ದಸರಾ ಕವಿಗೋಷ್ಠಿ: ಸಾಮಾಜಿಕ ಸಮಸ್ಯೆಗೆ ಒರೆಹಚ್ಚಿದ ಚಿಗುರು ಕವಿಗಳು

7
ದಸರಾ ಕವಿಗೋಷ್ಠಿಯ ಮೊದಲ ಭಾಗವಾಗಿ ಚಿಗುರು ಕವಿಗೋಷ್ಠಿ

ದಸರಾ ಕವಿಗೋಷ್ಠಿ: ಸಾಮಾಜಿಕ ಸಮಸ್ಯೆಗೆ ಒರೆಹಚ್ಚಿದ ಚಿಗುರು ಕವಿಗಳು

Published:
Updated:
Deccan Herald

ಮೈಸೂರು: ಇಲ್ಲಿ ಸಾಮಾಜಿಕ ಸಮಸ್ಯೆಗಳ ಅನಾವರಣವಿತ್ತು. ಜಾತಿ ಪದ್ಧತಿಯ ಕ್ರೌರ್ಯ, ವೇಶ್ಯೆಯ ಪರಿಪಾಟಲು, ಮಳೆಯ ಅಬ್ಬರಿಂದ ಝರ್ಝರಿತವಾದ ಬದುಕು, ಅಮ್ಮನ ಪ್ರೀತಿ, ಸ್ವಾತಂತ್ರ್ಯದ ಅಭಿಲಾಷೆ... ಹೀಗೆ ಭಾವನೆಗಳನ್ನು ಅಕ್ಷರಗಳಲ್ಲಿ ಪ್ರಾಸದೊಂದಿಗೆ ಹಿಡಿದಿಡುವ ಪರಿಣಾಮಕಾರಿ ಪ್ರಯೋಗವೇ ಇತ್ತು.

ಇದು ನಾಡಹಬ್ಬ ದಸರಾ ಅಂಗವಾಗಿ ಶುಕ್ರವಾರ ಆರಂಭಗೊಂಡ ದಸರಾ ಕವಿಗೋಷ್ಠಿಯ ಮೊದಲ ಭಾಗವಾಗಿ ನಡೆದ ಚಿಗುರು ಕವಿಗೋಷ್ಠಿಯ ಚಿತ್ರಣ. 30ಕ್ಕೂ ಹೆಚ್ಚು ಚಿಗುರು ಕವಿಗಳು ತಮ್ಮ ಕವಿತಾ ಪ್ರತಿಭೆಯನ್ನು ಪ್ರದರ್ಶಿಸಿ ಕವಿಪ್ರೇಮಿಗಳಿಂದ ಮೆಚ್ಚುಗೆ ಗಳಿಸಿದರು.

ವಿದ್ಯಾರ್ಥಿನಿ ಶರಣ್ಯಾ ಮಳೆಯಿಂದ ತತ್ತರಿಸಿ ಕೊಡಗಿನ ಚಿತ್ರಣವನ್ನು ಕವಿತೆಯಲ್ಲಿ ನೀಡಿದರು. ‘ಮಿಂಚುತ್ತಿತ್ತು ಕನ್ನಡದ ಕಣ್ಮಣಿ ಕೊಡಗು, ಮೀರಿಸುವುದಿಲ್ಲ ಅದರ ಚೆಲುವ ಬೆಡಗು, ಮಿಡಿಯುತ್ತಿತ್ತು ದೇಶಕ್ಕಾಗಿ ಶ್ರೀಮಂತಿಕೆಯ ಕೊಡಗು ಮೀಸಲಿಟ್ಟಿತ್ತು ದೇಶಕ್ಕೆ ಯೋಧರಾ ನೀಡಿ. ಅನ್ನನೀಡಿ ದೇಶಕಾಯ್ದು ಮರೆಯುತ್ತಿತ್ತು ತನ್ಮತೆಯ ಭಾವದಲಿ ಕೊಡಗು, ಮುನಿಸು ಮಾಡಿದ ದೇವರಾರೋ ಯಾರೂ ಕಾಣರು. ಮಳೆಯು ಬಂತು ಬಿರಿದುಬೀಸಿ ದೇವನಾಡು ಕೊಡಗನು. ಕನ್ನಡದ ಕವಿಪುರುಷರ ನಾಡು ಕರಗಿಹೋಯ್ತು ನೀರಲ್ಲಿ. ಮುನಿಸೇಕೆ ಕಾವೇರಿ ನಿನ್ನದೇ ನಾಡಲ್ಲಿ. ಎದ್ದು ಬರುವೆವು ನಾವು ಕಟ್ಟಿ ತೀರುವೆವು ಕೊಡಗನ್ನು’ ಎಂದು ಗಟ್ಟಿತನವನ್ನು ತೋರಿದರು.

ಮೈಸೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಸಿ.ಅಂಕಿತಾ ಅವರಿಂದ ಶುರುವಾರ ‘ವಿಜ್ಞಾನ’ ಕವಿತೆ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಯಿತು.‘ಜೀವನದ ಹಂಗು ಕರೆಯದು ಎಂದೂ, ಸಾಯುವ ಕನಸು ಕಾಣದಿರೆಂದು, ಮುಂದುವರೆದೆ ವಿಜ್ಞಾನವೆಂದು, ಬದುಕಿಸುವೆ ನಾನೆಂದು’ ಎಂದು ಕವಿತೆ ವಾಚಿಸಿದರು.

‘ಮುಗಿಯದ ವರ್ಗ ವ್ಯವಸ್ಥೆ’ ಕವಿತೆ ವಾಚಿಸಿದ ಭಾರತೀಯ ವಿದ್ಯಾಭವನದ ವಿದ್ಯಾರ್ಥಿನಿ ಸಂಯಮ ಗಮನಸೆಳೆದರು. ‘ಬದಲಾಗುತ್ತಿದೆ ಕಾಲ ಬನ್ನಿ ಕೆಟ್ಟ ಬುದ್ಧಿ ಸ್ವಲ್ಪ ಇರಲಿ. ಮೋಸ ವಂಚನೆಯ ಜಾಗವಿದು, ನಿಷ್ಠೆ– ಮಾನವೀಯತೆಗೆ ಜಾಗವೆಲ್ಲಿ? ಜ್ಞಾನಿಯ ತುಳಿಯುವ ಕಾಲವಿದು, ಮಣಿಮಾಲೆ ಹಿಡಿದು ಕೂರೋಣ ಬನ್ನಿ. ಪಾಪಕ್ಕೆ ಹೋಮ ಮಾಡಿ, ಪ್ರಾಯಶ್ಚಿತ್ತಕ್ಕೆ ಶಾಂತಿ ಮಾಡಿ, ಶಾಂತಂ ಪಾಪಂ ಎನ್ನೋಣ ಬನ್ನಿ. ಎಲ್ಲಿರಿಂದ ಕಿತ್ತುತಿಂದು ಮಡಿ ಮಡಿ ಎಂದು ಹೇಳಿ ಬಿಡೋಣ ಬನ್ನಿ. ಸ್ವಾರ್ಥವೇ ಸಿದ್ಧಿಯಿಲ್ಲಿ, ಜಾತಿಯೇ ಮೂಲವಿಲ್ಲಿ’ ಎಂದು ಸಾಮಾಜಿಕ ವ್ಯವಸ್ಥೆಗೆ ಒರೆ ಹಚ್ಚಿದರು.

ತೇಜಸ್ವಿ ಬಂದರು ಆಲಿಸಲು...:

ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರನ್ನು ಕುರಿತು ವಿದ್ಯಾರ್ಥಿ ಎಂ.ಎಸ್.ಅರ್ಜುನ್‌ ಕವಿತೆ ವಾಚಿಸಿದ್ದು ವಿಶೇಷವಾಗಿತ್ತು. ‘ಹಕ್ಕಿಪುಕ್ಕದ ನಡುವೆ ಮಾಯಾಲೋಕವ ತೆರೆದು ಪರಿಸರವನ್ನು ಕತೆಯಾಗಿಸಿದರು. ಹಾಗೇ ತುಸು ಅಣ್ಣನೆಂದು ಮೆಲುಕು ಹಾಕಿದರು. ಪರಿಸರದ ಹೊಸಸ್ವರ ಮರೆಯಲಾಗದ ತೇಜಸ್ವಿ. ಜೀವನ ಸಂಗ್ರಾಮದಲ್ಲಿ ಕೃಷಿಯ ಕೈ ಹಿಡಿದರು. ನೆರೆಹೊರೆಯವರನ್ನು ಗೆಳೆಯರನ್ನಾಗಿಸಿ ಚಿದಂಬರನನ್ನು ರಹಸ್ಯಕ್ಕಿಟ್ಟರು ಪರಿಸರ ಕೃಷಿಕ ಮರೆಯಲಾಗದ ತೇಜಸ್ವಿ...’ ಎಂದು ಸ್ಮರಿಸಿದರು.

ಅಂತೆಯೇ, ರುಶಾಂತ್ ಗೌಡ ಅವರ ‘ಮಹಾಮಳೆ’, ಕೆ.ಎಂ.ಮಿಲನ ಅವರ ‘ಅವಳು’, ಲೇಖಾಮೂರ್ತಿ ಅವರ ‘ನನ್ನಮ್ಮ’, ತೇಜಸ್ ಅವರ ‘ವೇಶ್ಯೆ’, ಯಶಸ್ವಿನಿ ಅವರ ‘ಚಿನ್ನದ ಮೀನು’, ಸ್ನೇಹಾ ಅವರ ‘ಕನ್ನಡಾಂಬೆ’ ಸೇರಿದಂತೆ ಇತರ ಕವಿತೆಗಳು ಪ್ರಶಂಸೆಗೆ ಪಾತ್ರವಾದವು.

ಕವಿಗೋಷ್ಠಿಯಲ್ಲ ‘ಮಾತಿನ ಗೋಷ್ಠಿ’!

ಕವಿಗೋಷ್ಠಿಗೆ ಚಾಲನೆ ನೀಡಿದ ಹಿರಿಯ ಸಾಹಿತಿ ಪ್ರೊ.ಹಂಪಾ ನಾಗರಾಜಯ್ಯ ಮಾತನಾಡಿ, ಮಾತು ಕಡಿಮೆ ಇರಬೇಕು. ಆದರೆ, ಕೆಲವು ಸಾಹಿತಿಗಳಿಗೆ ಮೈಕು ಕೊಟ್ಟರೆ ಮಾತು ನಿಲ್ಲಿಸುವುದೇ ಇಲ್ಲ. ಮೈಕು ಕಿತ್ತುಕೊಂಡರೇ ನಿಲ್ಲಿಸುವುದು ಎಂದು ಹೇಳಿ ಚೊಕ್ಕವಾಗಿ ಮಾತು ಮುಗಿಸಿದರು.

ಆದರೆ, ಅವರ ನಂತರ ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ಹಂಪಾನಾ ಅವರ ಮಾತನ್ನು ಸತ್ಯವಾಗಿಸಿದರು.

ಮುಖ್ಯ ಅತಿಥಿಯಾಗಿದ್ದ ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮೈಕಿನ ಮಹಿಮೆಯನ್ನು ಸ್ಮರಿಸಿ ಒಂದು ಗಂಟೆಕಾಲ ಭಾಷಣ ಮಾಡಿದರು. ಇವರ ಬಳಿಕ ಚಿಗುರು ಕವಿಗೋಷ್ಠಿಯ ಅತಿಥಿಯಾಗಿದ್ದ ಸಾಹಿತಿ ಡಾ.ಟಿ.ಯಲ್ಲಪ್ಪ ಅವರೂ ಮುಕ್ಕಾಲು ಗಂಟೆ ಭಾಷಣ ಮಾಡಿದರು!

ಆದರೆ, ಚಿಗುರು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದ ಎಲ್ಲ 30 ಚಿಗುರು ಕವಿಗಳು ಚೊಕ್ಕವಾಗಿ ಕವಿತೆ ವಾಚಿಸಿ ಮುಕ್ಕಾಲು ಗಂಟೆಯೊಳಗೆ ಕಾರ್ಯಕ್ರಮ ಮುಗಿಸಿದರು. ಕವಿತಾವಾಚನಕ್ಕಿಂತ, ಭಾಷಣ ಪ್ರತಿಭೆಯೇ ಇಲ್ಲಿ ಪ್ರಧಾನವಾಯಿತು ಎಂದು ಕವಿತಾ ಪ್ರೇಮಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !