‘ಶುಚಿ’ ಯೋಜನೆ ಪುನರ್ ಆರಂಭಿಸಲು ಒತ್ತಾಯ

ಮೈಸೂರು: ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಉಚಿತವಾಗಿ ಪೂರೈಸುವ ‘ಶುಚಿ’ ಯೋಜನೆಯನ್ನು ಸರ್ಕಾರ ಪುನರ್ ಆರಂಭಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಒತ್ತಾಯಿಸಿದರು.
ದೇಶದಲ್ಲಿ ಈಗ ‘ಪೀರಿಯಡ್ಸ್ ಪಾವರ್ಟಿ’ಯು ಬಡ ಹೆಣ್ಣು ಮಕ್ಕಳನ್ನು ಕಾಡುತ್ತಿದೆ. ಈ ಯೋಜನೆಯ ಸ್ಥಗಿತದಿಂದಾಗಿ ಹೆಣ್ಣುಮಕ್ಕಳು ಋತುಚಕ್ರದ ಅವಧಿಯಲ್ಲಿ ಸಂಕಟಪಡುತ್ತಿದ್ದಾರೆ. ಅನೈರ್ಮಲ್ಯದಿಂದ ಅವರು ಆನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸರ್ಕಾರ ಇನ್ನಾದರೂ ಇವರತ್ತ ಗಮನಹರಿಸಬೇಕು ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈ ಯೋಜನೆಗೆ ವರ್ಷಕ್ಕೆ ₹ 49 ಕೋಟಿ ವ್ಯಯವಾಗುತ್ತದೆ. ಬುಲೆಟ್ ರೈಲು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ, ಹೊಸ ಸಂಸತ್ ಭವನದ ಕಾಮಗಾರಿಗೆಲ್ಲ ಹಣ ವಿನಿಯೋಗಿಸುವ ಸರ್ಕಾರಕ್ಕೆ ಈ ಯೋಜನೆಗೆ ವೆಚ್ಚ ಭರಿಸುವುದು ಕಷ್ಟವೇ ಎಂದು ಪ್ರಶ್ನಿಸಿದರು.
ಒಂದು ವರ್ಷದಿಂದ ಈ ಯೋಜನೆಯ ಕುತ್ತಿಗೆಯನ್ನು ಸರ್ಕಾರ ಹಿಸುಕಿದೆ. ಇದಕ್ಕೆ ಗೋರಿ ಕಟ್ಟಲು ಹೊರಟಿದೆ. ಕನಿಷ್ಠ ಪಡಿತರ ವ್ಯವಸ್ಥೆಯಲ್ಲಾದರೂ ಉಚಿತವಾಗಿ ಸ್ಯಾನಿಟರ್ ನ್ಯಾಪ್‌ಕಿನ್‌ಗಳನ್ನು ಸರ್ಕಾರ ಬಡ ಹೆಣ್ಣುಮಕ್ಕಳಿಗೆ ಪೂರೈಸಬೇಕು ಎಂದರು.
ಈಚೆಗೆ ಬನ್ನಿಕುಪ್ಪೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಈ ವಿಚಾರ ಪ್ರಧಾನವಾಗಿ ಪ್ರಸ್ತಾಪವಾಯಿತು. ಹೆಣ್ಣು ಮಕ್ಕಳು ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗಾಗಿ ಪರದಾಡುತ್ತಿರುವ ವಿಚಾರ ಗೊತ್ತಾಯಿತು ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.