ಸಮಾಜವು ದಲಿತರನ್ನು ರೌರವ ನರಕದಲ್ಲಿಟ್ಟಿದೆ: ಸಂಸದ ವಿ. ಶ್ರೀನಿವಾಸ ಪ್ರಸಾದ್

ಮೈಸೂರು: ‘ದಲಿತರು, ಅಸ್ಪೃಶ್ಯರನ್ನು ಸಮಾಜವು ಇನ್ನೂ ರೌರವ ನರಕದಲ್ಲಿಟ್ಟಿದೆ. ಸಾಮಾಜಿಕ ಸಾಮರಸ್ಯದ ಕೊರತೆಯಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ. ದೇಶದಲ್ಲಿ ವಿಪುಲ ಸಂಪನ್ಮೂಲಗಳಿದ್ದರೂ ಬಡತನ, ಹಸಿವು, ಜಾತಿಯತೆ ಹಾಗೂ ಅನಕ್ಷರತೆ ತೊಡೆಯಲು ಇನ್ನೂ ಆಗಿಲ್ಲ’ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಮರಸ್ಯ ವೇದಿಕೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ಕುದ್ಮುಲ್ ರಂಗರಾವ್ ಅವರ 163ನೇ ಜನ್ಮದಿನಾರಣೆಯಲ್ಲಿ ಅವರು ಮಾತನಾಡಿದರು.
ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು: ಸಂಸದ ಡಿ.ಕೆ. ಸುರೇಶ್
‘ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲೂ ಈ ಪ್ರಮಾಣದಲ್ಲಿಲ್ಲ. ಶತಮಾನಗಳಿಂದ ಜಾತಿ ಪದ್ಧತಿ, ಅಸ್ಪೃಶ್ಯತೆ ಹೆಸರಿನಲ್ಲಿ ಸಾಮರಸ್ಯದ ಕೊರತೆಯು ಬಳುವಳಿಯಾಗಿ ಮುಂದುವರಿದಿದೆ. ಸಂವಿಧಾನ ಜಾರಿಯಾಗಿ 72 ವರ್ಷ ಕಳೆದರೂ ಪಿಡುಗುಗಳು ಅಳಿದಿಲ್ಲ. ದೇವರ ಹೆಸರಿನಲ್ಲಿ ಶೋಷಣೆ ಮುಂದುವರಿದಿದೆ’ ಎಂದರು.
‘ಗ್ರಾಮೀಣ ಪ್ರದೇಶಗಳ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ದಲಿತರಿಗೆ ಇಂದಿಗೂ ಪ್ರವೇಶ ಸಿಕ್ಕಿಲ್ಲ. ಅಂತರ್ಜಾತಿ ವಿವಾಹಗಳು ನಡೆದರೆ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಜಾತೀಯತೆ ಹೆಚ್ಚಾಗುತ್ತಿರುವಂತೆಯೇ ಅಸ್ಮೃಶ್ಯತೆಯು ಜೀವಂತವಾಗುತ್ತದೆ. ಬಡತನವನ್ನು ಸಹಿಸಿಕೊಳ್ಳಬಹುದೇ ಹೊರತು ಅಸ್ಮೃಶ್ಯತೆಯನ್ನಲ್ಲ’ ಎಂದು ಹೇಳಿದರು.
‘ದಲಿತರನ್ನು ಶೂದ್ರರಿಗಿಂತಲೂ ಕಡೆಯಾಗಿ ಸಮಾಜವು ಇನ್ನೂ ನೋಡುತ್ತಿದೆ. ವ್ಯಕ್ತಿ ಗೌರವವನ್ನು ನೀಡದೆ ಪ್ರಾಣಿಗಳಿಂತಲೂ ಹೀನಾಯವಾಗಿ ನಡೆಸಿಕೊಳ್ಳುವುದು ಮುಂದುವರಿದಿದೆ. ಪಂಚಮರೆಂದು ವರ್ಣಗಳಿಂದಲೂ ಆಚೆಯಿಟ್ಟಿದೆ’ ಎಂದರು.
ಟೈಲರ್ ಹತ್ಯೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ: ದಿನೇಶ್ ಗುಂಡೂರಾವ್ ಕಿಡಿ
‘ಯಾವುದೇ ವೃತ್ತಿಯಲ್ಲಿದ್ದರೂ ಮಾನವೀಯತೆ ಗುಣಗಳಿರಬೇಕು. ಆಗ ಮಾತ್ರ ಸಾಮಾಜಿಕ ಸಾಮರಸ್ಯದ ಬಗ್ಗೆ ಚಿಂತನೆ ಮಾಡಲು ಸಾಧ್ಯ. ಮಾನವೀಯತೆಯೇ ಇಲ್ಲದ ಸಮಾಜವನ್ನು ಸುಧಾರಿಸಲು ಕುದ್ಮಲ್ ರಂಗರಾಯರು ಶ್ರಮಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವವರು ರಂಗರಾವ್ ಅವರ ಪಾಠವನ್ನು ಪಠ್ಯಕ್ರಮಕ್ಕೆ ಸೇರಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.