ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಹೆಜ್ಜೆ ಇಡಲಾಗಲ್ಲ; ಬೈಕ್ ಓಡಿಸಲಾಗಲ್ಲ

ನಮ್ಮೂರ ಸಮಸ್ಯೆ ಪರಿಹರಿಸೋರೇ ಇಲ್ವಾ: ಘಟ್ಟವಾಡಿಪುರ ಗ್ರಾಮಸ್ಥರ ಅಳಲು
Last Updated 16 ಸೆಪ್ಟೆಂಬರ್ 2020, 2:46 IST
ಅಕ್ಷರ ಗಾತ್ರ

ಮೈಸೂರು: ಊರೊಳಗೆ ಸಿಮೆಂಟ್ ರಸ್ತೆ. ಆದರೆ ಊರಿಗೆ ಸಂಪರ್ಕ ಕಲ್ಪಿಸೋ ಮುಖ್ಯ ರಸ್ತೆ ಅಕ್ಷರಶಃ ಕೆಸರು ಗದ್ದೆ.

ಈ ರಸ್ತೆಯಲ್ಲಿ ಒಂದು ಹೆಜ್ಜೆ ಇಡೋದು ಕಷ್ಟಕರ. ಎಷ್ಟೇ ಹುಷಾರಾಗಿದ್ದರೂ; ಜಾರಿ ಬೀಳೋದು ತಪ್ಪಲ್ಲ. ಇನ್ನೂ ಬೈಕ್ ಸವಾರರ ಗೋಳು ಹೇಳತೀರದು. ಮುನ್ನೂರು ಮೀಟರ್ ಉದ್ದದ ಕೆಸರುಮಯ ರಸ್ತೆ ದಾಟೋದೇ ಹರ ಸಾಹಸದ ಕೆಲಸ.

‘ನಮ್ಮೂರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ನಾಲ್ಕು ಜನ ಹೆಣ ಹೊರುವ ಜಾಗದಲ್ಲಿ ಇಪ್ಪತ್ತು ಜನ ಹೊತ್ತೆವು. ಇಂಥಹ ದೈನೇಸಿ ಸ್ಥಿತಿ ಯಾವೂರಿನ ಜನರಿಗೂ ಬರಬಾರದು. ಇದು ಒಂದು ದಿನದ ಸಮಸ್ಯೆಯಲ್ಲ. ಎರಡು ವರ್ಷದಿಂದ ತಪ್ಪದ ಗೋಳಾಗಿದೆ’ ಎಂದು ನಂಜನಗೂಡು ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟ್ಟವಾಡಿಪುರದ ಪರಶಿವಮೂರ್ತಿ ‘ಪ್ರಜಾವಾಣಿ’ ಬಳಿ ತಮ್ಮೂರಿನ ಬಗೆಹರಿಯದ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಪರಶಿವಮೂರ್ತಿಯ ಆಕ್ರೋಶಕ್ಕೆ ಪಕ್ಕದಲ್ಲಿದ್ದ ಇತರರು ಧ್ವನಿಗೂಡಿಸಿದರು. ನಮ್ಮೂರಿನ ಸಮಸ್ಯೆ ಎಂದು ಬಗೆಹರಿಯುತ್ತೋ? ಎಂದು ಕಿಡಿಕಾರಿದರು.

‘ಹೆಣ್ಮಕ್ಕಳು ಹೊಲ–ಮನೆಗೆ ಹೋಗಿ ಬರಲಾಗುತ್ತಿಲ್ಲ. ದನ–ಕರುಗಳಿಗೆ ಹುಲ್ಲಿನ ಹೊರೆ ಹೊತ್ತು ತರಲಾಗುತ್ತಿಲ್ಲ. ನಮ್ಮೂರಿಗೆ ಬರೋರು ಹಿಂಜರಿಯುತ್ತಿದ್ದಾರೆ. ಸಂಬಂಧಿಕರು ನಿಮ್ಮ ಸಹವಾಸವೇ ಬೇಡ ಅನ್ತ್ವಾರೆ. ಅನಾರೋಗ್ಯಕ್ಕೀಡಾದರೆ ಆಸ್ಪತ್ರೆಗೆ ಹೋಗಿ–ಬರೋದು ಕಷ್ಟವಾಗಿದೆ. ದೇವಸ್ಥಾನಕ್ಕೆ ಹೋಗೋದು ಆಗ್ತಿಲ್ಲ...’ ಎಂದು ಹೇಳಿದರು.

‘ನಮ್ಮೂರಿನ ಸಮಸ್ಯೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಸದಸ್ಯ, ಸಿಬ್ಬಂದಿಯಿಂದ ಹಿಡಿದು ಸಂಸದ, ಜಿಲ್ಲಾಧಿಕಾರಿಯವರೆಗೂ ಮುಟ್ಟಿಸಿದ್ದೇವೆ. ಆದರೆ ಸ್ಪಂದನೆ ಎಂಬುದು ಮಾತ್ರ ಶೂನ್ಯವಾಗಿದೆ. ಯಾರೊಬ್ಬರು ನಮ್ಮೂರಿನತ್ತ ಚಿತ್ತ ಹರಿಸುತ್ತಿಲ್ಲ. ಇದರಿಂದ ನಮ್ಮ ಗೋಳು ತಪ್ಪುತ್ತಿಲ್ಲ’ ಎಂದು ಪರಶಿವಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಬಾರದ ಬಸ್; ತಪ್ಪದ ಗೋಳು

‘ಮುಕ್ಕಡಹಳ್ಳಿ, ಅರಳೀಕಟ್ಟೆ, ಕೆಬ್ಬೆಪುರ, ಕೀರಳಿಪುರ, ಹೆಳವರಹುಂಡಿ, ಅರುಗಣಪುರ ಗ್ರಾಮಸ್ಥರು ವಿವಿಧ ಕೆಲಸದ ನಿಮಿತ್ತ ಹೋಬಳಿ ಕೇಂದ್ರವಾದ ದೊಡ್ಡಕವಲಂದೆಗೆ ಹೋಗಬೇಕು ಎಂದರೇ ಈ ರಸ್ತೆಯಲ್ಲೇ ಸಂಚರಿಸಬೇಕು. ದೊಡ್ಡಕವಲಂದೆಯಿಂದ ಘಟ್ಟವಾಡಿಯವರೆಗೆ ಡಾಂಬರ್ ರಸ್ತೆಯಿದೆ. ಘಟ್ಟವಾಡಿಯಿಂದ ಘಟ್ಟವಾಡಿಪುರದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ತಗ್ಗು–ದಿನ್ನೆಯಿಂದ ಕೂಡಿದೆ’ ಎನ್ನುತ್ತಾರೆ ಸ್ಥಳೀಯರಾದ ಬಾಲು ಎಸ್.ರಂಗಸ್ವಾಮಿ.

‘ಘಟ್ಟವಾಡಿಪುರ–ಮುಕ್ಕಡಹಳ್ಳಿ ರಸ್ತೆ ಸ್ವಾತಂತ್ರ್ಯ ಪೂರ್ವದಿಂದಲೂ ಅಭಿವೃದ್ಧಿಗೊಂಡಿಲ್ಲ. ಘಟ್ಟವಾಡಿಪುರ–ಅರಳೀಕಟ್ಟೆ ಸಂಪರ್ಕಿಸುವ ರಸ್ತೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ಭಾಗದ ಜನರಿಗೆ ರಸ್ತೆ ಸಮಸ್ಯೆಯೇ ಕಂಟಕವಾಗಿ ಕಾಡುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಆಟೊಗಳು ಓಡಾಡಲ್ಲ. ಅನುಕೂಲಸ್ಥರು ಹರಸಾಹಸ ನಡೆಸಿ, ಬೇರೆ ಊರಿಗೆ ಹೋಗಿ ಬರುತ್ತಿದ್ದಾರೆ. ಸ್ವಂತ ವಾಹನವಿಲ್ಲದವರ ಗೋಳು ಹೇಳತೀರದಾಗಿದೆ’ ಎಂದು ರಂಗಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT