ಮಂಗಳವಾರ, ಮೇ 17, 2022
24 °C
ಒಂದು ವಾರದ ಕಾಲ ನಿತ್ಯ ಮಧ್ಯಾಹ್ನ ಧರಣಿ ನಡೆಸಲು ನಿರ್ಧಾರ

ಮೈಸೂರು: ಖಾಸಗೀಕರಣದ ವಿರುದ್ಧ ಬೆಮೆಲ್‌ ನೌಕರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಖಾಸಗೀಕರಣದ ವಿರುದ್ಧ ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್‌ ನೇತೃತ್ವದಲ್ಲಿ ಇಲ್ಲಿನ ಬೆಮೆಲ್ ಕಾರ್ಖಾನೆ ಮುಂದೆ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನ 2.30ರಿಂದ 3.30ರವರೆಗೆ ಒಂದು ಗಂಟೆ ಕಾಲ ನಡೆದ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚಿನ ಕಾರ್ಮಿಕರು ಭಾಗಿಯಾಗಿದ್ದರು. ಮೊದಲ ಪಾಳಿಯವರು ಅರ್ಧ ಗಂಟೆ ತಡವಾಗಿ ಮನೆಗೆ ಹೋಗಬೇಕು, 2ನೇ ಪಾಳಿಯವರು ಅರ್ಧ ಗಂಟೆ ಬೇಗ ಕಾರ್ಖಾನೆಗೆ ಬರಬೇಕು ಎಂದು ಈ ಮೊದಲೇ ಸಂಘಟನೆ ಕಾರ್ಮಿಕರಿಗೆ ಸೂಚಿಸಿತ್ತು.

ಅದರಂತೆ ಕಾರ್ಖಾನೆ ಮುಂದೆ ಸೇರಿದ ಕಾರ್ಮಿಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.

ಈ ವೇಳೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮುನಿರೆಡ್ಡಿ, ‘ಸರ್ಕಾರ ಬೆಮೆಲ್ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಮೀಸಲಾತಿ ನಾಶವಾಗಿ ಸಾಮಾಜಿಕ ನ್ಯಾಯ ಮರೀಚಿಕೆಯಾಗಲಿದೆ. ಹಾಗಾಗಿ, ಹೋರಾಟ ಅನಿವಾರ್ಯ’ ಎಂದು ಹೇಳಿದರು.

ಕಡಿಮೆ ಬೆಲೆಗೆ ಉತೃಷ್ಟ ಉಪಕರಣಗಳನ್ನು ತಯಾರಿಸುವ ಬೆಮಲ್ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿಲ್ಲ. ಖಾಸಗೀಕರಣ ಮಾಡುವ ಯಾವುದೇ ಅಗತ್ಯವೂ ಈಗ ಇಲ್ಲ. 2016ರಿಂದಲೇ ಕಾರ್ಮಿಕರು ವಿರೋಧಿಸುತ್ತ ಬರುತ್ತಿದ್ದರೂ ಸರ್ಕಾರ ಈಗ ಖಾಸಗೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಇನ್ನು ಮುಂದೆ ಕಠಿಣ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಮೆಲ್ ಕಾರ್ಖಾನೆಯಲ್ಲಿ ಈಗಾಗಲೇ ಶೇ 26ರಷ್ಟು ಷೇರನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಸದ್ಯ, ಶೇ 54.03ರಷ್ಟು ಬಂಡವಾಳ ಮಾತ್ರ ಸರ್ಕಾರದ್ದು ಇದೆ. ಈಗ ಇದನ್ನೂ ಮಾರಾಟ ಮಾಡಿದರೆ ನಿಜಕ್ಕೂ ಸಂಪೂರ್ಣ ಕಾರ್ಖಾನೆ ಖಾಸಗಿಯವರ ಪಾಲಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೂರ್ತಿ ಸೇರಿದಂತೆ ಹಲವು ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು