ಮಂಗಳವಾರ, ಆಗಸ್ಟ್ 3, 2021
22 °C
ಚಾಮುಂಡಿ ಬೆಟ್ಟದಲ್ಲಷ್ಟೇ ಸಾಂಪ್ರದಾಯಿಕ ಆಚರಣೆ; ಭಕ್ತರಿಗಿಲ್ಲ ದರ್ಶನ

ಜುಲೈ 13ಕ್ಕೆ ಚಾಮುಂಡೇಶ್ವರಿ ವರ್ಧಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ(ಜನ್ಮದಿನ) ಮಹೋತ್ಸವ ಸೋಮವಾರ (ಜುಲೈ 13) ನಡೆಯಲಿದೆ.

ಅಧಿದೇವತೆ ಚಾಮುಂಡೇಶ್ವರಿಯ ವರ್ಧಂತಿ ಪ್ರತಿ ವರ್ಷವೂ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಭಕ್ತರ ಗೈರಿನಲ್ಲಿ ಸರಳವಾಗಿ, ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ನಡೆಯಲಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ವರ್ಧಂತಿ ಅಂಗವಾಗಿ ಚಾಮುಂಡಿ ಬೆಟ್ಟದ ದೇಗುಲದಲ್ಲಿ ಸೋಮವಾರ ನಸುಕಿನ 4.30ರಿಂದ ವಿವಿಧ ಪೂಜಾ ಕೈಂಕರ್ಯ ಆರಂಭವಾಗಲಿವೆ. ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ನೆರವೇರಿದ ಬಳಿಕ, ದೇವಸ್ಥಾನದ ಒಳಾಂಗಣದಲ್ಲೇ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.

’ಅಮ್ಮನವರ ವರ್ಧಂತಿ ಮಹೋತ್ಸವದಲ್ಲಿ ಸಂಪ್ರದಾಯದಂತೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭಾಗವಹಿಸುವ ಸಾಧ್ಯತೆಯಿದೆ‘ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.

ಪ್ರವೇಶ ನಿಷೇಧ: ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವದಲ್ಲಿ ಪ್ರತಿ ವರ್ಷವೂ ಹಲವು ಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಿದ್ದರು. ಹೆಚ್ಚಿನ ಜನ ಸೇರಬಾರದು ಎಂದು ಈ ಹಿಂದೆಯೇ ಜಿಲ್ಲಾಡಳಿತ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.

ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ದೇಗುಲ, ರಸ್ತೆ ಬದಿ ಅದ್ಧೂರಿಯಿಂದ ಚಾಮುಂಡೇಶ್ವರಿಯ ವರ್ಧಂತಿ ಈ ಹಿಂದಿನ ವರ್ಷಗಳಲ್ಲಿ ನಡೆದಿತ್ತು. ಆದರೆ ಈ ಬಾರಿ ಕೋವಿಡ್–19 ಸೋಂಕು ಹರಡುತ್ತಿದ್ದು, ಎಲ್ಲಿಯೂ ವರ್ಧಂತಿಯ ಆಚರಣೆಯ ಸಿದ್ಧತೆಗಳು ಭಾನುವಾರ ಕಂಡು ಬರಲಿಲ್ಲ.

ಆಷಾಢ ಮಾಸದ ಮೂರನೇ ಶುಕ್ರವಾರದಿಂದಲೂ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದ್ದು, ಮಂಗಳವಾರದವರೆಗೂ ಮುಂದುವರೆಯಲಿದೆ ಎಂದು ಆಡಳಿತಾಧಿಕಾರಿ ಯತಿರಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು