ಭಾನುವಾರ, ಸೆಪ್ಟೆಂಬರ್ 26, 2021
21 °C

ಸ್ವಚ್ಛ ಸರ್ವೇಕ್ಷಣಾ ಅಭಿಯಾನ; ಸ್ವಚ್ಛ ನಗರಿಯ ಪಟ್ಟಕ್ಕಾಗಿ ಸಜ್ಜು!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಲು ಮೈಸೂರು ಮಹಾನಗರ ಪಾಲಿಕೆ ಆಡಳಿತ ಸಜ್ಜಾಗಿದೆ. ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ.

2019–20ನೇ ಸಾಲಿನ ಮೂರು ತ್ರೈಮಾಸಿಕ ಪೂರ್ಣಗೊಂಡಿವೆ. ಜ.1ರಿಂದ ಕೊನೆಯ ತ್ರೈಮಾಸಿಕ ಚಾಲನೆ ಪಡೆದಿದೆ. ಈ ಅವಧಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಬಗ್ಗೆ ಮೈಸೂರಿಗರಲ್ಲಿ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಆಡಳಿತ ಮುಂದಾಗಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯ 65 ವಾರ್ಡ್‌ಗಳಲ್ಲೂ ಸ್ವಚ್ಛ ಸರ್ವೇಕ್ಷಣ್ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಕಲಾವಿದರ ತಂಡದಿಂದ ಬೀದಿ ನಾಟಕ ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ನಡೆದಿದೆ. ನಾಗರಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ‘ಸಿಟಿಜನ್ಸ್‌ ಫೀಡ್‌ಬ್ಯಾಕ್‌’ ನೀಡುವಂತೆ ಮನವಿ ಮಾಡಿಕೊಂಡಿದೆ.

6000 ಅಂಕ: ಸ್ವಚ್ಛ ನಗರಿ ಘೋಷಣೆಗೆ ಕೇಂದ್ರ ಸರ್ಕಾರ 6000 ಅಂಕಗಳನ್ನು ನಿಗದಿಪಡಿಸಿದೆ. ಯಾವ ನಗರ ಹೆಚ್ಚಿನ ಅಂಕ ಪಡೆಯುತ್ತದೆ, ಅದರಂತೆ ಸ್ವಚ್ಛ ನಗರಿಗಳ ಪಟ್ಟಿಯೂ ಪ್ರಕಟಗೊಳ್ಳಲಿದೆ ಎಂದು ಪಾಲಿಕೆಯ ಪರಿಸರ ಎಂಜಿನಿಯರ್ ಶ್ರೀಕಾಂತ್ ಮಾಹಿತಿ ನೀಡಿದರು.

‘ಪಾಲಿಕೆ ಆಡಳಿತದಿಂದ ನಾಗರಿಕರಿಗೆ ಒದಗಿಸುವ ಸೇವೆಗಳ ದಾಖಲಾತಿಯನ್ನು ಸಂಬಂಧಿಸಿದ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕು. ಇದು ವಿವಿಧ ಹಂತದಲ್ಲಿ ನಡೆಯಲಿದೆ. ಇದಕ್ಕೆ 1500 ಅಂಕವಿದೆ. ನಾಗರಿಕರು ತಮ್ಮ ಪ್ರದೇಶದ ಸ್ವಚ್ಛತೆ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಆನ್‌ಲೈನ್‌ನಲ್ಲಿ ನಿಗದಿಪಡಿಸಿದ ವೆಬ್‌ಸೈಟ್‌ನಲ್ಲಿ ತಮ್ಮ ಅಭಿಪ್ರಾಯ ದಾಖಲಿಸಬೇಕು. ಇದಕ್ಕೂ 1500 ಅಂಕ ನಿಗದಿಯಾಗಿದೆ. ಸಿಟಿಜನ್ಸ್‌ ಫೀಡ್‌ಬ್ಯಾಕ್‌ಗಾಗಿಯೇ ಪಾಲಿಕೆ ಆಡಳಿತ, ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಂಘಟನೆಗಳ ಮುಖ್ಯಸ್ಥರ ಮೊರೆ ಹೋಗಲಾಗಿದೆ’ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

‘ಕಸ ಮುಕ್ತ ನಗರಿಗೆ ಹಾಗೂ ಬಯಲು ಶೌಚ ಮುಕ್ತ ನಗರಿಗೆ 1500 ಅಂಕವಿದೆ. ಸ್ವಚ್ಛ ನಗರಿ ಘೋಷಿಸುವ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ತಂಡ ಆಯಾ ನಗರಕ್ಕೆ ಭೇಟಿ ನೀಡಿ, ಸ್ಥಳ ವೀಕ್ಷಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಲಿದೆ. ಇದಕ್ಕೂ 1500 ಅಂಕ ನಿಗದಿಯಾಗಿವೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು