ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು | ತಂಬಾಕು ಮಂಡಳಿ ನಿರ್ದೇಶಕಿ ವರ್ಗಾವಣೆಗೆ ಕ್ರಮ: ರಘುನಾಥ ಬಾಬು ಹೇಳಿಕೆ

ತಂಬಾಕು ಹರಾಜು ಮಂಡಳಿ ಅಧ್ಯಕ್ಷ
Last Updated 7 ಅಕ್ಟೋಬರ್ 2021, 5:20 IST
ಅಕ್ಷರ ಗಾತ್ರ

ಹುಣಸೂರು: ‘ರಾಜ್ಯ ತಂಬಾಕು ಮಂಡಳಿ ನಿರ್ದೇಶಕರ ನಡವಳಿಕೆ ಕುರಿತು ವಾಣಿಜ್ಯ ಸಚಿವಾಲಯದ ಗಮನಕ್ಕೆ ತರಲಾಗಿದ್ದು, ಅವರನ್ನು ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಂಬಾಕು ಹರಾಜು ಮಂಡಳಿ ಅಧ್ಯಕ್ಷ ವೈ. ರಘುನಾಥ ಬಾಬು ತಿಳಿಸಿದರು.

ತಾಲ್ಲೂಕಿನ ಕಟ್ಟೆಮಳಲವಾಡಿ ತಂಬಾಕು ಹರಾಜು ಮಂಡಳಿಯಲ್ಲಿ ಹುಣಸೂರು ಉಪವಿಭಾಗದ ತಂಬಾಕು ಬೆಳೆಗಾರರ ಸಭೆಯಲ್ಲಿ ಮಾತನಾಡಿ, ‘ಮಂಡಳಿ ನಿರ್ದೇಶಕಿ ಅಶ್ವಿನಿ ನಾಯ್ಡು ಬೆಳೆಗಾರರೊಂದಿಗೆ ಸೌಜನ್ಯಯುತವಾಗಿ ವರ್ತಿಸುತ್ತಿಲ್ಲ. ಹರಾಜು ಮಾರುಕಟ್ಟೆಗೆ ಭೇಟಿ ನೀಡದೆ ಅಧಿಕಾರಿ ನೀಡುವ ವರದಿ ಆಧರಿಸಿ ಆಡಳಿತ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಸಂಬಂಧ ಸಂಸದ ಪ್ರತಾಪಸಿಂಹ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರದ ಶಾಸಕರು ಒತ್ತಡ ತಂದಿದ್ದು, ಅತಿ ಶೀಘ್ರದಲ್ಲೇ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಸ್ಥಳಾಂತರ: ‘ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಮೈಸೂರಿನಿಂದ ಹುಣಸೂರಿಗೆ ಸ್ಥಳಾಂತರಿಸಲು ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು, ಅ.30 ರೊಳಗೆ ಆದೇಶ ಹೊರ ಬೀಳಲಿದೆ’ ಎಂದರು.

ದರ ಸಮರ: ‘ತಂಬಾಕು ಖರೀದಿಸುವ ಕಂಪನಿಗಳೊಂದಿಗೆ ಅ.30ರೊಳಗೆ ಸಭೆ ನಡೆಸಿ ಸರಾಸರಿ ದರ ಕನಿಷ್ಠ ₹200 ಸಿಗುವ ಬಗ್ಗೆ ಚರ್ಚಿಸಿ ರೈತರ ಪರ ನಿಲ್ಲುತ್ತೇನೆ. ಕೋವಿಡ್ ಸಮಯದಲ್ಲಿ ರೈತರು ಉತ್ತಮ ಫಸಲು ಬೆಳೆದಿದ್ದರೂ ಮಾರುಕಟ್ಟೆ ಇರಲಿಲ್ಲ. ಈ ಸಾಲಿನಲ್ಲಿ ಬೇಡಿಕೆ ಇದೆ, ಆದರೆ ತಂಬಾಕು ಫಸಲು ಇಲ್ಲ’ ಎಂದು ರಘುನಾಥ ಬಾಬು ಹೇಳಿದರು.

ದಂಡ: ‘ಅನಧಿಕೃತ ಬೆಳೆಗಾರರಿಗೆ ವಿಧಿಸುವ ಶೇ 15ರಷ್ಟು ದಂಡವನ್ನು ಶೇ 5ಕ್ಕೆ ತಗ್ಗಿಸಲಾಗಿದೆ. ಭವಿಷ್ಯದಲ್ಲಿ ದಂಡಮುಕ್ತ ಖರೀದಿಗೆ ಒತ್ತು ನೀಡಲು ಬದ್ಧ’ ಎಂದರು.

ಸಂಸದ ಪ್ರತಾಪಸಿಂಹ ಮಾತನಾಡಿ, ‘ಕಂಪ್ಲಾಪುರ ತಂಬಾಕು ಹರಾಜು ಮಂಡಳಿ ಜನಪ್ರತಿನಿಧಿಗಳ ಗಮನಕ್ಕೆ ಬಾರದಂತೆ ಅಧಿಕಾರಿ ಹಂತದಲ್ಲೇ ಬಂದ್ ಮಾಡಿ ರೈತರಿಗೆ ಸಮಸ್ಯೆ ಸೃಷ್ಟಿಸಿದ ಅಧಿಕಾರಿಗೆ ತಕ್ಕ ಪಾಠ ಕಲಿಸಲಾಗಿದೆ. ಈ ಮಾರುಕಟ್ಟೆಗೆ ಸೇರಿದ ಬೆಳೆಗಾರರು ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದು, ಹತ್ತಿರದಲ್ಲಿ ಮಾರುಕಟ್ಟೆ ಕಲ್ಪಿಸಲು ಮಂಡಳಿ ಅಧ್ಯಕ್ಷರು ಕ್ರಮವಹಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿ, ‘ತಂಬಾಕಿಗೆ ಉತ್ತಮ ದರ ಕೊಡಿಸುವ ಮತ್ತು ನಿಯಂತ್ರಿಸುವ ಜವಾಬ್ದಾರಿ ಮಂಡಳಿ ಹೊರಬೇಕು. ರೈತ ಮತ್ತು ಕಂಪನಿಗಳ ನಡುವೆ ಉತ್ತಮ ಕೆಲಸ ನಿರ್ವಹಿಸಬೇಕು. ಈ ಕೆಲಸವಾಗದೆ ರಾಜ್ಯದ ತಂಬಾಕು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ’ ಎಂದು ಕಿಡಿಕಾರಿದರು.

ಸಭೆಯಲ್ಲಿ ಶಾಸಕ ಸಾ.ರಾ.ಮಹೇಶ್, ಐಟಿಸಿ ವ್ಯವಸ್ಥಾಪಕ ಶ್ರೀನಿವಾಸ್ ರೆಡ್ಡಿ, ತಂಬಾಕು ಬೆಳೆಗಾರರಾದ ಮೂರ್ತಿ, ಬಸವರಾಜ್, ನಾಗರಾಜಪ್ಪ, ಅಶೋಕ್, ನಂಜುಂಡೇಗೌಡ, ಚಂದ್ರೇಗೌಡ, ಮೋದೂರು ಮಹೇಶ್ ಮಾತನಾಡಿದರು.

‘ಕನ್ನಡಿಗ ಅಧಿಕಾರಿ ನೇಮಿಸಿ’
‘ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ರಾಜ್ಯ ತಂಬಾಕು ನಿರ್ದೇಶಕಿ ಅಶ್ವಿನಿ ನಾಯ್ಡು ಅವರ ವರ್ಗಾವಣೆಗೆ ಅಧ್ಯಕ್ಷರು ಗಂಭೀರ ಪ್ರಯತ್ನ ನಡೆಸಬೇಕಿದ್ದು, ತೆರವಾದ ಸ್ಥಾನಕ್ಕೆ ಕನ್ನಡಿಗ ಅಧಿಕಾರಿಯನ್ನು ನಿರ್ದೇಶಕರನ್ನಾಗಿ ನಿಯೋಜಿಸಿ ರೈತರು ಮುಕ್ತವಾಗಿ ಸಮಸ್ಯೆ ಚರ್ಚಿಸುವ ‍ವಾತಾವರಣ ನಿರ್ಮಿಸಬೇಕು’ ಎಂದು ಪ್ರತಾಪಸಿಂಹ ಆಗ್ರಹಿಸಿದರು.

***

ಮಂಡ್ಯ ಸಂಸದೆ ಸುಮಲತಾ ತಂಬಾಕು ಬೆಳೆಗಾರರ ಬಗ್ಗೆ ಚಕಾರವೆತ್ತದೆ ಮೌನವಹಿಸಿದ್ದು, ಗಣಿ ವಿಚಾರದಲ್ಲಿ ಅಲ್ಲೋಲ ಕಲ್ಲೋಲ ಮಾಡಿ ಪ್ರಚಾರ ಪಡೆದರು.
–ಸಾ.ರಾ.ಮಹೇಶ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT