ಶುಕ್ರವಾರ, ಏಪ್ರಿಲ್ 23, 2021
22 °C
ಯುವತಿಯರನ್ನು ಚುಡಾಯಿಸುತ್ತಿದ್ದವರು ವಶಕ್ಕೆ

ಪುಂಡರಿಗೆ ಪೊಲೀಸರ ಬಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಪೋಲಿ, ಪುಂಡರಿಗೆ ಕೆ.ಆರ್.ಉಪವಿಭಾಗ ವ್ಯಾಪ್ತಿಯ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಸ್ತೆಯಲ್ಲಿ ಪರಸ್ಪರ ಬಡಿದಾಡಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ನಾಲ್ವರು ಪುಂಡರನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದರೆ, ಯುವತಿಯರನ್ನು ಚುಡಾಯಿಸುತ್ತಿದ್ದ ನಾಲ್ವರು ಪುಂಡರನ್ನು ವಿದ್ಯಾರಣ್ಯಾಪುರಂ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಲ್ಲಿನ ಮುನಿಸ್ವಾಮಿನಗರದ 8ನೇ ಕ್ರಾಸ್‌ನಲ್ಲಿ ನಡೆಯುತ್ತ ಹೋಗುತ್ತಿದ್ದ ಯುವತಿಯೊಬ್ಬರನ್ನು ಅಡ್ಡಗಟ್ಟಿದ ನಾಲ್ವರು ಯುವಕರು ಆಟೊದಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಕೈ ಹಿಡಿದು ಎಳೆದಾಡಿದ್ದಾರೆ. ಇವರ ಅನುಚಿತ ವರ್ತನೆಯಿಂದ ಭಯಗೊಂಡ ಯುವತಿ ಸ್ಥಳದಿಂದ ಓಡಿ ಹೋಗಿದ್ದಾರೆ. ರಕ್ಷಣೆಗೆ ಬಂದ ಸ್ಥಳೀಯರ ಮೇಲೂ ಪುಂಡರು ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ರೋಸಿ ಹೋದ ಸ್ಥಳೀಯರು ವಿದ್ಯಾರಣ್ಯಾಪುರಂ ಠಾಣೆಗೆ ದೂರು ನೀಡಿದ್ದಾರೆ.

ದೂರನ್ನು ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ರವಿಶಂಕರ್ ಆರೋಪಿಗಳ ಪತ್ತೆಗೆ ಬಲೆ ಬೀಸಿ ನಾಲ್ವರು ಯುವಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುನಿಸ್ವಾಮಿನಗರ, ಕನಕಗಿರಿ ಸೇರಿದಂತೆ ಈ ಭಾಗದಲ್ಲಿ ಪೋಲಿ, ಪುಂಡರ ಹಾವಳಿ ಮೇರೆ ಮೀರಿದೆ. ಮಹಿಳೆಯರು ಮತ್ತು ಮಕ್ಕಳು ಓಡಾಡುವುದು ಕಷ್ಟವಾಗುತ್ತಿದೆ. ಹಗಲು ಹೊತ್ತಿನಲ್ಲೇ ಯುವತಿಯರನ್ನು ಚುಡಾಯಿಸುವುದು ಸಾಮಾನ್ಯ ಎಂಬಂತಾಗಿದೆ. ಪುಂಡರಿಗೆ ಹೆದರುವ ಬಹುತೇಕ ಮಂದಿ ಯುವತಿಯರು ಪೊಲೀಸರಿಗೆ ದೂರು ನೀಡುವುದೇ ಇಲ್ಲ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯರೊಬ್ಬರು ಹೇಳುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ‘ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಉದಾಸೀನ ಮಾಡುವುದೇ ಇಲ್ಲ. ಪುಂಡರನ್ನು ಮಟ್ಟ ಹಾಕಲಾಗುವುದು. ತೊಂದರೆಗೆ ಒಳಗಾದವರು ಧೈರ್ಯವಾಗಿ ದೂರು ನೀಡಬಹುದು. ಇಲ್ಲವೇ, ಮಾಹಿತಿಯನ್ನಾದರೂ ನೀಡಿದರೆ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ’ ಎಂದು ಹೇಳಿದ್ದಾರೆ.

ನಾಲ್ವರು ಪುಂಡರ ಸೆರೆ:

ಇಲ್ಲಿನ ನಂಜುಮಳಿಗೆಯಲ್ಲಿ ಗುರುವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಸುಮಾರು 10 ಜನರು ಹೊಡೆದಾಡಿಕೊಂಡಿದ್ದರು. ಟೆನಿಸ್ ರ‍್ಯಾಕೆಟ್‌, ದೊಣ್ಣೆ, ಬಾಟಲಿಗಳನ್ನು ಝಳಪಿಸಿ ಭೀತಿ ಸೃಷ್ಟಿಸಿದ್ದರು. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕೆ.ಆರ್.ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನು ಹೆಚ್ಚಿನ ಮಂದಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.