ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿರಸದಲ್ಲಿ ಮಿಂದೆದ್ದ ಚಾಮುಂಡಿಬೆಟ್ಟ

2ನೇ ಆಷಾಢ ಶುಕ್ರವಾರ; ಕಿಕ್ಕಿರಿದು ಸೇರಿದ್ದ ಭಕ್ತಸಮೂಹ
Last Updated 12 ಜುಲೈ 2019, 20:14 IST
ಅಕ್ಷರ ಗಾತ್ರ

ಮೈಸೂರು: ಎಲ್ಲಿ ನೋಡಿದರಲ್ಲಿ ಭಕ್ತರು, ಮೆಟ್ಟಿಲುಗಳ ಮೇಲೂ ಸರತಿಸಾಲುಗಳು, ಪ್ರತಿ ಮೆಟ್ಟಿಲಿಗೂ ಅರಿಸಿನ ಕುಂಕುಮ ಹಚ್ಚಿ ಕೈ ಮುಗಿವ ಹೆಂಗಳೆಯರು...

ಈ ಎಲ್ಲ ದೃಶ್ಯಗಳು ಇಲ್ಲಿನ ಚಾಮುಂಡಿಬೆಟ್ಟದಲ್ಲಿ 2ನೇ ಆಷಾಢ ಶುಕ್ರವಾರದಲ್ಲಿ ಕಂಡು ಬಂತು. ಇಡೀ ಬೆಟ್ಟವೇ ಭಕ್ತಿರಸದಲ್ಲಿ ಮಿಂದೆದ್ದಂತೆ ಕಂಡಿತು.

ಮೊದಲ ಆಷಾಢ ಶುಕ್ರವಾರಕ್ಕಿಂತ ಈ ಬಾರಿ ಜನಸಂದಣಿ ಅಧಿಕವಾಗಿತ್ತು. ಬರುವ, ಹೋಗುವ ಎಲ್ಲ ಬಸ್‌ಗಳೂ ಒಂದೆಡೆ ಕ್ಕಿಕ್ಕಿರಿದಿದ್ದರೆ, ಮತ್ತೊಂದೆಡೆ ಮೆಟ್ಟಿಲುಗಳ ಮೇಲೆ ಬೆಟ್ಟ ಹತ್ತಲೂ ಸರತಿಸಾಲುಗಳು ಕಂಡು ಬಂದವು. ಒಬ್ಬರ ಹಿಂದೆ ಮತ್ತೊಬ್ಬರಂತೆ ಭಕ್ತರು ಬೆಟ್ಟ ಹತ್ತಿ ಬಸವಳಿದರು.

ಕಳೆದ ವಾರದಂತೆ ಈ ವಾರ ತುಂತುರು ಮಳೆಯ ಸಿಂಚನ ಇಲ್ಲವಾಗಿತ್ತು. ಮೋಡಗಳೂ ದಟ್ಟೈಸಲಿಲ್ಲ. ಹೀಗಾಗಿ, ಬಿಸಿಲಿನ ತಾಪ ತುಸು ಹೆಚ್ಚೇ ಇತ್ತು. ಭಕ್ತರಂತೂ ಅಕ್ಷರಶಃ ಸುಸ್ತಾದರು.

ಎಷ್ಟೆಲ್ಲ ಆಯಾಸವಾದರೂ ದೇಗುಲದಲ್ಲಿ ‘ನಾಗಲಕ್ಷ್ಮಿ’ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡಿತಾಯಿಯ ವಿಗ್ರಹ ಕಂಡು ತಮ್ಮೆಲ್ಲ ಬಳಲಿಕೆಗಳನ್ನು ಕ್ಷಣಮಾತ್ರದಲ್ಲಿ ಮರೆತರು. ನೀಡುತ್ತಿದ್ದ ಪ್ರಸಾದ ಸೇವಿಸಿ, ಧನ್ಯರಾದೆವೆಂದು ಕೈ ಮುಗಿದರು.

ಈ ವಾರ ‘ವಿಐಪಿ’ಗಳ (ಗಣ್ಯವ್ಯಕ್ತಿಗಳ) ಕಿರಿಕಿರಿ ಅಧಿಕವಾಗಿತ್ತು. ಇವರಿಗೆಂದೇ ವಿಶೇಷ ಪ್ರವೇಶಾವಕಾಶವನ್ನೂ ನೀಡಲಾಗಿತ್ತು. ಧರ್ಮ ದರುಶನ, ₹ 30 ಹಾಗೂ ₹ 300 ರೂಪಾಯಿ ಟಿಕೆಟ್ ಪಡೆದವರು ಇದರಿಂದ ಹೈರಣಾದರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸುಮಾರು 20 ನಿಮಿಷಗಳ ಕಾಲ ದೇವಾಲಯದಲ್ಲಿ ಕಾಲ ಕಳೆದಿದ್ದರಿಂದ ಭಕ್ತರು ಸರಿಯಾಗಿ ದರ್ಶನ ಮಾಡದೇ ನಿರಾಶರಾದರು.

ಕುಡಿಯುವ ನೀರಿನ ವ್ಯವಸ್ಥೆ, ಪ್ರಸಾದ ವಿತರಣೆ ಅಚ್ಚುಕಟ್ಟುತನದಿಂದ ಕೂಡಿತ್ತು. ಹೆಲಿಪ್ಯಾಡ್‌ವರೆಗೆ ಮಾತ್ರ ಖಾಸಗಿ ವಾಹನಗಳಿಗೆ ಪ್ರವೇಶ ನೀಡಲಾಗಿತ್ತು. ಅಲ್ಲಿಂದ ಉಚಿತ ಸಾರಿಗೆ ಬಸ್‌ಗಳು ಇದ್ದವು. ಬಸ್‌ ಹತ್ತಲೂ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT