ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿಬೆಟ್ಟ ಜೀವವೈವಿಧ್ಯ ತಾಣವಾಗಲಿ: ಅನಂತ ಹೆಗಡೆ ಅಶೀಸರ

ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನಂತ ಹೆಗಡೆ ಅಶೀಸರ ಸೂಚನೆ
Last Updated 23 ಜುಲೈ 2021, 6:32 IST
ಅಕ್ಷರ ಗಾತ್ರ

ಮೈಸೂರು: 'ಚಾಮುಂಡಿಬೆಟ್ಟವನ್ನು ಪಾರಂಪರಿಕ ಜೀವವೈವಿಧ್ಯ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು' ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ನಡೆದ ಮಂಡಳಿ ಸಭೆಯಲ್ಲಿ ಅವರು 'ಚಾಮುಂಡಿಬೆಟ್ಟದಲ್ಲಿ ಹಸಿರೀಕರಣಕ್ಕಾಗಿ ಸುಸ್ಥಿರವಾದ ಯೋಜನೆ ರೂಪಿಸಬೇಕು. ಜಿಲ್ಲೆಯಲ್ಲಿ ಈ ಬಗೆಯ ಅಪರೂಪದ ತಾಣಗಳನ್ನು ಗುರುತಿಸಿ ರಕ್ಷಣೆಗೆ ಕ್ರಮ ವಹಿಸಬೇಕು' ಎಂದು ಹೇಳಿದರು.

ಕೆರೆಗಳ ಒತ್ತುವರಿ ತೆರವು ಮಾಡಿದರೆ ಸಾಲದು. ಮತ್ತೆ ಒತ್ತುವರಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅದನ್ನು ಪುನಶ್ಚೇತನಗೊಳಿಸಿ ಜೀವವೈವಿಧ್ಯ ಉಳಿಯುವಂತೆ ಮಾಡಲು ಯೋಜನೆ ರೂಪಿಸಬೇಕು' ಎಂದರು.

'ನಿಷೇಧಿತ ರಾಸಾಯನಿಕ ಗೊಬ್ಬರಗಳ ಮಾರಾಟ ಕುರಿತು ಹೆಚ್ಚಿನ ಗಮನ ಹರಿಸಬೇಕು. ಇವು ಜೀವವೈವಿಧ್ಯಕ್ಕೆ ಅಪಾಯಕಾರಿ. ಇಂತಹ ಗೊಬ್ಬರಗಳನ್ನು ಮಾರಾಟ ಮಾಡುವ ಅಂಗಡಿಗಳ ಪರವಾನಗಿಯನ್ನೇ ರದ್ದುಪಡಿಸಬೇಕು' ಎಂದು ಸೂಚಿಸಿದರು.

'ಜೀವವೈವಿಧ್ಯ ದಿನಾಚರಣೆ ಕೇವಲ ಆಚರಣೆಗಷ್ಟೇ ಸೀಮಿತವಾಗಬಾರದು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕನಿಷ್ಠ ಒಂದು ಚಟುವಟಿಕೆ ಮೂಲಕ ದಿನವನ್ನು ಆಚರಿಸಬೇಕು' ಎಂದು ತಿಳಿಸಿದರು.

'ಜೀವವೈವಿಧ್ಯ ಸಮಿತಿಗಳಿಗೆ ಜೀವ ತುಂಬಬೇಕು. ಈ ವರ್ಷ ಜೀವವೈವಿಧ್ಯ ಅಭಿಯಾನ ಅರ್ಥಪೂರ್ಣವಾಗುವಂತೆ ಮಾಡಬೇಕು’ ಎಂದರು.

ಇದಕ್ಕೂ ಮುನ್ನ ಪ್ರಗತಿಪರ ರೈತ ಸಾಧಕ ಎ.ಪಿ.ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಜನತಾ ಜೀವವೈವಿಧ್ಯ ದಾಖಲಾತಿಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ.ಯೋಗೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರುದ್ರೇಶ್ ಇದ್ದರು.

‘ವನ ಸಂವರ್ಧನ’ ಯೋಜನೆ ಜಾರಿ

ಚಾಮರಾಜನಗರ: ಅಳಿವಿನ ಅಂಚಿನಲ್ಲಿರುವ ಸಸ್ಯಗಳ ಸಂರಕ್ಷಣೆಗಾಗಿ, ಚಾಮರಾಜನಗರ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ‘ವನ ಸಂವರ್ಧನ’ ಯೋಜನೆ ಜಾರಿಗೊಳಿಸಲಾಗುವುದು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಗುರುವಾರ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ‘ಚಾಮರಾಜನಗರ, ಬೀದರ್‌, ಮಂಡ್ಯ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಆಯಾ ಭಾಗದಲ್ಲಿ ವಿನಾಶದ ಅಂಚಿನಲ್ಲಿರುವ ಸಸ್ಯಗಳನ್ನು ಪೋಷಿಸಲು ಆದ್ಯತೆ ನೀಡಲಾಗುವುದು. ಚಾಮರಾಜನಗರದಲ್ಲಿ ರಕ್ತ ಚಂದನ ಸಂರಕ್ಷಣೆಗೆ ಒತ್ತು ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT