ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನೆರೆ ಸಂತ್ರಸ್ತರಿಗೆ 3 ವರ್ಷವಾದರೂ ಸಿಗದ ಸೂರು

ಕಬಿನಿ ನದಿ ಪ್ರವಾಹದಿಂದ ಮನೆ ಕಳೆದುಕೊಂಡ ಬಿದರಹಳ್ಳಿ ಸರ್ಕಲ್‌ನ ಜನ
Last Updated 21 ಜೂನ್ 2022, 4:08 IST
ಅಕ್ಷರ ಗಾತ್ರ

ಮೈಸೂರು: ಕಬಿನಿ ನದಿ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸರಗೂರು ತಾಲ್ಲೂಕಿನ ಬಿದರಹಳ್ಳಿ ಸರ್ಕಲ್‌ನ ನೆರೆ ಸಂತ್ರಸ್ತರಿಗೆ ಮೂರು ವರ್ಷವಾದರೂ ಸೂರು ಸಿಕ್ಕಿಲ್ಲ.

ಸಂತ್ರಸ್ತರಿಗೆ ನೀಡಲು ಗುರುತಿಸಿರುವ ಜಮೀನು ಮೌಲ್ಯ ₹7.20 ಲಕ್ಷ ಪಾವತಿ ವಿಚಾರದಲ್ಲಿನ ಗೊಂದಲದಿಂದಾಗಿ ಇಲ್ಲಿನ 42 ಕುಟುಂಬಗಳು ಶೀಟು, ಟಾರ್ಪಲ್‌ಗಳಿಂದ ನಿರ್ಮಿಸಿದ ಶೆಡ್‌ಗಳಲ್ಲೇ ವಿಷಜಂತುಗಳ ಭೀತಿಯಿಂದ ದಿನದೂಡುತ್ತಿದ್ದಾರೆ.

2019ರ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಬಿನಿ ನದಿಯಲ್ಲಿ ಪ್ರವಾಹ ಉಂಟಾಗಿ ಜಲಾಶಯದ ಪಕ್ಕದಲ್ಲೇ ಇದ್ದ ಬಿದರಹಳ್ಳಿ ಸರ್ಕಲ್‌ನ ಮನೆಗಳು ಜಲಾವೃತಗೊಂಡಿದ್ದವು. ಬಹುತೇಕ ಮನೆಗಳಿಗೆ ನೀರು ನುಗ್ಗಿ, ವಾಸಿಸಲು ಯೋಗ್ಯವಲ್ಲದ ರೀತಿಯಲ್ಲಿ ಹಾನಿಗೊಂಡಿದ್ದವು. ಹೀಗಾಗಿ, ನೆರೆ ಸಂತ್ರಸ್ತರನ್ನು ಆರೈಕೆ ಕೇಂದ್ರದಲ್ಲಿ ಇರಿಸಲಾಗಿತ್ತು. ಬಳಿಕ, ಅಲ್ಲಿಂದಲೂ ಸಂತ್ರಸ್ತರನ್ನು ಖಾಲಿ ಮಾಡಿಸಲಾಗಿತ್ತು.

ಅಂದಿನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ವಸತಿ ಸಚಿವ ವಿ.ಸೋಮಣ್ಣ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ತಗ್ಗು ಪ್ರದೇಶದಲ್ಲಿರುವ ಇಡೀ ಗ್ರಾಮವನ್ನೇ ಸ್ಥಳಾಂತರಿಸಿ, ಮೂರು ತಿಂಗಳೊಳಗೆ ಹೊಸದಾಗಿ 42 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದಕ್ಕಾಗಿ ಜಾಗವನ್ನೂ ಗುರುತಿಸಿ ಪುನರ್ವಸತಿಗಾಗಿ ಭೂಮಿಪೂಜೆ ಮಾಡಿದ್ದರು.

ನಿರಾಶ್ರಿತ ಕುಟುಂಬಗಳಿಗೆ ಮನೆ ನಿರ್ಮಿಸಲು ಗುರುತಿಸಿದ್ದ ಗ್ರಾಮದ ಸರ್ವೆ ನಂಬರ್‌ 20ರ ಎರಡು ಎಕರೆ 16 ಗುಂಟೆ ಜಾಗವು ಕಾವೇರಿ ನೀರಾವರಿ ನಿಗಮಕ್ಕೆ ಸೇರಿದೆ. ಇದನ್ನು ಶಾಶ್ವತ ಆಶ್ರಯ ಯೋಜನೆಗೆ ಕ್ರಯದ ಆಧಾರದ ಮೇಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ವರ್ಗಾಯಿಸಲು ನೀರಾವರಿ ಇಲಾಖೆಯಲ್ಲಿ ನಡಾವಳಿ ಕೈಗೊಳ್ಳಲಾಗಿತ್ತು. ನಿವೇಶನದ ಮೌಲ್ಯ ₹7.20 ಲಕ್ಷ ಪಾವತಿಸುವಂತೆ ಗ್ರಾಮ ಪಂಚಾಯಿತಿಗೆ ತಾಲ್ಲೂಕು ಪಂಚಾಯಿತಿ ಸೂಚಿಸಿತ್ತು. ಆದರೆ, ಅನುದಾನ ಲಭ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ತಿಳಿಸಿತ್ತು. ಹೀಗಾಗಿ, ಈ ಜಮೀನಿನ ಮೌಲ್ಯದ ಅನುದಾನವನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಮಾಡಿದ್ದರು.

‘ಕಬಿನಿ ಅಣೆಕಟ್ಟು ನಿರ್ಮಿಸಲು 50 ವರ್ಷಗಳ ಹಿಂದೆ ಬಂದ ಕಾರ್ಮಿಕರು ಇಲ್ಲೇ ನೆಲೆಸಿದ್ದಾರೆ. ನೀರಾವರಿ ಯೋಜನೆಗೆ ಬೆವರು ಸುರಿಸಿದ್ದ ಕುಟುಂಬಗಳನ್ನು ನೀರಾವರಿ ಇಲಾಖೆ ನಡುನೀರಿನಲ್ಲಿ ಕೈಬಿಟ್ಟಿದೆ’ ಎಂದು ಎಸ್‌ಯುಸಿಐಸಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಸುನಿಲ್‌ ಟಿ.ಆರ್‌. ದೂರಿದರು.

‘ನೆರೆ ಸಂತ್ರಸ್ತರಿಗೆ ಸೂರು ಇರಲಿ, ನಿವೇಶನದ ಭಾಗ್ಯವೂ ಕನಸ್ಸಿನ ಮಾತಾಗಿದೆ. ಕೇವಲ ₹7.20 ಲಕ್ಷ ಪಾವತಿ ವಿಚಾರದಲ್ಲಿ ಕಾವೇರಿ ನೀರಾವರಿ ನಿಗಮ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಕಂದಾಯ ಇಲಾಖೆ ನಡುವೆ ತಿಕ್ಕಾಟ ನಡೆಯುತ್ತಿದೆ. ಹಣ ಪಾವತಿಸಲು ಯಾವ ಇಲಾಖೆಯೂ ಮುಂದೆ ಬರುತ್ತಿಲ್ಲ. ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇವೆ. ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದರು.

ಜಾಹೀರಾತಿನಲ್ಲಿ ‘ಸೂರು’ ಕಲ್ಪಿಸಿದ್ದ ಸರ್ಕಾರ!

‘ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳ ಬಗ್ಗೆ 2021ರ ಜುಲೈ 26ರಂದು ಪ್ರಕಟವಾಗಿದ್ದ ಜಾಹೀರಾತಿನಲ್ಲಿ ನೆರೆ ಸಂತ್ರಸ್ತರ ಪರಿಹಾರ, ಪುನರ್ವಸತಿ ಪೂರ್ಣಗೊಂಡಿರುವ ಊರುಗಳ ಪಟ್ಟಿಯಲ್ಲಿ ಬಿದರಹಳ್ಳಿ ಸರ್ಕಲ್‌ ಹೆಸರೂ ಇರುವುದನ್ನು ಕಂಡು ನೆರೆ ಸಂತ್ರಸ್ತರು ದಿಗ್ಭ್ರಮೆಗೊಂಡಿದ್ದರು. ಸೂರು ಕಲ್ಪಿಸದೆಯೇ ಸರ್ಕಾರ ಜಾಹೀರಾತು ನೀಡಿತ್ತು’ ಎಂದು ಸುನಿಲ್‌ ಟಿ.ಆರ್‌. ದೂರಿದರು.

‘ಬಿದರಹಳ್ಳಿ ಪಕ್ಕದ ಕಪಿಲೇಶ್ವರ ಕಾಲೊನಿಯಲ್ಲಿ ಪುನರ್ವಸತಿಯ 42 ಮನೆಗಳ ಕಾಮಗಾರಿ ಆರಂಭಿಸಿ ಆರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿಯನ್ನು ಶೀಘ್ರದಲ್ಲೇ ನಡೆಸಲಿದ್ದಾರೆ’ ಎಂದು ತಿಳಿಸಿದರು.

ಅನುದಾನ ಮಂಜೂರು ಶೀಘ್ರ: ಡಿ.ಸಿ

‘ನಿವೇಶನ ಖರೀದಿಗೆ ನೀಡಬೇಕಿರುವ ಅನುದಾನಕ್ಕೆ ಸಂಬಂಧಿಸಿದ ಕಡತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಕಾವೇರಿ ನೀರಾವರಿ ನಿಗಮದಲ್ಲಿ ಪೆಂಡಿಂಗ್‌ ಇತ್ತು. ಆ ಕಡತವನ್ನು ಜಿಲ್ಲಾ ಪಂಚಾಯಿತಿಗೆ ವರ್ಗಾಯಿಸಿದ್ದೇನೆ. ನಿವೇಶನ ಖರೀದಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಹಣ ಮಂಜೂರಾಗಬೇಕಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಿಂದ ವೈಯಕ್ತಿಕವಾಗಿ ಫಾಲೋಅಪ್‌ ಮಾಡಿಸುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಅನುಮೋದನೆ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮನೆ ಕಟ್ಟಿಸಿಕೊಡಿ: ರವಿ ಆಗ್ರಹ

‘ಪ್ರವಾಹದಿಂದ 8 ಮನೆಗಳು ಕುಸಿದಿದ್ದವು. 34 ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ವಾಸಿಸಲು ಸಾಧ್ಯವಾಗುತ್ತಿಲ್ಲ. ಆ ಮನೆಗಳ ಮುಂದೆ ಟಾರ್ಪಲ್‌ನಲ್ಲಿ ಗುಡಿಸಿಲು ಹಾಕಿಕೊಂಡು ವಾಸ ಮಾಡುತ್ತಿದ್ದೇವೆ. ಮನೆಯೊಳಗೆ ಹಾವು, ಚೇಳು ಬರುತ್ತವೆ. ನಮಗೆ ಕೂಡಲೇ ಮನೆ ಕಟ್ಟಿಸಿಕೊಡಬೇಕು’ ಎಂದು ಬಿದರಹಳ್ಳಿ ಸರ್ಕಲ್‌ ನಿವಾಸಿ ರವಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT