ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ವಿ.ಕಾರಂತರ ಕೊಡುಗೆ ಅನನ್ಯ: ವಿಮರ್ಶಕ ನಾರಾಯಣ ರಾಯಚೂರ್

Last Updated 23 ಸೆಪ್ಟೆಂಬರ್ 2022, 14:10 IST
ಅಕ್ಷರ ಗಾತ್ರ

ಮೈಸೂರು: ‘ರಂಗಭೂಮಿಗೆ ಬಿ.ವಿ.ಕಾರಂತರ ಕೊಡುಗೆ ಅನನ್ಯವಾದುದು’ ಎಂದು ರಂಗ ವಿಮರ್ಶಕ ನಾರಾಯಣ ರಾಯಚೂರ್ ಹೇಳಿದರು.

ನಗರದ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ರಂಗಭೀಷ್ಮ ಬಿ.ವಿ.ಕಾರಂತರ ಜನ್ಮೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ‘ಭಾರತೀಯ ರಂಗಸಂಗೀತೋತ್ಸವ’ದಲ್ಲಿ ಶುಕ್ರವಾರ ನಡೆದ ‘ಕಾರಂತರ ನೆನಪಿನಲ್ಲಿ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಕಾರಂತರು ರಂಗ‌ಭೂಮಿಯ ಜೊತೆಗೆ ಸಾಂಸ್ಕೃತಿಕ, ಬೌದ್ಧಿಕ‌ ಹಾಗೂ ಜ್ಞಾನದ ಆಸ್ತಿ. ಅವರು ನೀಡಿರುವುದು ಗುರುತರವಾದುದು. ಮಾಸ್ತಿಯಂತೆಯೇ ಕಾರಂತರೂ ಕನ್ನಡದ ಆಸ್ತಿಯೇ ಸರಿ. ಹೋದಲ್ಲೆಲ್ಲಾ ಶಿಷ್ಯ ಸಮೂಹವನ್ನು- ತಮ್ಮದೇ ಆದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಹೀಗಾಗಿಯೇ ಅವರನ್ನು ಇಂದಿಗೂ ಸ್ಮರಿಸುತ್ತಿದ್ದೇವೆ’ ಎಂದರು.

‘ರಾಷ್ಟ್ರಕವಿ ಕುವೆಂಪು ಹೇಳಿದಂತೆ, ಎಲ್ಲಿಯೂ ನೆಲೆಯನ್ನೂರದೇ ರಂಗ ಜಂಗಮ‌ ಎನಿಸಿಕೊಂಡರು. ರಂಗ ಕ್ರಿಯೆಯು ನಿಂತ ನೀರಾಗಬಾರದು ಎಂಬ ಆಶಯವನ್ನು ಹೊಂದಿದ್ದವರು’ ಎಂದು ಸ್ಮರಿಸಿದರು.

ಅವರ ನೆನಪು ತಪ್ಪಲ್ಲ:ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ‘ಭಾರತೀಯ ರಂಗ ಸಂಗೀತಕ್ಕೆ ಕಾರಂತರು ನೀಡಿದ ಕೊಡುಗೆ ಅಪಾರವಾದುದು. ಆದರೆ, ಕಾರಂತರನ್ನು ಗಂಭೀರವಾಗಿ ನಡೆಸಿಕೊಂಡಿಲ್ಲ ಎಂಬ ಕೊರಗು ನನ್ನಲ್ಲಿತ್ತು. ಆದ್ದರಿಂದ, ಅವರ ಜನ್ಮ ದಿನವಾದ ಸೆ.19ನ್ನು ಭಾರತೀಯ ರಂಗ ಸಂಗೀತ ದಿನವೆಂದು ಘೋಷಿಸಿ ಎರಡು ವರ್ಷಗಳಿಂದ ಆಚರಿಸುತ್ತಿದ್ದೇವೆ. ಅವರ ನೆನಪಿನಲ್ಲಿ ನಡೆದ ‘ಭಾರತೀಯ ರಂಗಸಂಗೀತೋತ್ಸವ’ದಲ್ಲಿ ಈವರೆಗೆ 300 ರಂಗ ಗೀತೆಗಳು ಮೂಡಿ ಬಂದಿವೆ. ಇದು ಅವರಿಗೆ ಸಲ್ಲುವ ಗೌರವವಲ್ಲವೇ?’ ಎಂದು ಕೇಳಿದರು. ‘ಅವರನ್ನು ಕಾರ್ಯಕ್ರಮಗಳ ಮೂಲಕ ನೆನಪು ಮಾಡಿಕೊಳ್ಳುವುದು ತಪ್ಪಲ್ಲ; ಮೂರ್ಖತನದ ಕೆಲಸವಲ್ಲ’ ಎಂದರು.

‘ಇತ್ತೀಚೆಗೆ ರಂಗಭೂಮಿಯ ವಿಮರ್ಶೆಗಳೇ ನಡೆಯುತ್ತಿಲ್ಲ. ದುಡ್ಡು ಕೊಟ್ಟರೂ ಬರೆಯುವುದಿಲ್ಲ. ಸಂಪಾದನೆ ಇಲ್ಲವಾದ್ದರಿಂದ ಅದನ್ನು ಪತ್ರಿಕೆಗಳು ಪ್ರಕಟಿಸುತ್ತಿಲ್ಲ. ಕಲಾವಿದರಿಗೆ ಬೆನ್ನು ತಟ್ಟುವ ಮಾರ್ಗವೇ ವಿಮರ್ಶೆ. ಆ ಕೆಲಸ ಈಗ ಇಲ್ಲವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಗಡಿಯಾಚೆ ಕಾರಂತ ರಂಗ ಚಳವಳಿ’ ವಿಷಯದ ಕುರಿತು ಕಾಸರಗೋಡಿನ ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿದರು.

ಉಡುಪಿಯ ರಂಗ ನಿರ್ದೇಶಕ ಗುರುಪಾದ ಮಾರ್ಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಇದ್ದರು.

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಸ್ವಾಗತಿಸಿದರು.

ಇದಕ್ಕೂ ಮುನ್ನ, ಕಾರಂತರ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT