ಗುರುವಾರ , ನವೆಂಬರ್ 21, 2019
20 °C
ಜನರ ಖರೀದಿಸುವ ಶಕ್ತಿ ಹೆಚ್ಚಿಸಲು ಆಗ್ರಹ

ಕೇಂದ್ರದ ವಿರುದ್ಧ ಹರಿಹಾಯ್ದ ಎಡಪಕ್ಷಗಳು

Published:
Updated:
Prajavani

ಮೈಸೂರು: ದೇಶದ ಅರ್ಥ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿರುವುದಕ್ಕೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳೇ ಕಾರಣ ಎಂದು ಆರೋಪಿಸಿ ಸಿಪಿಐ, ಸಿಪಿಐ(ಎಂ), ಸಿಪಿಐ(ಎಂಎಲ್) ಲಿಬರೇಷನ್ ಪಕ್ಷಗಳ ಕಾರ್ಯಕರ್ತರು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಯುದ್ದದ ಉನ್ಮಾದವನ್ನು ಒಂದೆಡೆ ಬಿತ್ತುವ ಸರ್ಕಾರ ಮತ್ತೊಂದೆಡೆ ಅಭಿವೃದ್ಧಿಯ ಭ್ರಮಾತ್ಮಕ ಲೋಕ ಸೃಷ್ಟಿಸಿದೆ. ಇದರಿಂದ ಸಾಮಾನ್ಯ ಜನರ ಮನಸ್ಸಿಗೆ ಆರ್ಥಿಕ ಹಿಂಜರಿತ ಅರ್ಥವಾಗಿಲ್ಲ. ದೇಶದ ಆರ್ಥಿಕತೆಯನ್ನು ರಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ಎಡವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕ ಪ್ರಗತಿ ಶೇ 5ಕ್ಕೆ, ಕೃಷಿ ಕ್ಷೇತ್ರ ಪ್ರಗತಿ ಶೇ 2, ಉತ್ಪಾದನಾ ಕ್ಷೇತ್ರದ ಪ್ರಗತಿ ಶೇ 0.6ಕ್ಕೆ ಕುಸಿದಿದೆ. ಕಾರ್ಖಾನೆಗಳು ಮುಚ್ಚಿ 10 ಲಕ್ಷ ಉದ್ಯೋಗ ನಷ್ಟವಾಗಿದೆ ಎಂದು ಅವರ ಕಿಡಿಕಾರಿದರು.

ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ನೆರವು ನೀಡುತ್ತದೆ. ಆದರೆ, ಕೃಷಿ ಕಾರ್ಮಿಕರು, ಸಣ್ಣ ಹಿಡುವಳಿದಾರರು, ಮಧ್ಯಮವರ್ಗದವರು ಹಾಗೂ ಸಣ್ಣ ವ್ಯಾ‍‍ಪಾರಿಗಳ ಕಡೆಗೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಜನರ ಖರೀದಿಸುವ ಶಕ್ತಿ ಕಡಿಮೆಯಾಗಿರುವುದೇ ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣವಾಗಿದೆ. ಇದಕ್ಕೆ ನಿರುದ್ಯೋಗ ಪ್ರಮಾಣ ಶೇ 5ರಷ್ಟು ಏರಿಕೆಯಾಗಿರುವುದು ಕಾರಣ. ಮೊದಲು ಸರ್ಕಾರ ಜನರ ಖರೀದಿಸುವ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ನಿರುದ್ಯೋಗ ಭತ್ಯೆ ನೀಡಬೇಕು, ಕನಿಷ್ಠ ₹ 18 ಸಾವಿರ ವೇತನ ನೀಡಬೇಕು. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮಾಸಿಕ ಜೀವನ ನಿರ್ವಹಣೆ ವೇತನ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಎಂ-ನರೇಗಾ ಯೋಜನೆಯಡಿ 200 ದಿನಗಳ ಕೆಲಸ ನೀಡಬೇಕು. ಆಗ ತಾನೇ ತಾನಾಗಿ ಜನರ ಖರೀದಿಸುವ ಶಕ್ತಿ ಹೆಚ್ಚುತ್ತದೆ. ಉತ್ಪಾದನಾ ಚಟುವಟಿಕೆ ಗರಿಗೆದರುತ್ತದೆ. ಆರ್ಥಿಕತೆ ಹಳಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿಪಿಐ (ಎಂ)ನ ಕೆ.ಬಸವರಾಜ್, ಸಿಪಿಐನ ಎಚ್.ಆರ್.ಶೇಷಾದ್ರಿ, ಸಿಪಿಐ (ಎಂಎಲ್) ಲಿಬರೇಷನ್‌ನ ಚೌಡಳ್ಳಿ ಜವರಯ್ಯ ಸೇರಿ ಇನ್ನಿತರರು ಪ್ರತಿಭಟನೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)