ಭಾನುವಾರ, ಆಗಸ್ಟ್ 14, 2022
23 °C
ಚಾಮುಂಡಿಪುರಂನಲ್ಲಿ ಎರಡು ಬಾರಿ ಯತ್ನಿಸಿದ ಸರಗಳ್ಳ

ಮೈಸೂರು ನಗರದಲ್ಲಿ ಮುಂದುವರಿದ ಸರಗಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಗಾಯತ್ರಿಪುರಂನ ಪಿ.ಎಫ್ ಕಚೇರಿ ರಸ್ತೆಯಲ್ಲಿ ಸಾಯಿಬಾಬಾ ದೇಗುಲಕ್ಕೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ಶಾಂತಮ್ಮ (58) ಎಂಬುವರ ಕುತ್ತಿಗೆಯಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಶಾಂತಮ್ಮ ಅವರು ಒಬ್ಬರೇ ರಾತ್ರಿ 8.15ರಲ್ಲಿ ನಡೆದುಕೊಂಡು ಹೋಗುವಾಗ ಬೈಕ್‌ನ ಹಿಂಬದಿಯಲ್ಲಿ ಮಾಸ್ಕ್‌ ಧರಿಸಿ ಕೂತಿದ್ದ ವ್ಯಕ್ತಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಗಟ್ಟಿಯಾಗಿ ಸರ ಹಿಡಿದುಕೊಂಡಿದ್ದರಿಂದ ತಾಳಿ ಮತ್ತು 2 ಗುಂಡುಗಳು ಶಾಂತಮ್ಮ ಅವರ ಕೈಯಲ್ಲಿ ಉಳಿದುಕೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಉದಯಗಿರಿ ಠಾಣೆಯಲ್ಲಿ ದಾಖಲಾಗಿದೆ.

ಸರಗಳವಿಗೆ 2 ಬಾರಿ ಯತ್ನಿಸಿದ ಕಳ್ಳ!

ಇಲ್ಲಿನ ಚಾಮುಂಡಿಪುರಂನ 2ನೇ ಮೇನ್‌ನಲ್ಲಿ ಗುರುವಾರ ಸಂಜೆ 4.30ರ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರಿಂದ ಎದುರಿನಿಂದ ಕಪ್ಪುಬಣ್ಣದ ಟೀ ಶರ್ಟ್ ಧರಿಸಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಮಹಿಳೆಯು ಪ್ರತಿರೋಧ ಒಡ್ಡಿದ್ದರಿಂದ ಕಳ್ಳ ಹೊರಟಿದ್ದಾನೆ. ಆದರೆ, ಸ್ವಲ್ಪ ಹೊತ್ತಿನ ನಂತರ ಮರಳಿ ಹಿಂದಿನಿಂದ ಬಂದ ಕಳ್ಳ ಮತ್ತೊಮ್ಮೆ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆಯೂ ಮಹಿಳೆ ಜೋರಾಗಿ ಕೂಗಿಕೊಂಡಿದ್ದರಿಂದ ಕಳ್ಳ ಬರಿಗೈಲಿ ವಾಪಸ್ ಹೋಗಿದ್ದಾನೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

‌ಬಾಲ್ಕನಿಯ ಬಾಗಿಲು ಮುರಿದು ಕಳ್ಳತನ

ಮೈಸೂರು: ಇಲ್ಲಿನ ವಿಜಯನಗರ 1ನೇ ಹಂತದ 5ನೇ ಮೇನ್‌ನಲ್ಲಿನ ಕವಿತಾ ಎಂಬುವರ ನಿವಾಸದ ಬಾಲ್ಕನಿ ಬಾಗಿಲನ್ನು ಮುರಿದ ಕಳ್ಳರು, ಮನೆಯಲ್ಲಿಟ್ಟಿದ್ದ ರಿವಾಲ್ವರ್ ಹಾಗೂ ₹34 ಸಾವಿರ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಇವರು ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ಸಂತೇಪೇಟೆ ಅಂಗಡಿಯಲ್ಲಿ ಕಳ್ಳತನ

ಮೈಸೂರು: ಇಲ್ಲಿನ ಹಳೇ ಸಂತೇಪೇಟೆಯ ಮಧು ಏಜೆನ್ಸಿಯ ಬಾಗಿಲಿನ ಬೀಗ ಮುರಿದ ಕಳ್ಳರು ಡ್ರಾಯರ್‌ನಲ್ಲಿಟ್ಟಿದ್ದ ₹15 ಸಾವಿರ ನಗದನ್ನು ಕಳವು ಮಾಡಿದ್ದಾರೆ. ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು