ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಿಂಗಳಾಂತ್ಯಕ್ಕೆ ಆಮ್ಲಜನಕ ಘಟಕ ನಿರ್ಮಿಸಿ’

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಸೂಚನೆ
Last Updated 9 ಜುಲೈ 2021, 2:54 IST
ಅಕ್ಷರ ಗಾತ್ರ

ಮೈಸೂರು: ‘ಕೇಂದ್ರ ಸರ್ಕಾರದಿಂದ ಮೈಸೂರು ಜಿಲ್ಲೆಗೆ ದೊರೆತಿರುವ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣ ಕಾರ್ಯವನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕು’ ಎಂದು ಸಂಸದ ಪ್ರತಾಪಸಿಂಹ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿ, ‘ಆರು ತಾಲ್ಲೂಕು ಕೇಂದ್ರಗಳಲ್ಲಿ ಘಟಕ ನಿರ್ಮಾಣ ಕಾರ್ಯವನ್ನು ಚುರುಕು
ಗೊಳಿಸಿ. ಕೋವಿಡ್ ಮೂರನೇ ಅಲೆ ಬರುವ ಸಾಧ್ಯತೆಯಿದ್ದು, ಎಲ್ಲ ಸಿದ್ಧತೆ ಮಾಡಬೇಕು. ಆಯಾ ತಾಲ್ಲೂಕಿಗೆ ಅಗತ್ಯವಿರುವ ಆಮ್ಲಜನಕ ಅಲ್ಲೇ ಉತ್ಪಾದನೆ ಆಗಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್, ‘ಕೆ.ಆರ್‌.ನಗರ, ನಂಜನಗೂಡು ಮತ್ತು ಹುಣಸೂರಿನಲ್ಲಿ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಕಾಮಗಾರಿಯೂ ಆರಂಭವಾಗಿದೆ. ಇತರ ಕಡೆಗಳಲ್ಲಿ ಶೀಘ್ರದಲ್ಲೇ ಕೆಲಸ ಆರಂಭಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾತನಾಡಿ, ಘಟಕ ನಿರ್ಮಾಣ ಕೆಲಸ ಇದುವರೆಗೆ ಎಷ್ಟು ತಾಲ್ಲೂಕುಗಳಲ್ಲಿ ಆರಂಭವಾಗಿದೆ, ಕಾಮಗಾರಿ ಯಾವ ಹಂತದಲ್ಲಿದೆ, ಇನ್ನೆಷ್ಟು ತಾಲ್ಲೂಕುಗಳಲ್ಲಿ ಆರಂಭವಾಗಬೇಕು ಎಂಬ ಬಗ್ಗೆ ವರದಿ ಸಲ್ಲಿಸಿ’ ಎಂದು ಸೂಚಿಸಿದರು.

ಕೋವಿಡ್‌ ಸಾವಿನ ಲೆಕ್ಕ ಸರಿಪಡಿಸಿ: ’ಜಿಲ್ಲೆಯಲ್ಲಿ ಕೋವಿಡ್‌ ಸಾವಿನ ಲೆಕ್ಕ ಸರಿಯಾಗಿ ನಮೂದಾಗಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸತ್ತವರ ಸಂಖ್ಯೆ ಸರಿಯಾಗಿ ಸಿಗಬೇಕು. ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿ ಬಿಪಿಎಲ್‌ ಕುಟುಂಬದವರಾಗಿದ್ದರೆ, ಅವರ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಬಿಟ್ಟುಹೋಗಿರುವ ಸಾವಿನ ಲೆಕ್ಕ ಸೇರಿಸಿದರೆ ಎಲ್ಲರಿಗೂ ಪರಿಹಾರ ಸಿಗಲು ಸಾಧ್ಯ’ ಎಂದು ಪ್ರತಾಪ ಸಿಂಹ ಹೇಳಿದರು.

‘ಮೇ ತಿಂಗಳಲ್ಲಿ ಮೈಸೂರು ನಗರವೊಂದರಲ್ಲೇ 1,003 ಕೋವಿಡ್ ಸಾವು ಸಂಭವಿಸಿದೆ. ಆದರೆ ಜಿಲ್ಲಾಡಳಿತ ಕೇವಲ 248 ಸಾವುಗಳನ್ನು ತೋರಿಸಿದೆ. 700 ಕ್ಕೂ ಹೆಚ್ಚು ಸಾವುಗಳನ್ನು ಮುಚ್ಚಿಡಲಾಗಿದೆ. ಸಾವು ಎನ್ನುವುದೇ ಅನ್ಯಾಯ, ಸತ್ತ ಮೇಲೂ ಅನ್ಯಾಯ ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದರು.

ಕನ್ನಡ ಹೆಸರು ಇರಲಿ: ’ಎಚ್‌.ಡಿ.ಕೋಟೆ, ಹುಣಸೂರು ಭಾಗದಲ್ಲಿ ಹಲವು ಹೋಟೆಲ್‌ಗಳ ಹೆಸರನ್ನು ಮಲ
ಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲಾಗಿದೆ. ಮಲಯಾಳದ ಬದಲು ಕನ್ನಡ ಭಾಷೆ ಬಳಸುವಂತೆ ಸೂಚಿಸಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಎರಡೂ ಕಡೆ ಎಲ್ಲೆಂದರಲ್ಲಿ ಹೋಟೆಲ್‌ಗಳು ತಲೆ ಎತ್ತುತ್ತಿವೆ. ಅದಕ್ಕೆ ಅವಕಾಶ ನೀಡಬೇಡಿ. ಇಂತಿಷ್ಟು ದೂರದಲ್ಲಿ ಫುಡ್‌ಕೋರ್ಟ್‌ಗಾಗಿ ಪ್ರತ್ಯೇಕ ಜಾಗ ನಿಗದಿಪಡಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎಂ.ಯೋಗೀಶ್, ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್‌ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ.ಪ್ರಶಾಂತ್‌ ಕುಮಾರ್‌ ಪಾಲ್ಗೊಂಡಿದ್ದರು.

‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ಸಲಹಾ ಸಮಿತಿ ನೇಮಿಸಿ’: ’ಕೆಆರ್‌ಎಸ್‌ ರಸ್ತೆಯಲ್ಲಿರುವ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಟ್ರಾಮಾ ಕೇರ್‌ ಸೆಂಟರ್‌ ಮೇಲುಸ್ತುವಾರಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರನ್ನು ಸೇರಿಸಿಕೊಂಡು ಪ್ರತ್ಯೇಕ ಟಾಸ್ಕ್‌ಫೋರ್ಸ್‌ ಅಥವಾ ಸಲಹಾ ಸಮಿತಿ ನೇಮಿಸಲು ಜಿಲ್ಲಾಧಿಕಾರಿ ಸಭೆ ನಡೆಸಬೇಕು’ ಎಂದು ಪ್ರತಾಪಸಿಂಹ ತಿಳಿಸಿದರು.

‘ಆಸ್ಪತ್ರೆ ಮತ್ತು ಟ್ರಾಮ ಕೇರ್‌ ಸೆಂಟರ್‌ಗೆ ಖಾಸಗಿ ಸಂಸ್ಥೆಗಳು ₹3 ಕೋಟಿ ವೆಚ್ಚದಲ್ಲಿ ಹಾಸಿಗೆ, ವೆಂಟಿಲೇಟರ್‌ ಸೌಲಭ್ಯಗಳನ್ನು ನೀಡಿವೆ. ಸದ್ಯ ಅಲ್ಲಿ ಬೆರಳೆಣಿಕೆಯಷ್ಟು ರೋಗಿಗಳಿದ್ದಾರೆ. ಎರಡೂ ಆಸ್ಪತ್ರೆಗಳು ಕೆ.ಆರ್‌.ಆಸ್ಪತ್ರೆಯ ಅಧೀನದಲ್ಲಿದ್ದು. ಅಲ್ಲಿನ ಅವ್ಯವಸ್ಥೆ ಎಲ್ಲರಿಗೂ ತಿಳಿದಿದೆ. ಈ ಆಸ್ಪತ್ರೆಗಳಿಗೂ ಅದೇ ಪರಿಸ್ಥಿತಿ ಒದಗಬಹುದು ಎಂಬ ಆತಂಕ ಇದೆ’ ಎಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಈ ಬಗ್ಗೆ ಚರ್ಚಿಸಲು ಮುಂದಿನ ವಾರ ಸಭೆ ನಡೆಸಲಾಗುವುದು’ ಎಂದು ಹೇಳಿದರು.‌

13.7 ಲಕ್ಷ ಡೋಸ್ ಲಸಿಕೆ ವಿತರಣೆ: ‘ಈಗಿನ ಅಂದಾಜಿನಂತೆ ಜಿಲ್ಲೆಯಲ್ಲಿ 34 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 24.75 ಲಕ್ಷ ಮಂದಿಯಿದ್ದು, ಅವರಿಗೆ ಲಸಿಕೆ ನೀಡುವ ಗುರಿಯಿದೆ. ಇದುವರೆಗೆ 13.7 ಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ’ ಎಂದು ಡಾ.ಬಗಾದಿ ಗೌತಮ್‌ ಮಾಹಿತಿ ನೀಡಿದರು.

45 ವರ್ಷಕ್ಕಿಂತ ಮೇಲಿನ ಶೇ 80 ರಷ್ಟು ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ 34 ಸಾವಿರ ಮಂದಿಗೆ ಲಸಿಕೆ ನೀಡಲಾಗಿದೆ. ಜುಲೈ ಕೊನೆಯವರೆಗೆ ಶೇ 100 ರಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ ಎಂದರು.

ಮಕ್ಕಳಿಗಾಗಿ 180 ಹಾಸಿಗೆ ಸೌಲಭ್ಯ: ‘ಕೋವಿಡ್‌ ಮೂರನೇ ಅಲೆ ಎದುರಿಸುವ ಸಂಬಂಧ ಈಗಾಗಲೇ ಸಭೆ ಆಗಿದೆ. ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲು ₹ 10.62 ಕೋಟಿ ಅಗತ್ಯವಿದೆ. 180 ಹಾಸಿಗೆ ಸಾಮರ್ಥ್ಯದ ಪ್ರತ್ಯೇಕ ಆಸ್ಪತ್ರೆ ಸಿದ್ಧಪಡಿ ಸಲು ಚಿಂತನೆ ನಡೆದಿದೆ. ಮೂರನೇ ಅಲೆಯು ಎರಡನೇ ಅಲೆಗಿಂತಲೂ ತೀವ್ರವಾಗಿದ್ದರೆ, 300 ಹಾಸಿಗೆಗಳು ಅಗತ್ಯವಾಗಬಹುದು’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT