ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪಚುನಾವಣೆ ಬಿಜೆಪಿಗೆ ಶಕ್ತಿ, ಕಾಂಗ್ರೆಸ್‌ಗೆ ಎಚ್ಚರಿಕೆ’

ರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಮತದಾರ ತಕ್ಕ ಪಾಠ
Last Updated 12 ನವೆಂಬರ್ 2020, 6:02 IST
ಅಕ್ಷರ ಗಾತ್ರ

ಹುಣಸೂರು: ‘ರಾಜ್ಯ ಉಪಚುನಾವಣೆ ಫಲಿತಾಂಶ ಬಿಜೆಪಿಗೆ ಶಕ್ತಿ ಹಾಗೂ ಕಾಂಗ್ರೆಸ್‌ಗೆ ಎಚ್ಚರಿಕೆ ಸಂದೇಶವನ್ನು ಮತದಾರ ರವಾನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಬುಧವಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ‘ಶಿರಾ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಲು ಮತದಾರ ಒಗ್ಗಟ್ಟಿನ ಪ್ರದರ್ಶನ ತೋರಿ ಮಾದರಿಯಾಗಿದ್ದಾರೆ’ ಎಂದರು.

‘ಬಿಹಾರ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಪೂರ್ವ ವಿಶ್ಲೇಷಣೆ ವಿರುದ್ಧವಾಗಿ ಮತದಾರ ಫಲಿತಾಂಶ ನೀಡಿದ್ದು ಎನ್.ಡಿ.ಎಗೆ ಭಾರಿ ಬಹುಮತ ಸಿಕ್ಕಿದೆ. ಚುನಾವಣಾ ಪೂರ್ವ ಮಾತಿನಂತೆ ಬಿಹಾರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದರೂ ಜೆಡಿಯು ಮುಖಂಡ ನಿತೀಶ್‌ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷ ಬದ್ಧವಾಗಿದೆ. ದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಮೋದಿ ಕಾರ್ಯವೈಖರಿಗೆ ಬಿಜೆಪಿ ಅಲೆ ಮತ್ತಷ್ಟು ಹೆಚ್ಚಾಗಿದೆ’ ಎಂದು ಹೇಳಿದರು.

‘ಬಿಹಾರ ಮತ್ತು ಉಪಚುನಾವಣೆ ಫಲಿತಾಂಶ ಮಹಾರಾಷ್ಟ್ರದಲ್ಲಿ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಆ ರಾಜ್ಯದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಪಡೆದ ಪಕ್ಷವಾಗಿದ್ದರೂ ಅಧಿಕಾರ ಹಿಡಿಯವ ಹಂತದಲ್ಲಿ ಶಿವಸೇನೆ ತೆಗೆದ ತಗಾದೆಯಿಂದ ಅಧಿಕಾರ ವಂಚಿತವಾಗಿದ್ದೇವೆ. ಈ ಎಲ್ಲ ನಾಟಕೀಯ ಬೆಳವಣಿಗೆಯನ್ನು ಮತದಾರ ಮೌನದಿಂದ ನೋಡುತ್ತಿದ್ದು ಭವಿಷ್ಯದಲ್ಲಿ ಉತ್ತರ ನೀಡಲಿದ್ದಾರೆ’ ಎಂದರು.

‘ರಾಷ್ಟ್ರದಲ್ಲಿ ಮೋದಿ ಅಲೆ ಈಗಲೂ ಇದೆ ಎನ್ನಲು ದೇಶದಲ್ಲಿ ನಡೆದ ಉಪಚುನಾವಣೆಗಳಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿರುವುದೇ ಜೀವಂತ ಉದಾಹರಣೆ. ಉಪಚುನಾವಣೆಗಳು ಆಡಳಿತ ಸರ್ಕಾರದ ಪರವಾಗಿ ಬರಲಿದೆ ಎಂಬ ಮಾತಿದ್ದರೂ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ, ಗುಜರಾತ್ ರಾಜ್ಯದಲ್ಲಿ ಎದುರಾದ ಫಲಿತಾಂಶ ಕಾಂಗ್ರೆಸ್ ಸ್ಥಿತಿಗತಿ ದೇಶಕ್ಕೆ ತಿಳಿದಿದೆ’ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.

ಬಿಎಸ್‌ವೈ ಗಟ್ಟಿ: ‘ಉಪಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ಕುರ್ಚಿ ಅಲುಗಾಡುವುದು ಎಂದು ಹೇಳುತ್ತಿದ್ದ ಮುಖಂಡರಿಗೆ ಮತದಾರ ತಕ್ಕ ಉತ್ತರ ನೀಡಿದ್ದಾರೆ. ಮುಖ್ಯಮಂತ್ರಿಗಳ ಬಗ್ಗೆ ನಾಲಿಗೆ ಹರಿಬಿಟ್ಟಿವರು ಈಗ ಮೌನವಾಗಬೇಕಾಗಿದೆ’ ಎಂದರು.

ಶಾಸಕ ಮಂಜುನಾಥ್ ಮಾತ ನಾಡಿ, ‘ರಾಜಕೀಯ ಇತಿಹಾಸ ಗಮನಿಸಿದರೆ ಈ ಹಿಂದೆ ಕಾಂಗ್ರೆಸ್ ರಾಷ್ಟ್ರದಾದ್ಯಂತ ಆವರಿಸಿತ್ತು, ಈಗ ಬಿಜೆಪಿ ಆವರಿಸಿಕೊಂಡಿದೆ ಮುಂದಿನ ದಿನದಲ್ಲಿ ನಮ್ಮದು ಮೇಲುಗೈ ಆಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT