ನಟ ವಿಷ್ಣುವರ್ಧನ್ ಸ್ಮಾರಕ ದಕ್ಷಿಣ ಭಾರತದಲ್ಲೇ ಮಾದರಿ: ಭಾರತಿ ವಿಷ್ಣುವರ್ಧನ್

ಶನಿವಾರ, ಜೂಲೈ 20, 2019
22 °C
ಹಾಲಾಳು ಗ್ರಾಮದಲ್ಲಿ ವಿಷ್ಣುವರ್ಧನ್‌ ಸ್ಮಾರಕ ಕಾಮಗಾರಿಗೆ ಪೊಲೀಸ್‌ ಭದ್ರತೆಯಲ್ಲಿ ಚಾಲನೆ

ನಟ ವಿಷ್ಣುವರ್ಧನ್ ಸ್ಮಾರಕ ದಕ್ಷಿಣ ಭಾರತದಲ್ಲೇ ಮಾದರಿ: ಭಾರತಿ ವಿಷ್ಣುವರ್ಧನ್

Published:
Updated:
Prajavani

ಮೈಸೂರು: ತಾಲ್ಲೂಕಿನ ಹಾಲಾಳು ಗ್ರಾಮದಲ್ಲಿ, ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯ ಪೊಲೀಸ್ ಬಿಗಿಭದ್ರತೆ ನಡುವೆ ಸೋಮವಾರ ಆರಂಭಗೊಂಡಿತು.

ಐದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು.

ಈ ಕಾರ್ಯ ವೀಕ್ಷಿಸಲು ಬಂದಿದ್ದ ನಟಿ ಭಾರತಿ ವಿಷ್ಣುವರ್ಧನ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಇದೊಂದು ದೊಡ್ಡ ಕನಸು. ವಿಷ್ಣುವರ್ಧನ್ ಅವರಿಗೆ ಮೈಸೂರು ಅತ್ಯಂತ ಇಷ್ಟವಾದ ನಗರಿ. ಸ್ಮಾರಕ ನಿರ್ಮಾಣ ಕಾರ್ಯ ಇಂದು ಆರಂಭವಾಗಿದೆ. ಎರಡು ವರ್ಷದೊಳಗಾಗಿ, ದಕ್ಷಿಣ ಭಾರತದಲ್ಲೇ ಮಾದರಿಯಾದ ಅತ್ಯದ್ಭುತ ಸ್ಮಾರಕ ಇಲ್ಲಿ ತಲೆ ಎತ್ತಲಿದೆ’ ಎಂದು ತಿಳಿಸಿದರು.

ಸ್ಮಾರಕದ ಜೊತೆಗೆ ವಸ್ತುಸಂಗ್ರಹಾಲಯ, ಅಭಿನಯ ತರಬೇತಿ ಶಾಲೆ, ನಾಟಕೋತ್ಸವ, ಚಿತ್ರೋತ್ಸವಗಳನ್ನು ನಡೆಸುವಂತಹ ವೇದಿಕೆಗಳೂ ಇರಲಿವೆ. ರಾಜ್ಯಕ್ಕೆ ಇದೊಂದು ದೊಡ್ಡ ಕೊಡುಗೆ ಎನಿಸಲಿದೆ ಎಂದು ತಿಳಿಸಿದರು.

‘ಇದು ಸರ್ಕಾರದ್ದೇ ಜಮೀನು. ಯಾರಿಗೂ ಪರಿಹಾರ ಕೊಡುವ ಅಗತ್ಯ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಮಾತನಾಡಿ, ‘ಮುಂದಿನ ಪೀಳಿಗೆಗೆ ಇದೊಂದು ಪೂಜಾಸ್ಥಾನ ಮತ್ತು ಶೈಕ್ಷಣಿಕ ಸ್ಥಳವಾಗಲಿದೆ. ವಿಷ್ಣುವರ್ಧನ್ ಮೈಸೂರಿನಲ್ಲೇ ಹುಟ್ಟಿದವರು. ಹಾಗಾಗಿ, ಅವರ ಸ್ಮಾರಕ ಇಲ್ಲಿ ನಿರ್ಮಾಣವಾಗುತ್ತಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಡಾ.ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾಪನಾ ಸಮಿತಿ ವತಿಯಿಂದ ₹ 11 ಕೋಟಿ ಮೊತ್ತದಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ. ಸರ್ಕಾರ, ಈಗಾಗಲೇ ₹ 6 ಕೋಟಿ ಬಿಡುಗಡೆ ಮಾಡಿದೆ. ಎರಡು ಎಕರೆಯಲ್ಲಿ ಸ್ಮಾರಕ, ಉಳಿದ ಜಾಗದಲ್ಲಿ ಅಭಿನಯ ತರಬೇತಿ ಶಾಲೆ ಹಾಗೂ ಇತರ ವೇದಿಕೆಗಳು ಸ್ಥಾಪನೆಯಾಗಲಿವೆ.

ಈ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಮಹದೇವಪ್ಪ ಮತ್ತು ಸಣ್ಣಮ್ಮ ಅವರು ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್‌ ಇತ್ತೀಚೆಗಷ್ಟೇ ಇವರ ಅರ್ಜಿಯನ್ನು ವಜಾ ಮಾಡಿತ್ತು. ನಂತರ, ಗಿಡಗಂಟಿ ತೆರವುಗೊಳಿಸಲು ಬಂದ ಕೆಲಸಗಾರರನ್ನು ಕೆಲವರು ತಡೆದು ವಾಪಸ್ ಕಳುಹಿಸಿದ್ದರು. ಇದೀಗ ಪೊಲೀಸ್ ಬಿಗಿಭದ್ರತೆ ನಡುವೆ ಸ್ಮಾರಕ ನಿರ್ಮಾಣ ಕಾರ್ಯ ಆರಂಭಗೊಂಡಿದೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 3

  Frustrated
 • 7

  Angry

Comments:

0 comments

Write the first review for this !