದ ₹ 4 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಎ.ಸಿ.ಪಿ. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ, ಇನ್‌ಸ್ಪೆಕ್ಟರ್ ಆರ್.ಜಗದೀಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ತಂಡದಲ್ಲಿದ್ದರು.

ಹಸು ಕಳ್ಳತನದ ಆರೋಪಿಗಳ ಬಂಧನ: ರಾತ್ರಿ ವೇಳೆ ಟಾಟಾ ಸುಮೋ ವಾಹನದಲ್ಲಿ ಹಸುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಝೈನ್ (24), ರುಮಾನ್ ಪಾಷ (27), ಸಮೀರ್ ಅಹಮ್ಮದ್  (27) ಬಂಧಿತರು.

ಆರೋಪಿಗಳು ಮೈಸೂರು ದಕ್ಷಿಣ ಮತ್ತು ವರುಣ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ವೇಳೆ ಹಸುಗಳನ್ನು ಕಳ್ಳತನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವೀಸಾ ಅವಧಿ ಮುಗಿದವರಿಗಾಗಿ ಶೋಧ: ವೀಸಾ ಅವಧಿ ಮುಗಿದರೂ ನಗರದಲ್ಲಿ ವಾಸವಿರುವ 33 ಮಂದಿ ವಿದೇಶಿಯರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಇವರ ಪೈಕಿ ಕೇವಲ 11 ಮಂದಿಯ ಸುಳಿವು ಮಾತ್ರ ಲಭ್ಯವಾಗಿದೆ. ಇನ್ನುಳಿದವರ ಪತ್ತೆಗಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಗು ಅಪಹರಣ; ಆರೋಪಿ ಬಂಧನ‌:  ಆಂಧ್ರಪ್ರದೇಶದ ಅಲಿಪಿರಿ ಗ್ರಾಮದಿಂದ ಮಗುವನ್ನು ಅಪಹರಿಸಿ ತಂದಿದ್ದ ಆರೋಪಿ ಆಶಾ (31) ಎಂಬಾಕೆಯನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿ, 4 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ.

‘ಇಲ್ಲಿನ ಸಯ್ಯಾಜಿರಾವ್ ರಸ್ತೆಯ ಅಕ್ಕಿಚೌಕದ ಆಟೊ ನಿಲ್ದಾಣದ ಬಳಿ 13 ವರ್ಷದ ಬಾಲಕ ಹಾಗೂ ಮಗುವಿನೊಂದಿಗೆ ಅಲೆಯುತ್ತಿ ಈಕೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಈ ವೇಳೆ ಮಗು ಅಪಹರಣ ಮಾಡಿದ್ದಾಗಿ ಆರೋಪಿ ತಿಳಿಸಿದರು. ಈ ಮಾಹಿತಿಯನ್ನು ಅಲಿಪಿರಿ ಪೊಲೀಸ್ ಠಾಣೆಗೆ ನೀಡಲಾಯಿತು. ಅಲ್ಲಿಂದ ಬಂದ ಪೊಲೀಸರ ವಶಕ್ಕೆ ಮಗುವನ್ನು ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿ ಎನ್.ಶಶಿಧರ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಆರ್.ದಿವಾಕರ್, ಪಿಎಸ್‍ಐ ರಾಜು, ಲೀಲಾವತಿ, ತಾರಾ, ಆಂಜನೇಯ, ಪ್ರವೀಣ್ ಕುಮಾರ್, ನಾಗರಾಜು, ಮಂಚನಾಯಕ, ನಂದೀಶ್, ನಾರಾಯಣ, ಶಿಲ್ಪಾ ಬಾರಿಕರ, ಶೀಲಾ ಈ ಕಾರ್ಯಾಚರಣೆ ನಡೆಸಿದ್ದರು.

ಪ್ರಾಧ್ಯಾಪಕ ದಂಪತಿಗೆ ನೋಟಿಸ್‌
ಮೈಸೂರು
: ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ರಾಮಚಂದ್ರಪ್ಪ ಹಾಗೂ ಪತ್ನಿ ಲೋಲಾಕ್ಷಿ ಅವರಿಗೆ ಕುಲಸಚಿವ ಶಿವಪ್ಪ ಶನಿವಾರ ನೋಟಿಸ್ ನೀಡಿದ್ದಾರೆ.

‌‘ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದೀರಿ ಎಂಬ ಆರೋಪವು ಮಾಧ್ಯಮದಲ್ಲಿ ಪ್ರಸಾರವಾಗಿರುವ ಕುರಿತು ವಿವರಣೆ ನೀಡಬೇಕು’ ಎಂದು ರಾಮಚಂದ್ರಪ್ಪ ಅವರಿಗೆ ನೋಟಿಸ್ ನೀಡಲಾಗಿದೆ.

‘ಘಟನೆಯನ್ನು ಸರಿಯಾಗಿ ಪರಾಮರ್ಶಿಸದೆ ಪತಿಯು, ವಿದ್ಯಾರ್ಥಿನಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾಧ್ಯಮದವರಿಗೆ ವಿಶ್ವವಿದ್ಯಾನಿಲಯದ ಪೂರ್ವಾನುಮತಿ ಪಡೆಯದೇ ಹೇಳಿಕೆ ನೀಡಿರುವ ಕುರಿತು ವಿವರಣೆ ನೀಡುವಂತೆ’ ಪ್ರೊ.ಲೋಲಾಕ್ಷಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಕುಲಸಚಿವ ಆರ್.ಶಿವಪ್ಪ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.