ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣದಲ್ಲಿ ಸೆಸ್ಕ್ ಸಿಬ್ಬಂದಿ ಪ್ರತಿಭಟನೆ

ವಿದ್ಯುತ್ ಪ್ರಸರಣ ವ್ಯವಸ್ಥೆ ಖಾಸಗೀಕರಣಕ್ಕೆ ವಿರೋಧ
Last Updated 6 ಅಕ್ಟೋಬರ್ 2020, 1:36 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಸೆಸ್ಕ್‌ನ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಸೋಮವಾರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕಚೇರಿ ಮುಂಭಾಗ ಜಮಾವಣೆಗೊಂಡ ಅಧಿಕಾರಿಗಳು ಮತ್ತು ನೌಕರರು ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೆಸ್ಕ್ ಸಿಬ್ಬಂದಿ ಹಾಗೂ ಇಲಾಖಾ ನೌಕರರ ಸಂಘಟನೆಯ ಮುಖಂಡ ಜಗದೀಶ್ ಮಾತನಾಡಿ, ಹಲವು ವರ್ಷಗಳ ಇತಿಹಾಸ ಇರುವ ವಿದ್ಯುತ್ ನಿಗಮವನ್ನು ಏಕಾಏಕಿ ಖಾಸಗೀಕರಣಗೊಳಿಸಿ ನೌಕರರ ಹಾಗೂ ಅಧಿಕಾರಿಗಳ ಬದುಕನ್ನು ಕಿತ್ತುಕೊಳ್ಳಲು ಮುಂದಾಗಿರುವ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಲ್ಲದೆ ಈ ಕಾಯ್ದೆಯಿಂದಾಗಿ ಗ್ರಾಹಕರು, ಬಡಜನರು, ರೈತರು ಹಾಗೂ ಸಾರ್ವಜನಿಕರಿಗೆ ಅನಾನುಕೂಲವಾಗಲಿದ್ದು ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪದೆ ಕೇವಲ ಉಳ್ಳವರ ಪಾಲಾಗುತ್ತದೆ ಎಂದು ಆರೋಪಿಸಿದರು.

‘ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನಿಲುಗಡೆಯಾಗಲಿದೆ. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆ ಸ್ಥಗಿತಗೊಳ್ಳಲಿದೆ. ಸಣ್ಣ ಕೈಗಾರಿಕೆ ಮತ್ತು ಗುಡಿ ಕೈಗಾರಿಕೆಗಳಿಗೆ ಮಾರಕವಾಗಲಿದೆ, ಜನ ಸಾಮಾನ್ಯರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ ಎಂದರು.

ಸಾರ್ವಜನಿಕ ಸೇವೆಯು ಬಂಡವಾಳಶಾಹಿಗಳ ಅಧೀನಕ್ಕೆ ಒಳಪಟ್ಟು ಸ್ವಯಂ ಘೋಷಿತ ಕಾನೂನುಗಳಿಗೆ ಒಳಪಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗೀಕರಣದಿಂದ ಲಕ್ಷಾಂತರ ಕಾರ್ಮಿಕರ ಬದುಕು ಬೀದಿ ಪಾಲಾಗುತ್ತಿದ್ದು ಕೂಡಲೇ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದರು.

ಇಂದು ರಾಜ್ಯದಾದ್ಯಂತ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಳ್ಳಲಾಗಿದ್ದು ಸರ್ಕಾರ ಕೂಡಲೇ ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯು ಉಗ್ರರೂಪ ತಾಳಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಎಂಜಿನಿಯರ್ ಶಶಿಕುಮಾರ್, ಸಿಬ್ಬಂದಿ ಸ್ವಾಮಿ, ಲೋಕೇಶ್, ಕವಿತಾ, ಖಾಸಿಂ, ಕೃಷ್ಣ, ಸದ್ದಾಂ, ಮೂರ್ತಿ, ಮಂಜುನಾಥ್, ಪ್ರಭಾಕರ್, ನಾಗರಾಜ್, ಬ್ರಹ್ಮ, ಧರಣೀಶ್, ಸುನಿಲ್, ಶಿವಾನಂದ, ಮಧುಸೂದನ್, ಹನುಮಂತ ರವಿ, ಮೆಹಬೂಬ್ ಹಾಗೂ ಇಲಾಖೆ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT